Advertisement
ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತ ಎರಡೂವರೆ ಅಡಿಯಷ್ಟು ನೀರಿನ ಮಟ್ಟ ಹೆಚ್ಚಳವಾಗಿದೆ. ಕಳೆದ ಬಾರಿ ಮೇ ತಿಂಗಳಲ್ಲಿ ಉಡುಪಿ ಜಿಲ್ಲೆಯ ಅಂತರ್ಜಲ ಮಟ್ಟ 11.39 ಮೀಟರ್‌ನಷ್ಟಿದ್ದರೆ, ಈ ವರ್ಷದ ಮೇ ತಿಂಗಳಲ್ಲಿ ಅಂತರ್ಜಲ ಮಟ್ಟ 10.54 ಮೀ. ನಷ್ಟಿದೆ. 0.85 ಮೀ. ಹೆಚ್ಚಿದ್ದು ಅಂದರೆ ಸರಿ ಸುಮಾರು 1 ಮೀಟರ್ (1 ಮೀ. ಅಂದರೆ 3 ಅಡಿಗೆ ಸಮ) ನಷ್ಟು ನೀರಿನ ಮಟ್ಟ ಹೆಚ್ಚಳವಾಗಿದೆ.
ಈ ಬಾರಿ ಕಳೆದ ಬಾರಿಗಿಂತ ಅಂತರ್ಜಲ ಮಟ್ಟ ಹೆಚ್ಚಾಗಲು ಅನೇಕ ಕಾರಣಗಳಿವೆ. ಲಾಕ್‌ಡೌನ್‌ನಿಂದಾಗಿ ಹೊಟೇಲ್, ಬಾರ್, ರೆಸ್ಟೋರೆಂಟ್‌ಗಳು ಹಲವು ಸಮಯದಿಂದ ಮುಚ್ಚಿದ್ದರಿಂದ, ಮದುವೆ ಮತ್ತಿತರ ಶುಭ ಸಮಾರಂಭಗಳು ಇಲ್ಲದಿರುವುದರಿಂದ ನೀರಿನ ಬಳಕೆ ಕಡಿಮೆಯಾಗಿದೆ. ಜಿಲ್ಲೆಯಲ್ಲಿ ಈ ವರ್ಷ ಉತ್ತಮ ಮುಂಗಾರು ಪೂರ್ವ ಮಳೆಯಾಗಿದ್ದು, ಕಾರ್ಕಳ, ಹೆಬ್ರಿ ಭಾಗದಲ್ಲಿ 8-10 ಸಲ ಉತ್ತಮ ಮಳೆಯಾಗಿದೆ. ಕುಂದಾಪುರ, ಬೈಂದೂರು ಭಾಗದಲ್ಲಿ ಸ್ವಲ್ಪ ಮಟ್ಟಿಗೆ ಮಳೆ ಪ್ರಮಾಣ ಕಡಿಮೆ ಯಾಗಿದ್ದರೂ, ಉಡುಪಿ ಹಾಗೂ ಕಾರ್ಕಳ ತಾಲೂಕು ವ್ಯಾಪ್ತಿಯಲ್ಲಿ ಅನೇಕ ಬಾರಿ ಮಳೆ ತಂಪೆರೆದಿದೆ. ಆಗಾಗ ಮಳೆ ಬರುತ್ತಿದ್ದುದರಿಂದ ತೋಟ, ತರಕಾರಿ ಕೃಷಿಗೆ ಕೆರೆ, ಬಾವಿ, ಬೋರ್‌ವೆಲ್, ನದಿ ನೀರಿನ ಬಳಕೆ ಸ್ವಲ್ಪ ಕಡಿಮೆಯಾಗಿದೆ.
Related Articles
ಹಿಂದಿನ ವರ್ಷಗಳಲ್ಲಿ ಮಾರ್ಚ್, ಎಪ್ರಿಲ್‌ನಲ್ಲೇ ನದಿಗಳ ಒಳ ಹರಿವು ನಿಲ್ಲುತ್ತಿದ್ದರೆ, ಈ ವರ್ಷ ಜಿಲ್ಲೆಯ ಅನೇಕ ನದಿಗಳಲ್ಲಿ ಈಗಲೂ ಅಲ್ಪ ಪ್ರಮಾಣದ ಒಳ ಹರಿವು ಇದೆ. ಕುಂದಾಪುರದ ವಾರಾಹಿಯಲ್ಲಂತೂ ಒಳ ಹರಿವು ಉತ್ತಮವಾಗಿದೆ.
Advertisement
ಸೌಪರ್ಣಿಕದಲ್ಲೂ ಕೂಡ ನೀರಿನ ಒಳ ಹರಿವು ಇದೆ. ಕಾರ್ಕಳದ ನದಿಗಳಲ್ಲಂತೂ ಒಳ ಹರಿವು ಕಡಿಮೆಯೇ ಆಗಿಲ್ಲ. ಬಜಗೋಳಿ, ಮಾಳ, ಕೆರ್ವಾಶೆ ಮತ್ತಿತರ ಕಡೆ ಗದ್ದೆಗಳಲ್ಲಿ ಈಗಲೂ ನೀರಿದೆ. ಉಡುಪಿಯ ಸ್ವರ್ಣೆಯಲ್ಲೂ ಈ ಬಾರಿ ನೀರಿನ ಮಟ್ಟ ಉತ್ತಮವಾಗಿದೆ. ಹೆಬ್ರಿಯ ಸೀತಾನದಿಯಲ್ಲೂ ನೀರಿನ ಪ್ರಮಾಣ ಉತ್ತಮವಾಗಿದೆ.
ತಾಲೂಕುವಾರು ಹೇಗಿದೆ?ತಾಲೂಕುವಾರು ಅಂತರ್ಜಲ ಮಟ್ಟ ನೋಡುವುದಾದರೆ ಕಾರ್ಕಳದಲ್ಲಿ ಕಳೆದ ವರ್ಷದ ಮೇ ತಿಂಗಳಲ್ಲಿ 9.91 ಮೀ.ನಷ್ಟಿದ್ದರೆ ಈ ಬಾರಿಯ ಜನವರಿಯಲ್ಲಿ 7.08 ಮೀ., ಮೇಯಲ್ಲಿ 9.05 ಮೀ. ಇದೆ. ಕುಂದಾಪುರದಲ್ಲಿ ಕಳೆದ ವರ್ಷದ ಮೇಯಲ್ಲಿ 9.20 ಮೀ., ಜನವರಿಯಲ್ಲಿ 7.01 ಮೀ. ನಷ್ಟಿದ್ದರೆ, ಮೇಯಲ್ಲಿ 8.49 ಮೀ. ನಷ್ಟಿದೆ. ಉಡುಪಿಯಲ್ಲಿ ಕಳೆದ ವರ್ಷದ ಮೇಯಲ್ಲಿ 11.39 ಮೀ., ಜನವರಿಯಲ್ಲಿ 8.8 ಮೀ. ಹಾಗೂ ಈ ವರ್ಷದ ಮೇಯಲ್ಲಿ 10.54 ಮೀ. ಇದೆ. ಉತ್ತಮ ಬೆಳವಣಿಗೆ
ಈ ಬೇಸಗೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಸಂಚರಿಸಿ, ಅಧ್ಯಯನ ನಡೆಸಿದಾಗ ಜಿಲ್ಲೆಯ ಅಂತರ್ಜಲ ಮಟ್ಟ ಕಳೆದ ಬಾರಿಗಿಂತ ಈ ಬಾರಿ ಉತ್ತಮವಾಗಿರುವುದು ಕಂಡು ಬಂದಿದೆ. ಕಳೆದ ಬಾರಿಗಿಂತ ನೀರಿನ ಮಟ್ಟ ತುಂಬಾ ಮೇಲಿದೆ. ಇದಕ್ಕೆ ಲಾಕ್‌ಡೌನ್, ಆಗಾಗ ಬರುತ್ತಿದ್ದ ಮುಂಗಾರು ಪೂರ್ವ ಮಳೆ, ತೋಟಕ್ಕೆ ನೀರಿನ ಬಳಕೆ ಕಡಿಮೆಯಾಗಿದ್ದು ಪ್ರಮುಖ ಕಾರಣ. ನದಿಗಳಲ್ಲೂ ನೀರಿನ ಮಟ್ಟ ಆಶಾದಾಯಕವಾಗಿದೆ.
-ಡಾ| ಎಂ. ದಿನಕರ ಶೆಟ್ಟಿ, ಹಿರಿಯ ಭೂ ವಿಜ್ಞಾನಿ, ಅಂತರ್ಜಲ ವಿಭಾಗ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಉಡುಪಿ