Advertisement

ಆಳಂದದಲ್ಲಿ ಅಂತರ್ಜಲ ಅಭಿವೃದ್ಧಿ

11:38 AM Feb 12, 2018 | Team Udayavani |

ಕಲಬುರಗಿ: ಮಳೆಗಾಲದಲ್ಲಿ ಬಿದ್ದ ನೀರನ್ನು ಸಂಗ್ರಹಿಸಿ ಇಂಗಿಸಿ ಹಾಗೂ ಮಿತವಾಗಿ ಬಳಸಿ ಉಳಿಸಿದ್ದಲ್ಲಿ ಮಾತ್ರ ಈ ಭಾಗವನ್ನು ಮರಳುಗಾಡು ಆಗುವುದನ್ನು ತಪ್ಪಿಸಬಹುದಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಖಾತೆ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.

Advertisement

ಆಳಂದ ತಾಲೂಕು ಮಾದನ ಹಿಪ್ಪರಗಾ ಗ್ರಾಮದಲ್ಲಿ ಅಂತರ್ಜಲ ಅಭಿವೃದ್ಧಿಪಡಿಸುವ ವಿಶೇಷ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಆಳಂದ ಕ್ಷೇತ್ರವನ್ನು ಮರುಭೂಮಿಯನ್ನಾಗಿಸಲು ತಪ್ಪಿಸಲು ಸಣ್ಣ ನೀರಾವರಿ ಕಾರ್ಯದರ್ಶಿ ಮತ್ತು ಮುಖ್ಯ ಇಂಜಿನಿಯರರನ್ನು ಸಿರಪುರ ಮಾದರಿ ಅಂತರ್ಜಲ ಅಭಿವೃದ್ಧಿ ಅಧ್ಯಯನಕ್ಕೆ ಕಳುಹಿಸಿ 20 ಕೋಟಿ ರೂ. ಮಂಜೂರು ಮಾಡಿ ಆಳಂದ ಕ್ಷೇತ್ರದಲ್ಲಿ ಅಂತರ್ಜಲ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ಹೇಳಿದರು. 

ಚುನಾವಣೆ ಘೋಷಣೆಯಾಗುವುದಕ್ಕಿಂತ ಮೊದಲೇ ಕಾಮಗಾರಿ ಪ್ರಾರಂಭಿಸಿ ಮಳೆಗಾಲ ಪ್ರಾರಂಭ ಆಗುವುದರೊಳಗಾಗಿ ಪೂರ್ಣಗೊಳಿಸಿ ನೀರು ಸಂಗ್ರಹವಾಗುವಂತೆ ನೋಡಿಕೊಳ್ಳಬೇಕು. ಈ ವರ್ಷವು ಸ್ವಲ್ಪ ಮಟ್ಟಿಗೆ ಮಳೆಯಾಗಿದೆ. ಯಾವುದೇ ಜಲಾಶಯ ಭರ್ತಿಯಾಗಿಲ್ಲ. ಇದು ಎಚ್ಚರಿಕೆ ಘಂಟೆಯಾಗಿದೆ. ಒಕ್ಕಲುತನಕ್ಕೆ ಅವಲಂಭಿಸಿರುವ ಕುಟುಂಬಗಳು ತುಂಬಾ ಕಷ್ಟದಲ್ಲಿವೆ ಎಂದು ಹೇಳಿದರು. 

ಶಿರಾ ಮತಕ್ಷೇತ್ರದಲ್ಲಿ ಕೊಳವೆ ಬಾವಿ 1200 ಅಡಿ ಕೊರೆದರೂ ನೀರು ಸಿಗುತ್ತಿದ್ದಿಲ್ಲ. ಈ ಹಿಂದಿನ ಯುಪಿಎ ಸರ್ಕಾರ 200 ಕೋಟಿ ರೂ. ನೀಡಿದ್ದರಿಂದ ಶಿರಾ ಮತಕ್ಷೇತದ ಹಳ್ಳಕೊಳ್ಳಗಳಲ್ಲಿ ಸುಮಾರು 35-40 ಕಿಮೀ ನಷ್ಟು ನೀರು ನಿಲ್ಲಿಸುವ ಕೆಲಸ ಮಾಡಲಾಗಿದೆ. ಸುಮಾರು ಕಡೆಗಳಲ್ಲಿ ಬ್ಯಾರೇಜ್‌ ನಿರ್ಮಿಸಲಾಗಿದೆ. ಇದರಿಂದಾಗಿ ಸಧ್ಯ ಅಂತರ್ಜಲಮಟ್ಟ 100 ಅಡಿಗೆ ಬಂದಿದೆ. ಇದೇ ಮಾದರಿ ಕೆಲಸ ಆಳಂದ ಮತಕ್ಷೇತ್ರದಲ್ಲಿ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಆರ್‌. ಪಾಟೀಲ ಮಾತನಾಡಿ, ಮುಖ್ಯಮಂತ್ರಿಗಳು ಈ ಭಾಗದಲ್ಲಿ ಅಂತರ್ಜಲ ಹೆಚ್ಚಿಸಲು ವಿಶೇಷ ಕಾರ್ಯಕ್ರಮ ನೀಡಿ 90 ಕೋಟಿ ರೂ. ಘೋಷಿಸಿದ್ದಾರೆ. ಈ ಪೈಕಿ ಮೊದಲ ಹಂತವಾಗಿ 20 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ವಿಶೇಷ ಯೋಜನೆಯಡಿ ಮಾದನ ಹಿಪ್ಪರಗಾ ವ್ಯಾಪ್ತಿಯ ಹಳ್ಳಗಳಲ್ಲಿ 16 ಕಿಮೀ ವರೆಗೆ ಹೂಳೆತ್ತುವ ಹಾಗೂ ಪ್ರತಿ 200 ಮೀಟರಿಗೊಂದು ಬಾಂದಾರ ನಿರ್ಮಿಸಿ ನೀರು ನಿಲ್ಲಿಸಲಾಗುವುದು. ಇದರಿಂದ ಅಂತರ್ಜಲ ಹೆಚ್ಚಿಗೆ ಆಗುವುದು ಎಂದು ಹೇಳಿದರು.

Advertisement

ಮಾದನ ಹಿಪ್ಪರಗಾದ ಶ್ರೀ ಅಭಿನವ ಶಿವಲಿಂಗ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಅಕ್ಕಲಕೋಟ ಮತಕ್ಷೇತ್ರದ ಶಾಸಕ ಸಿದ್ದರಾಮ ಮೇತ್ರೆ, ಜಿಪಂ ಸದಸ್ಯ ಸಿದ್ದರಾಮ ಪ್ಯಾಟಿ, ಮುಖಂಡರಾದ ವಿಠ್ಠಲರಾವ ಪಾಟೀಲ, ಸಿದ್ರಾಮಪ್ಪ ದಂಗಾಪುರ, ಭೀಮರಾವ ಪಾಟೀಲ, ರಮೇಶ ಲೋಹಾರ, ಬಸವಂತರಾವ ಪಾಟೀಲ ಧಂಗಾಪುರ, ಸಲಾಂ ಸಗರಿ, ಶರಣಬಸಪ್ಪ ಭೂಸನೂರ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಆರ್‌. ರುದ್ರಯ್ಯ, ತಹಶೀಲ್ದಾರ ಬಸವರಾಜ ಬೆಣ್ಣೆಶಿರೂರ, ವಿಜಯಪುರ ವಲಯದ ಮುಖ್ಯ ಇಂಜಿನಿಯರ್‌ ಕೆ.ಎಚ್‌. ರಾಜು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next