ಹಳೆಯಂಗಡಿ: ಸೂಕ್ತ ಸಮಯದಲ್ಲಿ ಸಿಕ್ಕ ಅವಕಾಶದಲ್ಲಿ ಆತ್ಮವಿಶ್ವಾಸಕ್ಕೆ ತಕ್ಕುದಾದ ರೀತಿಯಲ್ಲಿ ಸವಾಲುಗಳ ನಡುವೆ ವಿಭಿನ್ನವಾಗಿ ಬೆಳೆಯಿರಿ. ಪ್ರಚಲಿತ ವಿದ್ಯುನ್ಮಾನದ ಅಗತ್ಯತೆ ನಮಗಿದೆ. ಪತ್ರಕರ್ತರ ರಕ್ಷಣೆಗೆ ಯಾವುದೇ ಕಾನೂನು ಇಲ್ಲ ಆದರೂ ವೃತ್ತಿಯ ವ್ಯಾಮೋಹದಿಂದ ಸಮಾಜದ ವಿರೋಧ ಸಿಗುವುದು ನಿಶ್ಚಿತ ಎಂದು ಪತ್ರಕರ್ತೆ ನಿರೂಪಕಿ ವಿಜಯಲಕ್ಷ್ಮೀ ಶಿಬರೂರು ಹೇಳಿದರು.
ಹಳೆಯಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜ. 13ರಂದು ಮೂಲ್ಕಿ ವಲಯ ಪತ್ರಕರ್ತರ ಸಮೂಹದ ಸಂಯೋಜನೆಯಲ್ಲಿ ನಡೆದ ವಿದ್ಯಾರ್ಥಿಗಳೊಂದಿಗೆ ಮಾಧ್ಯಮದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜೀವನದ ಗ್ರಾಮೀಣ ಸೊಗಡಿನಲ್ಲಿ ಸಿಕ್ಕ ಅವಮಾನ, ಸಂಕಷ್ಟ, ಸಾಂಪ್ರದಾಯವನ್ನು ಮೆಟ್ಟಿ ನಿಲ್ಲುವ ಬಲಿಷ್ಠತೆಯಿಂದ ತನ್ನ ವೃತ್ತಿ ಜೀವನದಲ್ಲಿನ ಸವಾಲುಗಳನ್ನು ಸಮರ್ಥವಾಗಿ ಪೇಟೆಯ ಹುಡುಗಿಗಿಂತ ಭಿನ್ನವಾಗಿ ನಿಭಾಯಿಸಿದ್ದೇನೆ, ಶಿಕ್ಷಣವನ್ನು ಅಧ್ಯಾತ್ಮಿಕತೆಯಿಂದ ಕಂಡಿದ್ದರಿಂದ, ನಿರ್ದಿಷ್ಟ ಗುರಿ ಸಾಧನೆಯನ್ನು ತಾನೋರ್ವ ಹುಡುಗಿಯಾಗಿ ಕಂಡುಕೊಳ್ಳದೇ, ಹುಡುಗರ ಸಮಾನ ದೃಷ್ಟಿಕೋನದಲ್ಲಿ ಅನುಭವಿಸಿದ್ದೇನೆ, ಕ್ರೀಡೆಯ ಚಟುವಟಿಕೆಯಿಂದ ಪ್ರತಿಯೊಂದನ್ನು ಸೋಲು ಗೆಲುವಿನ ಅಂತರದ ಫಲಿತಾಂಶದ ವೃತ್ತಿ ಜೀವನದ ಪ್ರಾಮಾಣಿಕತೆಯ ಪತ್ರಿಕೋದ್ಯಮ ನನ್ನದು ಎಂದು ಹೇಳಿದರು.
ಮೂಲ್ಕಿ ವಲಯ ಪತ್ರಕರ್ತರ ಸಮೂಹದ ಅಧ್ಯಕ್ಷ ಮಿಥುನ್ ಕೊಡೆತ್ತೂರು ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರೊ| ಎಂ. ವಿಶ್ವನಾಥ್ ಭಟ್ ಮಾತನಾಡಿ, ಪತ್ರಿಕಾರಂಗ ನಮ್ಮೆಲ್ಲರ ಜೀವನದ ಅನಿವಾರ್ಯತೆಯನ್ನು ಪೂರೈಸುವ ಪ್ರಚಾರ ಮಾಧ್ಯಮವಾದರೂ ಅದರಲ್ಲಿನ ಸವಾಲುಗಳನ್ನು ಸಮಾಜದ ಹಿತ ದೃಷ್ಟಿಯಿಂದ ತಿಳಿಹೇಳುವ ಕೆಲಸ ನಿರಂತರವಾಗಿ ನಡೆಯಬೇಕು ಎಂದರು. ಈ ಸಂದರ್ಭದಲ್ಲಿ ಮೂಲ್ಕಿ ಸಬ್ ಇನ್ಸ್‌ಪೆಕ್ಟರ್ ಶೀತಲ್ ಅಲಗೂರು ಮತ್ತು ಹೆಡ್‌ಕಾನ್ಸ್‌ಟೇಬಲ್ ಮಹೇಶ್ ಎಚ್.ಕೆ. ಅವರನ್ನು ಸಮ್ಮಾನಿಸಲಾಯಿತು.
ಕಾಲೇಜಿನ ವಿದ್ಯಾರ್ಥಿ ನಾಯಕರಾದ ಲೋಹಿತಾಕ್ಷ, ಮಹಮ್ಮದ್ ಹನೀಫ್, ರಕ್ಷಿತಾ, ಸಮೂಹದ ಕಾರ್ಯದರ್ಶಿ
ನಿಶಾಂತ್ ಶೆಟ್ಟಿ ಕಿಲೆಂಜೂರು ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಮೂಹದ ಮಾಜಿ ಅಧ್ಯಕ್ಷ ಹರೀಶ್ ಹೆಜ್ಮಾಡಿ ಸ್ವಾಗತಿಸಿದರು.