Advertisement

ಪರಿಸರ ಪೂರಕ ಸಸಿ ಬೆಳೆಸಿ: ಶಾಸಕ ಅನಿಲ ಬೆನಕೆ

05:28 PM Jul 02, 2022 | Team Udayavani |

ಬೆಳಗಾವಿ: ಅನಗತ್ಯ ಗಿಡಗಳನ್ನು ಪೋಷಿಸುವುದಕ್ಕಿಂತ ಪಕ್ಷಿ ಸಂಕುಲ, ಮನುಷ್ಯ ಕುಲ, ಪರಿಸರ ಪೂರಕವಾಗಿರುವ ಸಸಿಗಳನ್ನು ನೆಟ್ಟು ಬೆಳೆಸಬೇಕಿದೆ ಎಂದು ಶಾಸಕ ಅನಿಲ ಬೆನಕೆ ಅವರು ಹೇಳಿದರು. ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ತೋಟಗಾರಿಕಾ ಸಂಘದ ಸಹಯೋಗದಲ್ಲಿ ನಗರದ ಕ್ಲಬ್‌ ರಸ್ತೆ ಹತ್ತಿರವಿರುವ ಹ್ಯೂಮ್‌ ಪಾರ್ಕ್‌ ನಲ್ಲಿ ಜು. 1ರಿಂದ 3ರವರೆಗೆ ನಡೆಯಲಿರುವ ಸಸ್ಯ ಸಂತೆ ಮತ್ತು ತೋಟಗಾರಿಕಾ ಅಭಿಯಾನ-2022 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಹಣ್ಣಿನ ಗಿಡಗಳನ್ನು ಬೆಳೆಯುವುದರಿಂದ ಪಕ್ಷಿ ಸಂಕುಲ ಜೀವಿಸುವುದಕ್ಕೆ ಸಾಕಷ್ಟು ಸಹಾಯವಾಗಲಿದೆ. ಈ ನಿಟ್ಟಿನಲ್ಲಿ ತೋಟಗಾರಿಕಾ ಇಲಾಖೆ ಸಸ್ಯ ಸಂತೆ ಮೂಲಕ ಜಿಲ್ಲೆಯಲ್ಲಿ ಉತ್ತಮ ಕಾರ್ಯ ಕೈಗೊಂಡಿದೆ ಎಂದು ಶಾಸಕ ಅನಿಲ ಬೆನಕೆ ಶ್ಲಾಘಿಸಿದರು.

ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಮಾತನಾಡಿ, ಜಿಲ್ಲೆಯ 9 ತೋಟಗಾರಿಕಾ ಕ್ಷೇತ್ರಗಳಲ್ಲಿ ಬೆಳೆದ ವಿವಿಧ ತಳಿಯ ಹೂವು, ಹಣ್ಣು, ತರಕಾರಿ, ಔಷಧಿ, ಅಲಂಕಾರಿಕ ಸಸಿಗಳನ್ನು ಈ ಮೇಳದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಜಿಲ್ಲೆಯ ಜನರು ಈ ಸಸ್ಯ ಸಂತೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ತೋಟಗಾರಿಕಾ ಇಲಾಖೆ ಉಪನಿರ್ದೇಶಕರಾದ ಮಹಾಂತೇಶ ಮುರಗೋಡ ಮಾತನಾಡಿ, ನಗರ ಹಾಗೂ ಜಿಲ್ಲೆಯ ಗ್ರಾಮೀಣ ಜನರಲ್ಲಿ ತೋಟಗಾರಿಕೆ ಕುರಿತು ಆಸಕ್ತಿ ಬೆಳೆಸಲು, ತೋಟಗಾರಿಕಾ ವಲಯವನ್ನು ಪ್ರೋತ್ಸಾಹಿಸಲು ಈ ಮೇಳ ಆಯೋಜಿಸಲಾಗಿದೆ. 3 ದಿನಗಳ ಕಾಲ ನಡೆಯುವ ಈ ಸಸ್ಯ ಸಂತೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಮೇಳದ ಉಪಯೋಗ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ನಂತರ ಶಾಸಕ ಅನಿಲ ಬೆನಕೆ, ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಅವರು ಮೇಳದಲ್ಲಿ ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾದ ವಿವಿಧ ತಳಿಯ ಸಸಿ, ಗಿಡಗಳನ್ನು ವೀಕ್ಷಿಸಿ ರೈತರಿಂದ ಮಾಹಿತಿ ಪಡೆದುಕೊಂಡರು.

Advertisement

ಮೇಳದಲ್ಲಿ ಉತ್ತಮ ಗುಣಮಟ್ಟದ ಹೂವಿನ ಗಿಡಗಳು, ಅಲಂಕಾರಿಕ ಗಿಡಗಳು, ಬಗೆ ಬಗೆಯ ಹಣ್ಣಿನ ಗಿಡಗಳು, ಅಣಬೆ ಪ್ರಯೋಗಾಲದಲ್ಲಿ ಉತ್ಪಾದನೆ ಮಾಡುತ್ತಿರುವ ಅಣಬೆ ಬೀಜ,
ಅಣಬೆ ಬೆಳೆ, ಜೇನು ಉತ್ಪನ್ನಗಳು, ಬೆಳಗಾವಿ ಜೈವಿಕ ಕೇಂದ್ರದಲ್ಲಿ ಉತ್ಪಾದಿಸಿದ ವಿವಿಧ ಜೈವಿಕ ಗೊಬ್ಬರಗಳು ಹಾಗೂ ತೋಟಗಾರಿಕೆ ಕ್ಷೇತ್ರಗಳಲ್ಲಿ ಉತ್ಪಾದಿಸಿದ ಏರೆ ಜಲ, ಎರೆಹುಳು ಗೊಬ್ಬರವನ್ನು ರೈತರಿಗೆ ಇಲಾಖೆಯ ದರದಲ್ಲಿ ಮಾರಾಟಕ್ಕೆ ಇಡಲಾಗಿದೆ.

ಜಿಲ್ಲೆಯಲ್ಲಿ ಒಟ್ಟು 24 ತೋಟಗಾರಿಕೆ ಕ್ಷೇತ್ರಗಳ ಪೈಕಿ ಮುಖ್ಯವಾಗಿ 9 ಕಡೆ ಸಸ್ಯಾಭಿವೃದ್ಧಿ ಪಡಿಸಲಾಗಿದ್ದು, ಖಾನಾಪೂರ ತಾಲೂಕಿನ ಶೇಡಗಳ್ಳಿ ತೋಟಗಾರಿಕೆ ಕ್ಷೇತ್ರ, ಹುಕ್ಕೇರಿ ತಾಲೂಕಿನ ಹಿಡಕಲ್‌ ತೋಟಗಾರಿಕೆ ಕ್ಷೇತ್ರ, ಗೋಕಾಕ ತಾಲೂಕಿನ ಧೂಪಧಾಳ ತೋಟಗಾರಿಕೆ ಕ್ಷೇತ್ರ, ಕಿತ್ತೂರು ತಾಲೂಕಿನ ಕಿತ್ತೂರು ತೋಟಗಾರಿಕೆ ಕ್ಷೇತ್ರ, ರಾಮದುರ್ಗ ತಾಲೂಕಿನ ರಾಮದುರ್ಗ ಕಛೇರಿ ಸಸ್ಯಾಗಾರ ಸವದತ್ತಿ ತಾಲೂಕಿನ ಮುನವಳ್ಳಿ, ಯಕ್ಕೇರಿ ಮತ್ತು ಉಗರಗೋಳ ತೋಟಗಾರಿಕೆ ಕ್ಷೇತ್ರಗಳು ಹಾಗೂ ಬೆಳಗಾವಿ ಹ್ಯೂಮ್‌ ಪಾರ್ಕ್‌ ನಲ್ಲಿ ರೈತರಿಗಾಗಿ ಸುಮಾರು 2 ಲಕ್ಷ ವಿವಿಧ ಸಸಿಗಳನ್ನು ಯೋಗ್ಯ ದರದಲ್ಲಿ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next