ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಸಂಗ್ರಹದಲ್ಲಿ ಮತ್ತೆ ದಾಖಲೆ ಸೃಷ್ಟಿಯಾಗಿದೆ. ಅಕ್ಟೋಬರ್ ತಿಂಗಳಲ್ಲಿ 1.52 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದ್ದು, ಈವರೆಗಿನ 2ನೇ ಅತ್ಯಧಿಕ ಸಂಗ್ರಹ ಇದಾಗಿದೆ. ಹಬ್ಬದ ಋತುವಿನಲ್ಲಿ ಆರ್ಥಿಕ ಚಟುವಟಿಕೆಗಳು ಚೇತರಿಸಿಕೊಂಡಿದ್ದನ್ನು ಇದು ಪ್ರತಿಬಿಂಬಿಸಿದೆ.
ಕಳೆದ ವರ್ಷದ ಅಕ್ಟೋಬರ್‌ನಲ್ಲಿ 1.30 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು. ಪ್ರಸಕ್ತ ವರ್ಷ ಇದು ಶೇ.16.6ರಷ್ಟು ಏರಿಕೆ ಕಂಡಿದೆ.
ಏಪ್ರಿಲ್ ತಿಂಗಳಲ್ಲಿ 1.68 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹದ ಮೂಲಕ ಸಾರ್ವಕಾಲಿಕ ದಾಖಲೆ ಸೃಷ್ಟಿಯಾಗಿತ್ತು. ಸೆಪ್ಟೆಂಬರ್ ತಿಂಗಳಲ್ಲಿ ಅದು 1.48 ಲಕ್ಷ ಕೋಟಿ ರೂ. ಆಗಿತ್ತು.
ಅಕ್ಟೋಬರ್‌ನಲ್ಲಿ ಒಟ್ಟಾರೆ 1,51,718 ಕೋಟಿ ರೂ. ಸಂಗ್ರಹವಾಗಿದೆ. ಈ ಪೈಕಿ 26,039 ಕೋಟಿ ರೂ. ಕೇಂದ್ರ ಜಿಎಸ್‌ಟಿಯಾದರೆ, 33,393 ಕೋಟಿ ರೂ. ರಾಜ್ಯ ಜಿಎಸ್‌ಟಿ ಮತ್ತು 81,778 ಕೋಟಿ ರೂ. ಸಮಗ್ರ ಜಿಎಸ್‌ಟಿಯಾಗಿದೆ. 10,506 ಕೋಟಿ ರೂ. ಸೆಸ್ ಸಂಗ್ರಹವಾಗಿದೆ ಎಂದು ಸರ್ಕಾರದ ಅಧಿಕೃತ ಅಂಕಿಅಂಶ ತಿಳಿಸಿದೆ.
ಸತತ 8 ತಿಂಗಳಿಂದ ಜಿಎಸ್‌ಟಿ ಸಂಗ್ರಹ ಮೊತ್ತವು 1.40 ಲಕ್ಷಕ್ಕಿಂತಲೂ ಹೆಚ್ಚಿದ್ದು, ಎರಡು ಬಾರಿ ಇದು 1.50 ಲಕ್ಷ ಕೋಟಿ ರೂ.ಗಳ ಗಡಿ ದಾಟಿದೆ.