ಧಾರವಾಡ: ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವನೆ ಬೆಳೆಸಿದರೆ ಅವರಲ್ಲಿ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.
ಜೆಎಸ್‌ಎಸ್ ಮಂಜುನಾಥೇಶ್ವರ ಐಟಿಐ ಹಾಗೂ ಧಾರವಾಡ ಜಿಲ್ಲಾ ಕೈಗಾರಿಕಾ ತರಬೇತಿ ಸಂಸ್ಥೆಗಳ ಆಶ್ರಯದಲ್ಲಿ ಜನತಾ ಶಿಕ್ಷಣ ಸಮಿತಿ ಆವರಣದಲ್ಲಿ ಆಯೋಜಿಸಿದ್ದ ಸ್ಕಿಲ್ ಎಕ್ಸಪೋ 2017ರ ಸಮಾರೋಪ ಸಮಾರಂಭದಲ್ಲಿ ವಸ್ತು ಪ್ರದರ್ಶನದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಪ್ರಥಮ ಬಾರಿಗೆ ಈ ರೀತಿ ಐಟಿಐ ಕಾಲೇಜುಗಳ ತಾಂತ್ರಿಕ ಪ್ರದರ್ಶನ ಏರ್ಪಡಿಸಿರುವುದಕ್ಕೆ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯನ್ನು ಅಭಿನಂದಿಸಿದ ಹೊರಟ್ಟಿ, ಐಟಿಐ ವಿದ್ಯಾರ್ಥಿಗಳಿಗೆ ಉದ್ಯೋಗವಕಾಶ ಹೆಚ್ಚಾಗಿದೆ. ಪಾಲಕರು ಕೇವಲ ಪ್ರತಿಷ್ಠೆಗೆ ಕ್ಕಳಿಗೆ ಉಪಯೋಗವಿಲ್ಲದ ಶಿಕ್ಷಣ ನೀಡುವುದರ ಬದಲಿಗೆ ಅವರ ಪ್ರತಿಭೆಯನ್ನಾಧರಿಸಿ ಇಂತಹ ತಾಂತ್ರಿಕ ಕೋರ್ಸುಗಳಿಗೆ ಪ್ರವೇಶ ದೊರಕಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಜೆಎಸ್‌ಎಸ್ ವಿತ್ತಾಧಿಕಾರಿ ಡಾ|ಅಜಿತ ಪ್ರಸಾದ ಮಾತನಾಡಿ, ಕೇವಲ ಪಠ್ಯದ ಅಧ್ಯಯನದಿಂದ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಸಾಧ್ಯವಿಲ್ಲ. ಪಠ್ಯೇತರ ಚಟುವಟಿಕೆಗಳಲ್ಲಿ ಅವರು ಪಾಲ್ಗೊಂಡಾಗ ಮಾತ್ರ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧಿಸಲು ಸಾಧ್ಯವಿದೆ.
ಐಟಿಐ ವಿದ್ಯಾರ್ಥಿಗಳಿಗೆ ತರಬೇತಿ ವಸ್ತು ಪ್ರದರ್ಶನ, ಉದ್ಯೋಗ ಮೇಳ ಆಯೋಜಿಸಿ ಅವರನ್ನು ಉತ್ತೇಜಿಸುವ ಕೆಲಸವಾಗಬೇಕು ಎಂದರು. ಧಾರವಾಡ ಸರಕಾರಿ ಐಟಿಐ ಕಾಲೇಜಿನ ಪ್ರಾಚಾರ್ಯ ರವೀಂದ್ರ ಪಿ. ದ್ಯಾಬೇರಿ ಮಾತನಾಡಿ, 35 ಕಾಲೇಜಿನ 125 ಪೊಜೆಕ್ಟ್ಗಳು ಇದರಲ್ಲಿ ಭಾಗವಹಿಸಿದ್ದು, ವಿವಿಧ 12 ಟ್ರೇಡ್ ಗಳಲ್ಲಿ ಒಟ್ಟು 36 ಬಹುಮಾನಗಳನ್ನು ನೀಡಲಾಗಿದೆ ಎಂದರು.
ಸ್ಕಿಲ್ ಎಕ್ಸಪೋ 2017ರ ಸಂಯೋಜಕ ಮಹಾವೀರ ಉಪಾಧ್ಯೆ, ಉದ್ಯೋಗ ಮತ್ತು ತರಬೇತಿ ಇಲಾಖೆಯ ಬೆಳಗಾವಿ ವಿಭಾಗ ಹುಬ್ಬಳ್ಳಿಯ ಜಂಟಿ ನಿರ್ದೇಶಕ ಪಿ.ರಮೇಶ್ಯ, ಸಹಾಯಕ ನಿರ್ದೇಶಕ ಈಶ್ವರಪ್ಪ ದ್ಯಾಮನಗೌಡರ, ಬಸವಪ್ರಭು ಹಿರೇಮಠ, ಸರಕಾರಿ ಐಟಿಐ ಕಾಲೇಜು ಹುಬ್ಬಳ್ಳಿಯ ಆರ್.ಪಿ ಶಿಗ್ಗಾಂವಕರ್ ಇದ್ದರು. ಜಿನದತ್ತ ಹಡಗಲಿ ನಿರೂಪಿಸಿದರು. ವಾಣಿ ಪುರೋಹಿತ ವಂದಿಸಿದರು.