ಉಪ್ಪಿನಂಗಡಿ/ಮಂಗಳೂರು: ಗೃಹ ಜ್ಯೋತಿ ಯೋಜನೆಯಡಿ ವಿದ್ಯುತ್ ಬಳಕೆದಾರರಿಗೆ “ಉಚಿತ’ ಎಂದು ಸರಕಾರ ಪ್ರಕಟಿಸಿದರೂ ಹಲವು ಮಂದಿಗೆ ಈ ಬಾರಿಯೂ ಹಿಂದಿನಂತೆಯೇ ಬಿಲ್ ಬಂದಿದೆ!
ಚುನಾವಣೆಗೂ ಮುನ್ನ 200 ಯುನಿಟ್ ವರೆಗೆ ಎಲ್ಲರಿಗೂ ಉಚಿತ ಎಂದು ತಿಳಿಸಿದ್ದರೂ ಈಗ ಮಾತ್ರ ವಿವಿಧ ನೆಪವೊಡ್ಡಿ ಹಲವರಿಗೆ ಬಿಲ್ ಬರುವಂತಾಗಿದೆ. ಅವರು ಎಂದಿನಂತೆಯೇ ಹಣ ಪಾವತಿಸುವ ಪ್ರಮೇಯ ಎದುರಾಗಿದೆ.
ಉಪ್ಪಿನಂಗಡಿಯ ನಿವಾಸಿಯೊಬ್ಬರು ಕಳೆದ ತಿಂಗಳು 200 ಯುನಿಟ್‌ಗಿಂತ ಕಡಿಮೆ ವಿದ್ಯುತ್ ಬಳಸಿದ್ದರೂ ಅವರಿಗೆ ಹಣ ಕಟ್ಟಲು ಬಿಲ್ ಬಂದಿದೆ. ಇದನ್ನು ಪ್ರಶ್ನಿಸಿದರೆ, ಕಳೆದ ವರ್ಷ ಸರಾಸರಿ 200 ಯುನಿಟ್‌ಗಿಂತ ಹೆಚ್ಚು ಬಳಸಿದ್ದೀರಿ ಎಂಬ ಕಾರಣ ನೀಡಲಾಗಿದೆ.
“ಉದಯವಾಣಿ’ ಜತೆಗೆ ಮಾತನಾಡಿದ ಅವರು, “ಈ ಹಿಂದೆ 200 ಯುನಿಟ್ ಮೀರುತ್ತಿದ್ದರೂ ಸರಕಾರದ ಗೃಹಜ್ಯೋತಿ ಯೋಜನೆಯ ಫಲಾನುಭವಿಯಾಗಲು ವಿದ್ಯುತ್ ಬಳಕೆಯನ್ನು ಮಿತವ್ಯಯಕ್ಕೆ ಒಳಪಡಿಸಿ ಜುಲೈ ತಿಂಗಳ ಬಳಕೆಯನ್ನು 191
ಯುನಿಟ್‌ಗೆ ಇಳಿಸಿಕೊಂಡಿದ್ದೆವು. ಸರಕಾರದ ಯೋಜನೆಯ ಲಾಭ ದೊರೆಯ ಲಿದೆ ಎಂದು ಭಾವಿಸಲಾಗಿತ್ತು. ಆದರೆ ಮೆಸ್ಕಾಂ ಬಿಲ್ ಕೈ ಸೇರಿದಾಗ ಪೂರ್ಣ ಬಿಲ್ ಪಾವತಿಯ ಸೂಚನೆ ಲಭಿಸಿ ನಿರಾಶೆಯಾಗಿದೆ’ ಎನ್ನುತ್ತಾರೆ. 200 ಯುನಿಟ್ ದಾಟಿದರೆ ಗೃಹಜ್ಯೋತಿ ಸೌಲಭ್ಯ ಇಲ್ಲ ಎಂಬುದನ್ನು ಒಪ್ಪಬಹುದು. ಆದರೆ 200 ಯುನಿಟ್‌ಗಿಂತ ಕಡಿಮೆ ಬಳಸಿದರೂ ಗತ ವರ್ಷದ ಸರಾಸರಿಯನ್ನು ಮುಂದಿರಿಸಿ ಸೌಲಭ್ಯ ನಿರಾಕರಿಸುವುದು ಸರಿಯಲ್ಲ ಎಂಬುದು ಅವರ ಅಭಿಪ್ರಾಯ.
ಈ ಬಗ್ಗೆ “ಉದಯವಾಣಿ’ ಜತೆಗೆ ಪ್ರತಿಕ್ರಿಯಿಸಿದ ಮಂಗಳೂರಿನ ಮೆಸ್ಕಾಂ ಅಧಿಕಾರಿಗಳು, “ಕಳೆದ ವರ್ಷದ 12 ತಿಂಗಳ ಸರಾಸರಿ 200 ಯುನಿಟ್‌ಗಿಂತ ಕಡಿಮೆ ಇದ್ದವರಿಗೆ ಮಾತ್ರ ಈ ಯೋಜನೆ ಅನ್ವಯವಾಗುತ್ತದೆ. ಕಳೆದ ವರ್ಷದ ಸರಾಸರಿ 200 ಯುನಿಟ್‌ಗಿಂತ ಅಧಿಕ ಬಳಸಿದವರು ಈಗ ಕಡಿಮೆ ಯುನಿಟ್ ಬಳಸಿದರೂ ಸದ್ಯ ಗೃಹಜ್ಯೋತಿ ಯೋಜನೆ ಅವರಿಗೆ ಅನ್ವಯವಾಗುವುದಿಲ್ಲ. ಕಳೆದ ಎಪ್ರಿಲ್‌ನಿಂದ ಈ ವರ್ಷದ ಮಾರ್ಚ್‌ವರೆಗಿನ ಪ್ರತೀ ತಿಂಗಳ ಬಿಲ್‌ನ ಯುನಿಟ್‌ಗಳನ್ನು ಕೂಡಿಸಿ ಅದಕ್ಕೆ 12ರಿಂದ ಭಾಗಿಸಿದಾಗ ಬರುವ ಒಟ್ಟು ಯುನಿಟ್ ಮೇಲೆ ಗೃಹಜ್ಯೋತಿ ಯೋಜನೆ ಅನ್ವಯ ನಿರ್ಧಾರವಾಗುತ್ತದೆ. ಇದು 200 ಯುನಿಟ್‌ಗಿಂತ ಕಡಿಮೆ ಇದ್ದರೆ ಮಾತ್ರ ಅಂತಹವರಿಗೆ ಉಚಿತ ಯೋಜನೆ ಈ ಬಾರಿ ಅನ್ವಯವಾಗಿದೆ’ ಎಂದಿದ್ದಾರೆ.