ಹೊಸದಿಲ್ಲಿ: ಸತತ 3ನೇ ಬಾರಿಗೆ ದೇಶದ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಸಂಗ್ರಹ 1.50 ಲಕ್ಷ ಕೋಟಿ ರೂ. ದಾಟಿದ್ದು, ಮೇ ತಿಂಗಳಲ್ಲಿ 1.57 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ. ದೇಶದ ಜಿಡಿಪಿ ಶೇ. 7.2ರ ಪ್ರಗತಿ ದಾಖಲಿಸಿದ ಸಿಹಿ ಸುದ್ದಿಯ ಬೆನ್ನಲ್ಲೇ ಜಿಎಸ್‌ಟಿ ಅಂಕಿಅಂಶವೂ ಹೊರಬಿದ್ದಿದ್ದು, ಎಲ್ಲ ರಾಜ್ಯಗಳೂ ಅರ್ಥಿಕವಾಗಿ ಉತ್ತಮ ಸಾಧನೆ ತೋರಿರುವುದನ್ನು ಪ್ರತಿಬಿಂಬಿಸಿದೆ.
ವಿಶೇಷವೆಂದರೆ ಈ ಬಾರಿಯೂ ಜಿಎಸ್‌ಟಿ ಆದಾಯದಲ್ಲಿ ಕರ್ನಾಟಕ 2ನೇ ಸ್ಥಾನ ಉಳಿಸಿಕೊಂಡಿದೆ. ಮೊದಲ ಸ್ಥಾನದಲ್ಲಿರುವ ಮಹಾರಾಷ್ಟ್ರ 23,536 ಕೋಟಿ ರೂ. ಜಿಎಸ್‌ಟಿ ಸಂಗ್ರಹಿಸಿದ್ದರೆ, ಕರ್ನಾಟಕ 10,317 ಕೋಟಿ ರೂ. ಸಂಗ್ರಹಿಸಿದೆ.
ದೇಶಾದ್ಯಂತ ಮೇ ತಿಂಗಳಲ್ಲಿ ಸಂಗ್ರಹವಾದ ಒಟ್ಟು ಜಿಎಸ್‌ಟಿ 1,57,090 ಕೋಟಿ ರೂ.ಗಳು. ಈ ಪೈಕಿ ಕೇಂದ್ರ ಜಿಎಸ್‌ಟಿ 28,411 ಕೋಟಿ ರೂ.ಗಳಾದರೆ, ರಾಜ್ಯ ಜಿಎಸ್‌ಟಿ 35,828 ಕೋಟಿ ರೂ.ಗಳು, ಐಜಿಎಸ್‌ಟಿ 81,363 ಕೋಟಿ ರೂ.ಗಳು ಮತ್ತು ಸೆಸ್ ರೂಪದಲ್ಲಿ 11,489 ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿದೆ ಎಂದು ಕೇಂದ್ರ ವಿತ್ತ ಸಚಿವಾಲಯ ತಿಳಿಸಿದೆ.
ಕಳೆದ ವರ್ಷದ ಮೇ ತಿಂಗಳಿಗೆ ಹೋಲಿಸಿದರೆ ಈ ಬಾರಿ ಜಿಎಸ್‌ಟಿ ಆದಾಯ ಶೇ. 12ರಷ್ಟು ಹೆಚ್ಚಳವಾಗಿದೆ. ಪ್ರಸಕ್ತ ವರ್ಷದ ಎಪ್ರಿಲ್‌ನಲ್ಲಿ ಜಿಎಸ್‌ಟಿ ಸಂಗ್ರಹವು ದಾಖಲೆಯ 1.87 ಲಕ್ಷ ಕೋಟಿ ರೂ. ಸಂಗ್ರಹವಾಗಿತ್ತು. ಮಾರ್ಚ್‌ನಲ್ಲಿ ಇದು 1.60 ಲಕ್ಷ ಕೋಟಿ ರೂ. ಆಗಿತ್ತು.