ಬೆಂಗಳೂರು: ರಾಜ್ಯ ಸರ್ಕಾರದ ಗೃಹಜ್ಯೋತಿ ಯೋಜನೆಯ ಬಗ್ಗೆ ಹಲವು ಗೊಂದಲಗಳು ಎದುರಾಗಿದೆ. ಈ ಹಿಂದಿನ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಬಾಡಿಗೆದಾರರಿಗೂ ಉಚಿತ ವಿದ್ಯುತ್ ಸಿಗಲಿದೆ ಎಂದು ಹೇಳಿದ್ದರು. ಆದರೆ ಸೋಮವಾರ ಬಿಡುಗಡೆಯಾದ ಮಾರ್ಗಸೂಚಿಯಲ್ಲಿ ‘ಒಬ್ಬರ ಹೆಸರಿನಲ್ಲಿ ಎಷ್ಟೇ ಆರ್ ಆರ್ ಸಂಖ್ಯೆಗಳಿದ್ದರೂ ಒಂದಕ್ಕೆ ಮಾತ್ರ ಸೌಲಭ್ಯ ಲಭ್ಯವಾಗಲಿದೆ’ ಎಂದು ನಮೂದಿಸಲಾಗಿತ್ತು. ಹೀಗಾಗಿ ಬಾಡಿಗೆದಾರರಿಗೆ ಉಚಿತ ವಿದ್ಯುತ್ ಸಿಗುವ ಬಗ್ಗೆ ಗೊಂದಲ ಉಂಟಾಗಿತ್ತು.
ಇದೀಗ ಕರ್ನಾಟಕ ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಟ್ವೀಟ್ ಮಾಡಿ ಗೊಂದಲ ನಿವಾರಿಸುವ ಕೆಲಸ ಮಾಡಿದೆ.
ನಮ್ಮ ಗ್ಯಾರಂಟಿ ಯೋಜನೆಗಳು ಸಮಾಜ ಕಲ್ಯಾಣದ ಕಾರ್ಯಕ್ರಮಗಳಾಗಿವೆ. ಗೃಹಜ್ಯೋತಿ ಯೋಜನೆಯು ಬಾಡಿಗೆ ಮನೆಯಲ್ಲಿ ವಾಸಿಸುವವರಿಗೂ ಅನ್ವಯವಾಗಲಿದೆ. ಕೆಲವು ಮಾಧ್ಯಮಗಳು ಹಾಗೂ ಬಿಜೆಪಿ ತಪ್ಪು ಅಭಿಪ್ರಾಯ ಮೂಡಿಸುತ್ತಿದ್ದು, ಸಾರ್ವಜನಿಕರು ಅದಕ್ಕೆ ಬಲಿಯಾಗಬಾರದು ಎಂದಿದೆ.
ಬಾಡಿಗೆ ಮನೆಯ ವಾಸಿಗಳು ಈ ಕೆಳಕಂಡ ಮಾರ್ಗಸೂಚಿಯನ್ನು ಅನುಸರಿಸಿ ಯೋಜನೆಯ ಪ್ರಯೋಜನ ಪಡೆಯಬಹುದು.
1 ವಾಸವಿರುವ ಮನೆಯ ಆರ್ ಆರ್ ಸಂಖ್ಯೆಯೊಂದಿಗೆ ತಮ್ಮ ಆಧಾರ್ ಲಿಂಕ್ ಮಾಡಬೇಕು.
2 ಇದಕ್ಕೆ ಬಾಡಿಗೆ ಮನೆಯ ಕರಾರು ಪತ್ರ (Contract letter) ವನ್ನು ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಬೇಕು.
3 ಒಂದು ದಾಖಲೆಯನ್ನು ಒಂದು ಮೀಟರ್ ನೊಂದಿಗೆ ಮಾತ್ರ ಲಿಂಕ್ ಮಾಡಲು ಅವಕಾಶ.
4 ಮನೆ ಬದಲಾಯಿಸಿದರೆ, ಹಿಂದಿನ ಮನೆಯ ಮೀಟರ್ ನೊಂದಿಗಿನ ಲಿಂಕ್ ತೆಗೆಯಬೇಕು.
5 ಹೊಸ ಬಾಡಿಗೆ ಮನೆಯ ಆರ್ ಆರ್ ನಂಬರ್ ಮತ್ತು ಆಧಾರ್ ಕಾರ್ಡ್ ಮತ್ತೊಮ್ಮೆ ಲಿಂಕ್ ಮಾಡಬೇಕು.
ಸ್ವಂತ ಮನೆಯವರು ಈ ರೀತಿ ಮಾಡಬೇಕು
1 ಆರ್ ಆರ್ ನಂಬರ್ ನೊಂದಿಗೆ ಆಧಾರ್ ಲಿಂಕ್ ಮಾಡಬೇಕು.
2 ಒಂದಕ್ಕಿಂತ ಹೆಚ್ಚು ಮನೆಯಿದ್ದರೆ ಒಂದು ಮನೆಗೆ ಮಾತ್ರ ಅವಕಾಶ.
3 ಎರಡು ಮೀಟರ್ ಹೊಂದಿದ್ದರೆ ಯಾವುದಾದರೂ ಒಂದಕ್ಕೆ ಮಾತ್ರ ಸೌಲಭ್ಯ ಲಭ್ಯ.