ಕುಷ್ಟಗಿ: ಬದುಕು ಕಟ್ಟುವ ಬೆಳೆಗಿಂತ ಮಾರುಕಟ್ಟೆ ಕಟ್ಟುವ ಬೆಳೆಗಳಿಗೆ ಮಾರು ಹೋಗಿರುವ ಹಿನ್ನೆಲೆಯಲ್ಲಿ ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಕೃಷಿಯಿಂದ ಶ್ರೀಮಂತರಾಗುವುದು ಕನಸಾಗಿ ಉಳಿದಿದೆ ಎಂದು ಕೊಪ್ಪಳ ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ, ಕೃಷಿ ವಿಜ್ಞಾನಿ ಡಾ| ಎಂ.ಬಿ. ಪಾಟೀಲ ಕಳವಳ ವ್ಯಕ್ತಪಡಿಸಿದರು.
ಇಲ್ಲಿನ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದ ಸಭಾಂಗಣದಲ್ಲಿ ರಾಷ್ಟ್ರೀಯ ಭದ್ರತಾ
ಅಭಿಯಾನದಡಿ ನ್ಯೂಟ್ರಿಸಿರಿ ಧಾನ್ಯಗಳ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಅಮೆರಿಕಾದಲ್ಲಿ ಕೈಗಾರಿಕೆಗಳು ಹೆಚ್ಚಿವೆ ಎನ್ನುವುದು ತಪ್ಪುಗ್ರಹಿಕೆ. ಅದು ಕೂಡ ಕೃಷಿ ಪ್ರಧಾನವಾದ ದೇಶ. ಸದ್ಯ ಅಲ್ಲಿ ಮೆಕ್ಕೆಜೋಳ, ಸೋಯಾಬೀನ್ ಬೆಳೆ ಬೆಳೆಯುವುದನ್ನು ನಿಲ್ಲಿಸಲಾಗಿದೆ. ಇದೀಗ ಅಲ್ಲಿ ಬೆಳೆದಿರುವ ಉತ್ಪನ್ನ ರಫ್ತಾಗದೇ ಇರುವುದಕ್ಕೆ ರೈತರಿಗೆ ವಿಮಾ ಪರಿಹಾರ ನೀಡಬೇಕಾಯಿತು. ಆದರೆ ಈ ಪ್ರದೇಶದಲ್ಲಿ ರೈತರು, ಮೆಕ್ಕೆಜೋಳ, ಸೂರ್ಯಕಾಂತಿಯನ್ನು ಬೆಳೆಯುತ್ತಿದ್ದಾರೆ.
ಈ ಪ್ರದೇಶದಲ್ಲಿ ನಾವು ಉಣ್ಣುವ ಬೆಳೆ ಬೆಳೆಯಬೇಕಿದೆ ವಿನಃ ವಾಣಿಜ್ಯ ದೃಷ್ಟಿಯಿಂದ ಹೆಚ್ಚು ನೀರು ತೆಗೆದುಕೊಳ್ಳುವ ಮೆಕ್ಕೆಜೋಳ, ಸೂರ್ಯಕಾಂತಿಯನ್ನು ಕಡಿಮೆ ಮಾಡಬೇಕಿದೆ. ಈ ಪ್ರದೇಶಕ್ಕೆ ಸಿರಿಧಾನ್ಯ ಹೊಸದಲ್ಲ, ಸಿರಿಧಾನ್ಯದಲ್ಲಿ ನಾರಿನಾಂಶ ಹೆಚ್ಚಿದ್ದು, ವಾರಕೊಮ್ಮೆಯಾದರೂ ಸೇವಿಸಿದರೆ ಬಿಪಿ, ಶುಗರ್ ಕಡಿಮೆಯಾಗಲಿದೆ ಎಂದರು. ಈಗಿನ ಊಟದ ಶೈಲಿಯಲ್ಲಿ ಅನ್ನವೇ ಪ್ರಧಾನ ಆಹಾರವಾಗಿರುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾವಾಗುತ್ತಿದೆ. ಈ ಭಾಗದ ಪ್ರಮುಖ ಬೆಳೆ ಸಜ್ಜೆ ಆಹಾರವಾಗಿ ಬಳಸುತ್ತಿಲ್ಲ. ಬದಲಿಗೆ ಪೌಲಿಫಾರ್ಮ್ನ ಕೋಳಿ ಆಹಾರಕ್ಕಾಗಿ ಬೆಳೆಯಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಹಾಯಕ ಕೃಷಿ ನಿರ್ದೇಶಕ ವೀರಣ್ಣ ಕಮತರ ಮಾತನಾಡಿ, ಮೆಕ್ಕೆಜೋಳ, ಸೂರ್ಯಕಾಂತಿ ಬೆಳೆಯುವ ಬದಲಿಗೆ
ಬರ ನೀಗಿಸುವ ಸಿರಿಧಾನ್ಯಗಳನ್ನೇ ಹೆಚ್ಚು ಬೆಳೆಯಬೇಕೆಂದರು.
ಪ್ರಗತಿಪರ ರೈತ ಶಿವನಗೌಡ ಪಾಟೀಲ ಮಾತನಾಡಿ, ಸಿರಿಧಾನ್ಯದ ಬೆಳೆ ಕಡಿಮೆ ಖರ್ಚಿನ ಬೆಳೆ, ರಾಸಾಯನಿಕ ಗೊಬ್ಬರ, ಕ್ರಿಮಿನಾಶಕಗಳಿಂದ ಭೂಮಿಯನ್ನು ವಿಷಯುಕ್ತಗೊಳಿಸದೇ ನಮ್ಮ ಆರೋಗ್ಯ, ಭೂಮಿಯ ಆರೋಗ್ಯ ಕಾಪಾಡಿಕೊಳ್ಳಬೇಕಿದೆ ಎಂದರು.
ಸಿರಿಧಾನ್ಯ ಬೆಳೆಗಾರ ಗುಂಡಪ್ಪ ಬೋದೂರು ಮಾತನಾಡಿ, ಜೋಳದ ಅನ್ನ, ಸಜ್ಜಿ, ಹುಣಸೆ ಹಣ್ಣಿನ ಸಂಗಟಿ ಸಾರು
ಸೇವಿಸುತ್ತಿದ್ದು, ಆರೋಗ್ಯದ ಗುಟ್ಟಿನ ಬಗ್ಗೆ ಹೇಳಿಕೊಂಡರು. ಕೃಷಿ ಅಧಿಕಾರಿ ಬಾಲಪ್ಪ ಜಲಗೇರಿ ಇದ್ದರು. ರಾಷ್ಟ್ರೀಯ ಭದ್ರತಾ ಅಭಿಯಾನದ ಮಾರುತಿ ಪೂಜಾರ ಪ್ರಾಸ್ತಾವಿಕ ಮಾತನಾಡಿದರು. ತಾಂತ್ರಿಕ ಸಹಾಯಕ ಶೇಖರಯ್ಯ ಹಿರೇಮಠ, ಬಸವರಾಜ ಪಾಟೀಲ ಇದ್ದರು.
ತಿನ್ನುವ ಯಾವುದೇ ಆಹಾರ ಹೊಟ್ಟೆ ಸೇರುವ ಕಾರಣದಿಂದ ರೈತರು ಯಾವುದೇ ಕಾರಣಕ್ಕೂ ರಸ್ತೆಯ ಮೇಲೆ ರಾಶಿ ಮಾಡಬಾರದು. ತಾವೇ ತಿನ್ನುವುದಾದರೆ ರಸ್ತೆಯ ಮೇಲೆ ರಾಶಿ ಮಾಡಿದ ಆಹಾರ ಬಳಸಲು ಮನಸ್ಸಾಗದು, ಅದನ್ನು ಕೂಡಲೇ ಮಾರುಕಟ್ಟೆಗೆ ಸಾಗಿಸಲಾಗುತ್ತಿದ್ದು ಈ ನಿಟ್ಟಿನಲ್ಲಿ ರೈತರು ಯೋಚಿಸಬೇಕಿರುವುದು ಅಗತ್ಯವಾಗಿದೆ.
ಡಾ| ಎಂ.ಬಿ. ಪಾಟೀಲ ಕೃಷಿ ವಿಜ್ಞಾನಿ.