ಕುಂದಾಪುರ: ಕೋವಿಡ್ 19 ಹಿನ್ನೆಲೆಯಲ್ಲಿ ಲಾಕ್‌ಡೌನ್‌ನಿಂದಾಗಿ ಮಾರುಕಟ್ಟೆ, ಕೆಲವು ಅಂಗಡಿಗಳು ಬಂದ್ ಆಗಿದೆ. ಇದರಿಂದ ರೈತರು ತಾವು ಬೆಳೆದ ತರಕಾರಿ -ಹಣ್ಣುಗಳಿಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದಾಗಿದೆ. ಇದನ್ನು ಅರಿತ ರೈತರೇ ಸ್ವತಃ ತಾವು ಬೆಳೆದ ತರಕಾರಿ, ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ.
ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಹಳ್ಳಿಹೊಳೆ, ಕಮಲಶಿಲೆ, ಅಮಾಸೆಬೈಲು, ಮಡಾಮಕ್ಕಿ, ಮತ್ತಿತರ ಕಡೆಗಳಲ್ಲಿ ಈ ಸಮಯದಲ್ಲಿ ಸೌತೆಕಾಯಿ, ಬಸಳೆ, ಅಲಸಂಡೆ, ಬೆಂಡೆಕಾಯಿ, ಬಾಳೆಹಣ್ಣು, ಪಪ್ಪಾಯಿ ಮತ್ತಿತರ ಊರ ಹಣ್ಣು – ತರಕಾರಿಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ.
ಆದರೆ ಈಗ ಕುಂದಾಪುರ, ಸಿದ್ದಾಪುರ, ಗೋಳಿಯಂಗಡಿ ಮತ್ತಿತರ ಕಡೆಗಳಲ್ಲಿ ಪ್ರತಿ ವಾರ ನಡೆಯುವ ವಾರದ ಸಂತೆ ಇಲ್ಲದಿರುವ ಕಾರಣ ತರಕಾರಿ, ಹಣ್ಣುಗಳನ್ನು ಮಾರಾಟ ಮಾಡುವುದೇ ರೈತರಿಗೆ ಸಮಸ್ಯೆಯಾಗುತ್ತಿತ್ತು. ಈಗ ಎಪಿಎಂಸಿಗೆ ಒಯ್ದರೂ ಮಾರಾಟ ವಾಗುವ ಭರವಸೆ ಇಲ್ಲ. ಅಲ್ಲಿ ನಿರೀಕ್ಷಿತ ಬೆಲೆಯೂ ಸಿಗುವ ಸಾಧ್ಯತೆ ಕಡಿಮೆ. ಇದಕ್ಕೀಗ ಕೃಷಿಕರೇ ಪರಿಹಾರ ಕಂಡುಕೊಂಡಿದ್ದು, ತಮ್ಮ ಊರು ಗಳಲ್ಲಿರುವ ಸಣ್ಣ- ಸಣ್ಣ ಪೇಟೆಗೆ ಬಂದು ಕೆಲವರು ತರಕಾರಿ, ಹಣ್ಣುಗಳನ್ನು ಮಾರಿದರೆ, ರಸ್ತೆ ಬದಿಯಲ್ಲಿ ಮನೆ ಯಿರುವ ಕೆಲವರು ಅಲ್ಲೇ ಮಾರಾಟ ಮಾಡುತ್ತಿದ್ದಾರೆ.
ಕಡಿಮೆ ಬೆಲೆ
ಸಾಮಾನ್ಯವಾಗಿ ರೈತರು ತರಕಾರಿಗಳನ್ನು ಸಂತೆಗೆ ಅಥವಾ ಅಂಗಡಿಗಳಿಗೆ ತಂದು ಕಡಿಮೆ ಬೆಲೆ ಪಡೆಯುತ್ತಿದ್ದರು. ಆದರೆ ಈಗ ಅವರೇ ಇಂತಿಷ್ಟು ದರವನ್ನು ನಿಗದಿಪಡಿಸಿ, ಮಾರಾಟ ಮಾಡುತ್ತಿದ್ದಾರೆ. ಇದರಿಂದ ಬೆಳೆಗಾರರಿಗೂ ಅನುಕೂಲ, ಗ್ರಾಹಕರಿಗೂ ಕಡಿಮೆ ಬೆಲೆಯಲ್ಲಿ ತಾಜಾ ತರಕಾರಿ ಸಿಗುವಂತಾಗುತ್ತಿದೆ.