ಕೋಲಾರ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ನೆಲಕಚ್ಚಿದೆ. ಅವರಿಗೆ ಗುಂಪುಗಾರಿಕೆ ಬಗೆಹರಿಸಿಕೊಳ್ಳಲು ಸಾಧ್ಯವಾಗಿಲ್ಲ. ಬಿಜೆಪಿಗೆ ಕಾಂಗ್ರೆಸ್ ಸರಿಸಾಟಿಯೇ ಅಲ್ಲ, ಮುಂದಿನ ಚುನಾವಣೆಯಲ್ಲಿ 120 ಸ್ಥಾನ ಕಾಂಗ್ರೆಸ್ ಗೆಲ್ಲುವ ಹಗಲುಗನಸು ಕಾಣುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದರು.
ಶನಿವಾರ ನಗರದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಮುಂದಿನ ಚುನಾವಣೆಯಲ್ಲಿ ಬಹುಮತ ಪಡೆದುಕೊಳ್ಳುವ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿ ಕ್ಷೇತ್ರದಲ್ಲೂ 10 ಮಂದಿ ಗೆಲ್ಲುವ ಅಭ್ಯರ್ಥಿಗಳು ಇದ್ದಾರಂತೆ, ಜೊತೆಗೆ ಬಿಜೆಪಿ, ಜೆಡಿಎಸ್ ಎಂಎಲ್‌ಎಗಳು ಮುಳುಗುತ್ತಿರುವ ಕಾಂಗ್ರೆಸ್‌ಗೆ ಹೋಗುತ್ತಾರಂತೆ ಎಂದು ಛೇಡಿಸಿದರು.
ದಲಿತರ ಅಭಿವೃದ್ಧಿಗೆ ಬಿಜೆಪಿ ಪಕ್ಷ ಶ್ರಮ: ಕಾಂಗ್ರೆಸ್ ಆಂತರಿಕ ಸಮೀಕ್ಷೆಯಲ್ಲಿ 120 ಸ್ಥಾನ ಬರುವ ನಿರೀಕ್ಷೆಯಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ, ರಾಹುಲ್‌ಗಾಂಧಿ ಸೂಚನೆಯಂತೆ ನಡೆದಿರುವ ಸಮೀಕ್ಷಾ ವರದಿ ಪ್ರಕಾರ ಕಾಂಗ್ರೆಸ್‌ಗೆ ಕೇವಲ 50 ಸ್ಥಾನ ಬರುವುದಾಗಿ ಹೇಳುತ್ತಿದ್ದಾರೆ. ಆದ್ದರಿಂದಲೇ ಸಿದ್ದರಾಮಯ್ಯರನ್ನು ಕರೆಯಿಸಿ ತರಾಟೆಗೂ ತೆಗೆದುಕೊಂಡಿದ್ದಾರೆ. ದಲಿತರನ್ನು ಓಟ್ ಬ್ಯಾಂಕ್ ಮಾಡಿಕೊಂಡು ವಂಚಿಸಿದ್ದು ಕಾಂಗ್ರೆಸ್. ದಲಿತರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಪಕ್ಷ ಬಿಜೆಪಿ ಮಾತ್ರ. ಜಿ.ಪರಮೇಶ್ವರ್ ಅವರು ಕಣ್ಣೀರು ಹಾಕಿಕೊಂಡರೂ ಅವರನ್ನು ಡಿಸಿಎಂ ಮಾಡಲಿಲ್ಲ. ಕಾಂಗ್ರೆಸ್‌ನವರು 80 ಸ್ಥಾನ ಪಡೆದುಕೊಂಡು ಜೆಡಿಎಸ್ ಪಾದ ಪೂಜೆ ಮಾಡಿ ಸಿಎಂ ಜೆಡಿಎಸ್‌ಗೆ ಬಿಟ್ಟುಕೊಟ್ಟರು. ಬಿಜೆಪಿ ಪಕ್ಷದಲ್ಲಿ ಕಣ್ಣೀರು ಹಾಕದಿದ್ದರು ಅವಕಾಶ ಕಲ್ಪಿಸಿಕೊಡಲಾಗುತ್ತದೆ ಎಂದು ಹೇಳಿದರು.
ದಲಿತರಿಗೆ ಸಿಎಂ ಸ್ಥಾನವಿಲ್ಲ: ರಾಜ್ಯದಲ್ಲಿ ಡಿಕೆಶಿ, ಸಿದ್ದರಾಮಯ್ಯ ಒಂದೊಂದು ಕಡೆ ನಿಂತು ಸಿಎಂ ಆಗೇ ಬಿಟ್ವಿ ಎಂದು ಹೇಳಿಕೆ ನೀಡುತ್ತಿದ್ದಾರೆ. ದಲಿತರಿಗೆ ಸಿಎಂ ಸ್ಥಾನವಿಲ್ಲ, ನಾನೇ ಸಿಎಂ ಆಗುವುದು ಎಂದು ಸಿದ್ದರಾಮೋತ್ಸವ ಮೂಲಕ ರಾಜ್ಯಕ್ಕೆ ಸಂದೇಶ ಸಾರುವ ಕೆಲಸ ಮಾಡುತ್ತಿದ್ದಾರೆ. ಈಗ ಕಾಂಗ್ರೆಸ್‌ನಲ್ಲಿ ಮುನಿಯಪ್ಪನವರು ಮೂಲೆಗುಂಪಾಗಿದ್ದಾರೆ. ಅವರ ಮುಂದಿನ ನಿಲುವು ಕೇವಲ ಸ್ಕ್ವಾಡ್ ಅಥವಾ ಬಸ್ ಸ್ಟಾಂಡ್ ಕಾದು ನೋಡಬೇಕು ಎಂದ ಅವರು, ಕೆ.ಎಚ್. ಮುನಿಯಪ್ಪ ಬಿಜೆಪಿ ಸಿದ್ಧಾಂತ ಒಪ್ಪಿ ಬಂದರೆ ಸ್ವಾಗತಿಸಲಾಗುವುದು ಎಂದರು.
ದೇಶದಲ್ಲಿ ಮತಾಂದರ ಸಂಖ್ಯೆ ಹೆಚ್ಚಳ: ದಲಿತರು ಹೊಟ್ಟೆಪಾಡಿನವರಲ್ಲ, ಮಾಜಿ ಸಿಎಂ ಆದವರು ದಲಿತರ ವಿರುದ್ಧ ಮಾತನಾಡಿದರೆ ಸುಮ್ಮನೆ ಬಿಡಲಾಗುತ್ತದೆಯೇ?, ಸಿದ್ದರಾಮಯ್ಯನವರು ಅಧಿಕಾರಕ್ಕಾಗಿ ಕಾಂಗ್ರೆಸ್ ಸೇರಿದ ಗುಲಾಮ. ಜೈಲಿಗೆ ಕಳುಹಿಸುವ ಉದ್ದೇಶಕ್ಕೆ ದೂರು ದಾಖಲಿಸಿಲ್ಲ. ವರ್ತನೆಯನ್ನು ಬದಲಿಸಿಕೊಳ್ಳದಿದ್ದರೆ ಚುನಾವಣೆಯಲ್ಲಿ ಬುದ್ಧಿ ಕಲಿಯುತ್ತಾರೆ ಎಂದು ದೂರಿದರು.
ದೇಶದಲ್ಲಿ ಮತಾಂದರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಭಯೋತ್ಪಾದಕರ ಸಂಖ್ಯೆ ಜಾಸ್ತಿಯಾಗುತ್ತದೆ. ಕಾಂಗ್ರೆಸ್ ನವರ ತುಷ್ಟೀಕರಣದಿಂದ ಭಯೋತ್ಪಾದನೆ ಚಟುವಟಿಕೆ ನಡೆಯುತ್ತಿದೆ. ಆದರೆ, ಸರ್ಕಾರ ಇದಕ್ಕೆ ಸಹಕಾರ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಮಣ್ಣಿನ ಋಣ ತೀರಿಸುವ ಅವಕಾಶ ಬಿಜೆಪಿ ಕಲ್ಪಿಸಿದೆ. ಜನ ಸೇವೆ ಮಾಡಲು ಹೊತ್ತ ಕನಸು ನನಸಾಗುತ್ತದೆ. ರಾಜಕಾರಣ ಮಾಡುತ್ತಿದ್ದ ಸಂದರ್ಭದಲ್ಲಿ ಬೇರೆ ಬೇರೆ ಪಕ್ಷಗಳ ಬೆಳವಣಿಗೆ ಗಮನಿಸಲಾಗುತ್ತಿದೆ. ಜಿಲ್ಲೆಯಲ್ಲಿ ಬಿಜೆಪಿ ಸದೃಢವಾಗಿದೆ. ಮುಂದಿನ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 4 ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಕೆ.ಎನ್.ವೇಣುಗೋಪಾಲ್, ಮಾಜಿ ಸಚಿವ ವರ್ತೂರು ಆರ್.ಪ್ರಕಾಶ್, ವಕೀಲ ಮಾಗೇರಿ ನಾರಾಯಣಸ್ವಾಮಿ, ಕಾರ್ಯಾಲಯ ಕಾರ್ಯದರ್ಶಿ ರಾಜೇಶ್ ಸಿಂಗ್, ಎಸ್ಟಿ ಮೋರ್ಚಾ ಅಧ್ಯಕ್ಷ ಹನುಮಂತಪ್ಪ, ಮಾಜಿ ಶಾಸಕ ವೈ.ಸಂಪಂಗಿ ಹಾಜರಿದ್ದರು