ನವದೆಹಲಿ: ಫೆಬ್ರವರಿ 2019 ರಲ್ಲಿ ಬಾಲಕೋಟ್ ಮೇಲಿನ ವೈಮಾನಿಕ ಕಾಳಗದಲ್ಲಿ ಪಾಕಿಸ್ಥಾನದ ಎಫ್ -16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದಕ್ಕಾಗಿ ಗ್ರೂಪ್ ಕ್ಯಾಪ್ಟನ್ ಅಭಿನಂದನ್ ವರ್ಧಮಾನ್ ಅವರಿಗೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಸೋಮವಾರ, ನವೆಂಬರ್ 22 ರಂದು ವೀರ ಚಕ್ರವನ್ನು ಪ್ರದಾನ ಮಾಡಿದ್ದಾರೆ.
ಅಭಿನಂದನ್ ಅವರು ಎಫ್ -16 ಅನ್ನು ಹೊಡೆದುರುಳಿಸಿದ ಏಕೈಕ ಮಿಗ್ -21 ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಘಟನೆಯ ಬಳಿಕ ಭಾರತೀಯ ವಾಯುಪಡೆ ಈ ಹಿಂದೆ ಅಭಿನಂದನ್ ಅವರನ್ನು ಗ್ರೂಪ್ ಕ್ಯಾಪ್ಟನ್ ಹುದ್ದೆಗೆ ಬಡ್ತಿ ನೀಡಿತ್ತು.
ಇದನ್ನೂ ಓದಿ:- ಕೊಪ್ಪಳ: ಬೈಕ್ ಸೀಟಿನೊಳಗೆ ಅವಿತುಕೊಂಡ ಹಾವನ್ನು ಹೊಡೆದು ಕೊಂದ ಜನ
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ F-16 ಅನ್ನು ಹೊಡೆದುರುಳಿಸಿದ ಬಳಿಕ ಅಭಿನಂದನ್ ಅವರಿದ್ದ ವಿಮಾನವನ್ನೂ ಪಾಕಿಸ್ಥಾನ ಪಡೆಗಳು ಹೊಡೆದುರುಳಿಸಿ ಅವರನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದ್ದರು.ಆಗ ಅವರು ವಿಂಗ್ ಕಮಾಂಡರ್ ಆಗಿದ್ದರು.
ಫೆಬ್ರವರಿ 27, 2019 ರಂದು ಪಾಕಿಸ್ತಾನದ ವಾಯುಪಡೆಯ ವೈಮಾನಿಕ ದಾಳಿಯನ್ನು ತಡೆಯುವಲ್ಲಿನ ಪಾತ್ರಕ್ಕಾಗಿ ಅಭಿನಂದನ್ ಅವರ ಘಟಕ 51 ಸ್ಕ್ವಾಡ್ರನ್ ಯುನಿಟ್ ನ ಪಾತ್ರವನ್ನೂ ಕೂಡ ಉಲ್ಲೇಖಿಸಲಾಗಿದೆ. ಸಿಆರ್‌ಪಿಎಫ್ ಬೆಂಗಾವಲು ಪಡೆಗಳ ಮೇಲೆ ಜೈಶ್-ಎ-ಮೊಹಮ್ಮದ್ ಉಗ್ರರ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತವು ದಾಳಿ ಯನ್ನು ನಡೆಸಿ ದಿಟ್ಟ ಪ್ರತ್ಯುತ್ತರ ನೀಡಿತ್ತು.