ನವದೆಹಲಿ: ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಸಂಗ್ರಹ ದಾಖಲೆಯ ಏಳನೇ ಬಾರಿಗೆ 1.4 ಲಕ್ಷ ಕೋಟಿ ರೂ. ತಲುಪಿದ್ದು, ಕರ್ನಾಟಕ ಎರಡನೇ ಸ್ಥಾನದಲ್ಲಿದೆ.
2022ರ ಸೆಪ್ಟೆಂಬರ್‌ನಲ್ಲಿ ಸರ್ಕಾರ 1,47,686 ಕೋಟಿ ರೂ. ಜಿಎಸ್‌ಟಿ ಸಂಗ್ರಹಿಸಿದೆ. ಕಳೆದ ವರ್ಷದ ಸೆಪ್ಟೆಂಬರ್‌ಗೆ ಹೋಲಿಸಿದರೆ ಜಿಎಸ್‌ಟಿ ಸಂಗ್ರಹದಲ್ಲಿ ಶೇ.26ರಷ್ಟು ಏರಿಕೆಯಾಗಿದೆ.
2021ರ ಸೆಪ್ಟೆಂಬರ್‌ನಲ್ಲಿ 1,17,010 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು. ಇನ್ನೊಂದೆಡೆ 2022ರ ಸೆಪ್ಟೆಂಬರ್ ನಲ್ಲಿ ರಾಜ್ಯದಲ್ಲಿ 9,760 ಕೋಟಿ ರೂ. ಸಂಗ್ರಹವಾಗಿದೆ. 21,403 ಕೋಟಿ ರೂ. ಜಿಎಸ್‌ಟಿ ಸಂಗ್ರಹದ ಮೂಲಕ ಮಹಾರಾಷ್ಟ್ರ ಅಗ್ರ ಸ್ಥಾನದಲ್ಲಿದೆ.
ಸೆಪ್ಟೆಂಬರ್ ತಿಂಗಳ ಜಿಎಸ್‌ಟಿ ಸಂಗ್ರಹದಲ್ಲಿ ಸಿಜಿಎಸ್‌ಟಿ ಪಾಲು 25,271 ಕೋಟಿ ರೂ., ಸಿಜಿಎಸ್‌ಟಿ ಪಾಲು 31,813 ಕೋಟಿ ರೂ., ಐಜಿಎಸ್‌ಟಿ ಪಾಲು 80,464 ಕೋಟಿ ರೂ. (ಆಮದು ಸಂಗ್ರಹ ಸೇರಿ) ಹಾಗೂ ಸೆಸ್ ಪಾಲು 10,137 ಕೋಟಿ ರೂ. ಇದೆ.
ಸೆಪ್ಟೆಂಬರ್ ಅಂಕಿ-ಅಂಶವು ತೆರಿಗೆ ಸಂಗ್ರಹದಲ್ಲಿ ಚೇತರಿಕೆ ಮತ್ತು ಜಿಎಸ್‌ಟಿ ನೆಟ್‌ವರ್ಕ್ ಸ್ಥಿರವಾಗಿದೆ ಎಂಬುದನ್ನು ಸೂಚಿಸುತ್ತದೆ. ಸದ್ಯ ಸರಣಿ ಹಬ್ಬಗಳು ಇರುವುದರಿಂದ ಜಿಎಸ್‌ಟಿ ಸಂಗ್ರಹದಲ್ಲಿ ಈ ತಿಂಗಳು ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.
ತೆರಿಗೆ ವ್ಯವಸ್ಥೆಯಲ್ಲಿ ಸುಧಾರಣೆ ಕಾರಣದಿಂದ ಜಿಎಸ್‌ಟಿ ಸಂಗ್ರಹದಲ್ಲಿ ಏರಿಕೆಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.