ಮೈಸೂರು: ಕಾಂಗ್ರೆಸ್ ಚುನಾವಣ ಪೂರ್ವ ಗ್ಯಾರಂಟಿ ಗಳಲ್ಲಿ ಒಂದಾದ ‘ಗೃಹ ಲಕ್ಷ್ಮೀ’ ಯೋಜನೆಗೆ ಬುಧವಾರ ಚಾಲನೆ ನೀಡಲಾಯಿತು. ಮನೆಯ ಯಜಮಾನಿಯರಾಗಿರುವ ಸುಮಾರು 1.9 ಕೋಟಿ ಮಹಿಳೆಯರ ಖಾತೆಗಳಿಗೆ ಮಾಸಿಕ 2,000 ರೂ. ಜಮೆಯಾಗಲಿದೆ.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿ ಸಾವಿರಾರು ಜನರು ಪಾಲ್ಗೊಂಡಿದ್ದರು.
ನಮ್ಮ ಸರ್ಕಾರ ರಾಜ್ಯದಲ್ಲಿ ಆಡಳಿತಕ್ಕೆ ಬರುತ್ತಿದ್ದಂತೆ ಭರವಸೆ ನೀಡಿದ 5 ಗ್ಯಾರಂಟಿಗಳಲ್ಲಿ 4 ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ನುಡಿದಂತೆ ನಡೆಯುತ್ತಿದೆ. ಪ್ರತಿ ಕುಟುಂಬದ ಅಭಿವೃದ್ಧಿಯ ಬೇರು ಎಂಬಂತಿರುವ ಮಹಿಳೆಯರಿಗೆ ಮತ್ತಷ್ಟು ಶಕ್ತಿ ತುಂಬುವ ಉದ್ದೇಶವನ್ನು ಗೃಹಲಕ್ಷ್ಮೀ ಯೋಜನೆ ಹೊಂದಿದೆ. ಹಾಗಾಗಿ, ಗೃಹಲಕ್ಷ್ಮೀ ಯು ನಮ್ಮ ಯೋಜನೆಯಲ್ಲ, ಇದು ನಿಮ್ಮ ಯೋಜನೆ. ರಕ್ಷಾ ಬಂಧನ ಹಬ್ಬದಂದು ನಮ್ಮ ರಾಜ್ಯದ ಹೆಣ್ಣುಮಕ್ಕಳಿಗೆ ನಾವು ‘ಗೃಹಲಕ್ಷ್ಮಿ’ಯನ್ನು ಕೊಡುಗೆಯಾಗಿ ಕೊಟ್ಟಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದರು.
ಕರ್ನಾಟಕದಲ್ಲಿ ಪಕ್ಷ ಅಧಿಕಾರಕ್ಕೆ ಬಂದ 100 ದಿನಗಳ ಸಂಭ್ರಮ ಆಚರಿಸುತ್ತಿದ್ದು, ನಾಲ್ಕು ಗ್ಯಾರಂಟಿಗಳನ್ನು ಘೋಷಿಸುವ ಮೂಲಕ ನುಡಿದಂತೆ ನಡೆದಿದ್ದೇವೆ. ಬೆಲೆಯೇರಿಕೆಯಿಂದ ನಲುಗಿರುವ ಜನಸಾಮಾನ್ಯರ ಮೇಲಿನ ಹೊರೆ ಇಳಿಸಲು ಕಾಂಗ್ರೆಸ್ ಸರ್ಕಾರ ಮಹತ್ವದ ಗ್ಯಾರಂಟಿಗಳನ್ನು ಜಾರಿಗೆ ತಂದಿದೆ ಎಂದು ಕಾಂಗ್ರೆಸ್ ಹೇಳಿದೆ.
ಈಗಾಗಲೇ ಶಕ್ತಿ ಯೋಜನೆಯ ಮೂಲಕ ಮಹಿಳೆಯರು ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಗೃಹ ಜ್ಯೋತಿ ಯೋಜನೆಯ ಮೂಲಕ 200 ಯೂನಿಟ್‌ವರೆಗೂ ಉಚಿತ ವಿದ್ಯುತ್ ಪಡೆಯುತ್ತಿದ್ದಾರೆ. ಅನ್ನಭಾಗ್ಯದ ಮೂಲಕ ಬಡ ಕುಟುಂಬದ ಪ್ರತೀ ಸದಸ್ಯರೂ ತಲಾ 10 ಕೆಜಿ ಅಕ್ಕಿ ಪಡೆಯುತ್ತಿದ್ದಾರೆ. ಇದೀಗ ಗೃಹಲಕ್ಷ್ಮಿ ಯೋಜನೆಯ ಮೂಲಕ ಮನೆಯ ಯಜಮಾನಿಯರು ಮಾಸಿಕ 2ಸಾವಿರ ರೂ. ಪಡೆಯಲಿದ್ದಾರೆ.
ಇಂತಹ ಗ್ಯಾರಂಟಿ ಯೋಜನೆಗಳು ದೇಶದ ಇನ್ಯಾವ ರಾಜ್ಯಗಳಲ್ಲೂ ಜಾರಿಯಾಗಿಲ್ಲ. ಹಾಗಾಗಿ ಇದು ಕರ್ನಾಟಕದ ಮಾದರಿಯಾಗಿದೆ. ಇನ್ನಷ್ಟು ಜನಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದು ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡಲಾಗುವುದು ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ‘ಗೃಹ ಲಕ್ಷ್ಮೀ’ ಯೋಜನೆಗೆ ಸರಕಾರ 17,500 ಕೋಟಿ ರೂ.ಮೀಸಲಿಟ್ಟಿದೆ.