ಬೆಂಗಳೂರು: ನವ್ಯ ಸಾಹಿತ್ಯದ ಕಾಲದಲ್ಲಿ ಕವಿತೆಗಳನ್ನು ಹಾಡುವುದಕ್ಕಾಗಿ ಬರೆಯುತ್ತಾರೆ ಎಂಬ ಅಪವಾದ ಇತ್ತು ಎಂದು ಕುವೆಂಪು ಭಾಷಾಭಾರತಿ ಮಾಜಿ ಅಧ್ಯಕ್ಷ ಡಾ.ಕೆ.ಮರುಳಸಿದ್ದಪ್ಪ ಅಭಿಪ್ರಾಯಪಟ್ಟರು.
ಸದಾ ಸಂಗೀತ ಧಾಮ ಟ್ರಸ್ಟ್ ಸೋಮವಾರ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಏರ್ಪಡಿಸಿದ್ದ “ನೆನಪಿನಂಗಳದಲ್ಲಿ ಜಿಎಸ್‌ಎಸ್’ ಕಾರ್ಯಕ್ರಮದಲ್ಲಿ ಮಾತ ನಾಡಿ, ಅಪವಾದದ ನಡುವೆಯೂ ಕವಿತೆಯನ್ನು ಹಾಡಲು ಜಿಎಸ್‌ಎಸ್ ಸೇರಿ ಅನೇಕರು ಗಾಯಕರಿಗೆ ಪ್ರೋತ್ಸಾಹಿಸಿದ್ದರು ಎಂದು ತಿಳಿಸಿದರು.
ಕುವೆಂಪು, ದ.ರಾ.ಬೇಂದ್ರೆ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಪು.ತಿ.ನ, ಜಿಎಸ್‌ಎಸ್ ಅವರು ಹಾಡುವುದಕ್ಕಾಗಿ ಕವಿತೆ ಬರೆಯಲಿಲ್ಲ. ಆದರೂ, ನೂರಾರು ಜನರು ಹಾಡುವ ಮೂಲಕ ಅವರ ಕವಿತೆಗಳನ್ನು ಜನಪ್ರಿಯಗೊಳಿಸಿದರು ಎಂದರು. ಗಾಯಕ ವೈ.ಕೆ.ಮುದ್ದುಕೃಷ್ಣ ಮಾತನಾಡಿ, ಜಿಎಸ್‌ಎಸ್ ಅವರ ಕವನ ಓದುತ್ತಾ ಹೋಗುವಾಗ ಆಳವಾದ ಭಾವನೆ ತಿಳಿಯುತ್ತದೆ.
ಅವರು ಬರೆದಿರುವ “ಜಟಿಲ ಕಾನನದಿ ಕುಟಿಲ ಪಥದಲ್ಲಿ ಹಂಬಲಿಸಿದೆ ನಾನು’ ಎಂಬ ವಾಕ್ಯ ಬಹಳ ಶೋಷಿತ ವರ್ಗ ಮುಖ್ಯವಾಹಿನಿಗೆ ಬರುವ ಕುರಿತು ತಿಳಿಸುತ್ತದೆ. ಕಾವ್ಯವನ್ನು ಕವಿ ಸೃಷ್ಟಿಯಾದರೆ, ಅದನ್ನು ಮರು ಸೃಷ್ಟಿ ಮಾಡುವುದು ಗಾಯಕ. ಇಡೀ ಕರ್ನಾಟಕಕ್ಕೆ ಸುಗಮ ಸಂಗೀತ ಪರಿಚಯಿಸಿದ ಕೀರ್ತಿ ಜಿಎಸ್‌ಎಸ್ ಅವರಿಗೆ ಸಲ್ಲುತ್ತದೆ ಎಂದರು. ಜಿಎಸ್‌ಎಸ್ ಹೆಸರಲ್ಲಿ ಸರ್ಕಾರ ಕೊತ್ತನೂರು ದಿಣ್ಣೆಯಲ್ಲಿ ಒಂದೂವರೆ ಎಕರೆ ಜಾಗ ಮೀಸಲಿಟ್ಟಿದ್ದು, ಜಿಎಸ್‌ಎಸ್ ಟ್ರಸ್ಟ್ ವತಿಯಿಂದ ಆ ಸ್ಥಳದಲ್ಲಿ ಶಾಶ್ವತ ಕಟ್ಟಡ, ವಸ್ತು ಸಂಗ್ರಹಾಲಯ ನಿರ್ಮಿಸಲಾಗುವುದು ಎಂದರು.
ಇದೇ ವೇಳೆ ರಾಷ್ಟ್ರಕವಿ ಜಿಎಸ್‌ಎಸ್ ವಿರಚಿತ ಮೃತ್ಯುಂಜಯ ದೊಡ್ಡವಾಡ್ ರಾಗ ಸಂಯೋಜನೆಯ “ಹಂಬಲ’ ಭಾವಗೀತೆಗಳು ಹಾಗೂ ದೇಶಭಕ್ತಿ ಗೀತೆಗಳ ಧ್ವನಿಸಾಂದ್ರಿಕೆ ಬಿಡುಗಡೆಗೊಳಿಸಲಾಯಿತು. ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗಾರ ಮಹಾದೇವ್ ಪ್ರಕಾಶ್ ಇತರರಿದ್ದರು.