Advertisement
ಜಿಎಸ್‌ಟಿ ಜಾರಿಯಾಗಿ ವಾರ ಕಳೆದರೂ ವಿವಿಧ ವಸ್ತುಗಳ ಖರೀದಿದಾರರು ಇನ್ನೂ ಹೊಸ ತೆರಿಗೆ ವ್ಯವಸ್ಥೆಗೆ ನೋಂದಣಿ ಮಾಡಿಕೊಂಡಿಲ್ಲ. ಮತ್ತೂಂದೆಡೆ ಹೊಸ ಪದ್ಧತಿಯನ್ನು ಅಳವಡಿಸಿಕೊಳ್ಳುವಲ್ಲಿಯೂ ತಡವಾಗಿದೆ. ಇದರ ಪರಿಣಾಮ ಮಾರುಕಟ್ಟೆಯಲ್ಲಿ ಅನೇಕ ವಸ್ತುಗಳ ಬೇಡಿಕೆ ಕುಸಿದಿದೆ. ಇದರಿಂದ ಲಾರಿಗಳನ್ನು ಕೇಳ್ಳೋರಿಲ್ಲದಂತಾಗಿದ್ದು, ರಾಜ್ಯದಲ್ಲಿ ಸಣ್ಣ ಮತ್ತು ದೊಡ್ಡ ಗಾತ್ರದ ಸಹಸ್ರಾರು ಲಾರಿಗಳ ಓಡಾಟ ಸ್ಥಗಿತಗೊಂಡಿವೆ.
ಉತ್ಪಾದಕರು ತಮ್ಮ ವಸ್ತುಗಳ ಮಾರಾಟಕ್ಕೆ ಸಿದ್ಧರಿದ್ದಾರೆ. ಆದರೆ, ಖರೀದಿದಾರರು ನೋಂದಣಿ ಮಾಡಿಕೊಂಡಿಲ್ಲ. ಅಂತಹವರಿಗೆ ಸ್ವತಃ ಉತ್ಪಾದಕರೇ ತಮ್ಮ ಹೆಸರಿನಲ್ಲಿ ತೆರಿಗೆ ಪಾವತಿಸಿ, ಖರೀದಿದಾರರಿಗೆ ಉತ್ಪನ್ನಗಳನ್ನು ಪೂರೈಕೆ ಮಾಡಬೇಕಾದ ಸ್ಥಿತಿ ಇದೆ. ಇನ್ನು ಕೆಲವು ಉತ್ಪಾದಕರು ವ್ಯಾಟ್, ಸಿಎಸ್‌ಟಿ, ಪ್ರವೇಶ ತೆರಿಗೆ ಸೇರಿದಂತೆ ಹಿಂದಿನ ವ್ಯವಸ್ಥೆಯಲ್ಲೇ ಇದ್ದಾರೆ. ಹೊಸ ವ್ಯವಸ್ಥೆಗೆ ಒಗ್ಗಿಕೊಳ್ಳಲು ತುಸು ಸಮಯ ಹಿಡಿಯುತ್ತಿದೆ. ಹಾಗಾಗಿ, ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಲಾರಿಗಳಿಗೆ ಸಾಗಣೆ ಮಾಡಲು ಸರಕುಗಳೇ ಇಲ್ಲದಂತಾಗಿದೆ ಎಂದು ಕರ್ನಾಟಕ ರೋಡ್‌ಲೈನ್ಸ್ ಮುಖ್ಯಸ್ಥ ಮಹೇಂದ್ರ ತಿಳಿಸುತ್ತಾರೆ. “ನಮ್ಮ ಕಂಪನಿಯಲ್ಲೇ 50ಕ್ಕೂ ಹೆಚ್ಚು ಲಾರಿಗಳು ಇವೆ. ಅವುಗಳಲ್ಲಿ ಶೇ.50ರಷ್ಟು ಲಾರಿಗಳು ರಸ್ತೆಗಿಳಿದಿಲ್ಲ. ಇದೇ ರೀತಿ ರಾಜ್ಯಾದ್ಯಂತ ಸಾವಿರಾರು ಲಾರಿಗಳು ಸ್ತಬ್ಧಗೊಂಡಿವೆ’ ಎಂದು ಮಹೇಂದ್ರ ಹೇಳುತ್ತಾರೆ.
Related Articles
“ಉಕ್ಕು, ಟೂತ್‌ಪೇಸ್ಟ್, ಸೋಪು, ಸಕ್ಕರೆ ಸೇರಿದಂತೆ ಅನೇಕ ಪ್ರಮುಖ ಉತ್ಪನ್ನಗಳ ಸಾಗಣೆ ಮಾಡುವ ಲಾರಿಗಳು ಕಳೆದ ಮೂರ್‍ನಾಲ್ಕು ದಿನಗಳಿಂದ ಸಂಚಾರ ಸ್ಥಗಿತಗೊಳಿಸಿವೆ. ಟ್ರಾನ್ಸ್‌ಪೊàರ್ಟರ್ಗಳನ್ನು ಕೇಳಿದರೆ, ಇನ್ನೂ ಜಿಎಸ್‌ಟಿ ಗೊಂದಲ ಬಗೆಹರಿದಿಲ್ಲ. ಒಂದೆರಡು ದಿನಗಳ ಕಾಯಿರಿ ಎಂಬ ಉತ್ತರ ಬರುತ್ತದೆ. ಹಾಗಾಗಿ, ರಾಜ್ಯದಲ್ಲಿ ಲಕ್ಷಕ್ಕೂ ಅಧಿಕ ಸರಕು ಸಾಗಣೆ ವಾಹನಗಳು ನಿಂತಿವೆ’ ಎಂದು ಲಾರಿ ಮಾಲಿಕರ ಸಂಘದ ಪ್ರಧಾನ ಕಾರ್ಯದರ್ಶಿ ಗೋಪಾಲಸ್ವಾಮಿ ಅಲವತ್ತುಕೊಳ್ಳುತ್ತಾರೆ.ಜಿಎಸ್‌ಟಿ ಜಾರಿಯಾದ ನಂತರ ರಾಷ್ಟ್ರೀಯ ಹೆದ್ದಾರಿಗಳಲ್ಲಿದ್ದ ವಾಣಿಜ್ಯ ತೆರಿಗೆ ಕೇಂದ್ರಗಳನ್ನು ತೆರವುಗೊಳಿಸಲಾಗಿದೆ.
Advertisement
ಇದರಿಂದ ತುಂಬಿದ ಲಾರಿಗಳ ಸರಾಗ ಸಾಗಣೆಗೆ ಸಹಕಾರಿಯಾಗಿದೆ. ಆದರೆ, ವ್ಯಾಪಾರಸ್ಥರು ಹೊಸ ಸರಕು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಇದ್ದ ಮಾಲುಗಳನ್ನೇ ಖಾಲಿ ಮಾಡಲು ಅವರು ಹೆಚ್ಚು ಒತ್ತು ನೀಡುತ್ತಿದ್ದಾರೆ. ಇದರಿಂದ ನಗರಕ್ಕೆ ಬರುವ ಲಾರಿಗಳ ಸಂಖ್ಯೆ ಕಡಿಮೆಯಾಗಿದ್ದು, ನಿತ್ಯ ಹತ್ತು ಸಾವಿರಕ್ಕೂ ಅಧಿಕ ಲಾರಿಗಳು ನಗರಕ್ಕೆ ಬರುತ್ತವೆ. ಈ ಪೈಕಿ ಈಗ ಎಂಟು ಸಾವಿರ ಲಾರಿಗಳು ಬರುತ್ತಿವೆ ಎಂದು ಅವರು ಹೇಳುತ್ತಾರೆ.