ಬೆಳ್ತಂಗಡಿ : ಆಹಾರ ಬೆಳೆಯುವ ಪ್ರದೇಶವನ್ನು ರೈತರು ವಾಣಿಜ್ಯ ಬೆಳೆಯಾಗಿ ಪರಿವರ್ತನೆಗೊಳಿಸಿದ ಪರಿಣಾಮವಾಗಿ ಇಂದು ಭೂಮಿಯ ಫಲವತ್ತತೆ ಕ್ಷೀಣಿಸಿದೆ. ಮಿಶ್ರಬೆಳೆ ಬೆಳೆದು ರೈತರು ಸ್ವಾವಲಂಬಿ ಗಳಾಗಬೇಕು ಎಂದು ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್ ಹೇಳಿದರು.
ಬೆಳ್ತಂಗಡಿ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಕೃಷಿ ಮತ್ತು ಅಭಿವೃದ್ಧಿ ಇಲಾಖೆಗಳ ಸಹಯೋಗ ದೊಂದಿಗೆ ಶನಿವಾರ ನಡೆದ ಸಮಗ್ರ ಕೃಷಿ ಅಭಿಯಾನ 2019-20ನೇ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದೆ ಜಿಲ್ಲೆಯಿಂದ ಭತ್ತ, ಅಕ್ಕಿಯನ್ನು ಇತರ ಜಿಲ್ಲೆಗಳಿಗೆ ರಫ್ತು ಮಾಡುತ್ತಿದ್ದರು ಆದರೆ ಇಂದು ಬೇರೆ ಜಿಲ್ಲೆ, ರಾಜ್ಯದಿಂದ ಅಕ್ಕಿಯನ್ನು ಆಮದು ಮಾಡುವಂತಹ ವಾತಾವರಣ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಹಿರಿಯರು ಉಳಿಸಿದ ಭೂಮಿ ಯಲ್ಲಿ ಭತ್ತ ಕೃಷಿ ಮಾಡುವ ಮೂಲಕ ಒಂದೆಡೆ ಭವಿಷ್ಯದಲ್ಲಿ ಅಂತರ್ಜಲ ವೃದ್ಧಿಸುವುದರೊಂದಿಗೆ ಭತ್ತದ ಕೃಷಿ ಯಿಂದಲೂ ವಿಮುಖರಾಗದಂತೆ ಕಾಪಾ ಡಲು ಸಾಧ್ಯ ಎಂದರು.
ಕೃಷಿ ಅಭಿಯಾನಕ್ಕೆ ಚಾಲನೆ ನೀಡಿದ ಜಿ.ಪಂ. ಸದಸ್ಯೆ ಸೌಮ್ಯಲತಾ ಜಯಂತ್ ಗೌಡ ಮಾತನಾಡಿ, ಇಂದು ಇಲಾಖೆ ರೈತರ ಮನೆಗೆ ಮಾಹಿತಿ ನೀಡಿ ಹೊರಟಿದೆ. ನರೇಗಾ, ಉದ್ಯೋಗ ಖಾತ್ರಿ ಯೋಜನೆ ಸೌಲಭ್ಯ ಸದ್ವಿನಿಯೋಗಿಸಬೇಕಾಗಿದೆ. ಭವಿಷ್ಯ ರೂಪಿಸುವ ಕೃಷಿಯನ್ನು ಕಷ್ಟ ಎಂದು ಭಾವಿಸದೆ ಇಷ್ಟಪಟ್ಟು ಬೆಳೆದು ಯಶಸ್ವಿ ಕೃಷಿಕರಾಗಿ ಎಂದರು.
ಪ್ರಗತಿಪರ ಕೃಷಿಕ ಶಂಕರ್ ಕೋಟ್ಯಾನ್ ಮಾತನಾಡಿ, ಹಿಂದೆ ಸಾವಯವ ಕೃಷಿ ಪದ್ಧತಿ ಅಳವಡಿಸಿದ್ದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಗುವುದರ ಜತೆಗೆ ಉತ್ತಮ ಬೆಳೆ ಬೆಳೆಯಲು ಸಾಧ್ಯವಾಗುತ್ತಿತ್ತು. ಆದರೆ ಇಂದು ರಾಸಾಯನಿಕ ಔಷಧ ಸಿಂಪಡಿಸಿ ಮಣ್ಣಿನ ಫಲವತ್ತತೆ ಜತೆಗೆ ನಮ್ಮ ಆರೋಗ್ಯಕ್ಕೆ ನಾವೇ ಕುತ್ತು ತಂದೊಡ್ಡಿದ್ದೇವೆ ಎಂದು ಹೇಳಿದರು.
ಪ್ರಗತಿಪರ ಕೃಷಿಕ ಶಂಕರ್ ಕೋಟ್ಯಾನ್, ಪುತ್ತೂರು ಉಪವಿಭಾಗದ ಉಪ ಕೃಷಿ ನಿರ್ದೇಶಕ ಶಿವಶಂಕರ್ ಎಚ್. ದಾನೆ ಗೊಂಡರ್ ಕೃಷಿ ಮಾಹಿತಿ ನೀಡಿದರು.
ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು.