ಹೊಸಕೋಟೆ: ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡರೆ ಮಾತ್ರ ಸರ್ಕಾರಿ ಶಾಲೆಗಳು ಬೆಳವಣಿಗೆ ಹೊಂದಲು ಸಾಧ್ಯವಾಗಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎನ್.ಕನ್ನಯ್ಯ ಹೇಳಿದರು. ನಗರದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಉತ್ತಮ ಶೈಕ್ಷಣಿಕ ಅಭ್ಯಾಸಗಳ ಮತ್ತು ನಾವೀನ್ಯತೆಯ ಅಳವಡಿಕೆ ಬಗ್ಗೆ ಶಿಕ್ಷಕರಿಗಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಖಾಸಗಿಯವರೊಂದಿಗೆ ಸ್ಪರ್ಧಿಸಲು ಸುಧಾರಣೆ ಅಗತ್ಯ: ತಾಲೂಕಿನ ಆಯ್ದ ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿಯಿಂದಲೇ ಆಂಗ್ಲ ಮಾಧ್ಯಮ ಪ್ರಾರಂಭಿಸಿರುವ ಕಾರಣ ದಾಖಲಾತಿ ವೃದ್ಧಿಸಿದೆ. ಖಾಸಗಿ ಶಾಲೆಗಳೊಂದಿಗೆ ಸಮಾನವಾಗಿ ಸ್ಪರ್ಧಿಸಿ ವಿದ್ಯಾರ್ಥಿಗಳಲ್ಲಿ ಕೀಳರಿಮೆ ಬೆಳೆಯುವುದನ್ನು ನಿವಾರಿಸಲು ಇನ್ನೂ ಹೆಚ್ಚಿನ ಸುಧಾರಣೆ ಮಾಡಿಕೊಳ್ಳಬೇಕಾದ ಅವಶ್ಯವಿದೆ. ಈ ಬಗ್ಗೆ ಶಿಕ್ಷಕರಿಗೆ ಸೂಕ್ತ ಮಾರ್ಗದರ್ಶನ ನೀಡುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಪ್ರಸಕ್ತ ಸಾಲಿನಲ್ಲಿ ತಾಲೂಕಿನ 18 ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಹಿಂದಿನ ಸಾಲಿನಲ್ಲಿ ಉತ್ತಮ ಸಾಧನೆ ಮಾಡಿದ ಮುಖ್ಯ ಶಿಕ್ಷಕರು ಕೈಗೊಂಡಿದ್ದ ಚಟುವಟಿಕೆಗಳ ಬಗ್ಗೆ ನೀಡಿರುವ ಮಾಹಿತಿ ಅಳವಡಿಸಿಕೊಂಡು ಗುರಿ ಸಾಧನೆಗೆ ಶ್ರಮಿಸಬೇಕು ಎಂದರು.
ಶಿಕ್ಷಕರಿಗೆ ಹಂತಹಂತವಾಗಿ ತರಬೇತಿ: ಕ್ಷೇತ್ರ ಸಮನ್ವಯಾಧಿಕಾರಿ ಎಂ.ಲಲಿತಮ್ಮ ಮಾತನಾಡಿ, ಶಾಲೆಗಳಲ್ಲಿ ಚಟುವಟಿಕೆ ಆಧಾರಿತ ಬೋಧನೆ ಬಗ್ಗೆ ವಿಷಯವಾರು ಶಿಕ್ಷಕರಿಗೆ ಹಂತ ಹಂತವಾಗಿ ತರಬೇತಿ ನೀಡಲಾಗುತ್ತಿದೆ. ಕಾರ್ಯಕ್ರಮದಲ್ಲಿ ಸಂಗ್ರಹಿಸಿದ ವಿಷಯಗಳನ್ನು ಬೋಧನೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಸಮುದಾಯದಲ್ಲಿ ಸರ್ಕಾರಿ ಶಾಲೆ ಬಗ್ಗೆ ಅಭಿಮಾನ ಮೂಡಿಸಬೇಕು. ಈ ದಿಶೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಸದಸ್ಯರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಪ್ರಗತಿಯ ಬಗ್ಗೆ ಅಧಿಕಾರಿಗಳು ಆಗಾಗ್ಗೆ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವರು ಎಂದು ತಿಳಿಸಿದರು.
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲ ನಾಗಮಣಿ, ಅಧಿಕಾರಿಗಳಾದ ರಮೇಶ್, ಮಧುಮತಿ, ಮಲ್ಲೇಶ್ ಉಪಸ್ಥಿತರಿದ್ದರು. ಹೊಸಕೋಟೆ ಹಾಗೂ ದೇವನಹಳ್ಳಿ ತಾಲೂಕುಗಳ ಒಟ್ಟು 36 ಶಾಲೆಗಳ 72 ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಚಟುವಟಿಕೆ ಅಳವಡಿಸಿಕೊಂಡಿರುವ 10 ಶಾಲೆಗಳ ಶಿಕ್ಷಕರು ಯೋಜನೆ ಅಳವಡಿಕೆಯಿಂದ ಸಾಧಿಸಿರುವ ಪ್ರಗತಿಯ ಬಗ್ಗೆ ವಿವರಿಸಿದರು.
ಆಯ್ಕೆಯಾಗಿರುವ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು: ನಡವತ್ತಿ, ಕಣ್ಣೂರಹಳ್ಳಿ, ವಿವಿ.ಬಡಾವಣೆ-ಹೊಸಕೋಟೆ ಟೌನ್, ಗಣಗಲೂರು, ತಿರುವರಂಗ, ಮುತ್ಸಂದ್ರ, ತರಬಹಳ್ಳಿ, ಶಿವನಾಪುರ, ಬೆಂಡಿಗಾನಹಳ್ಳಿ, ಮುತೂರು, ಬಾಗೂರು, ನಾರಾಯಣಕೆರೆ, ಮಾರಂಗೆರೆ, ಸಮ್ಮೇತನಹಳ್ಳಿ, ಕೊರಟಿ, ಚಿಕ್ಕನಲ್ಲಾಳ. ಸರ್ಕಾರಿ ಉರ್ದು ಶಾಲೆಗಳು: ಬೈಲನರಸಾಪುರ, ಶಂಕಣೀಪುರದ ಶಾಲೆಗಳು ಆಯ್ಕೆಯಾಗಿವೆ.