Advertisement

ಕೆಂಪಗೆರಿ ಜಲಾಶಯ ಸುತ್ತ ಅಂತರ್ಜಲ ವಕ್ರ ದೃಷ್ಟಿ

12:06 PM Nov 17, 2019 | Team Udayavani |

ನರಗುಂದ: ಪಟ್ಟಣದ ಐದು ಬಡಾವಣೆಗಳಲ್ಲಿ ತೀವ್ರ ಭೂಕುಸಿತಕ್ಕೆ ಕಾರಣವಾದ ಅಂತರ್ಜಲದ ವಕ್ರದೃಷ್ಟಿ ಪಟ್ಟಣದ ಕುಡಿಯುವ ನೀರಿನ ಕೆಂಪಗೆರಿ ಜಲಾಶಯ ಸುತ್ತ ಆವರಿಸಿದೆ. ದಶಕಗಳ ಕಾಲ ಜನರ ದಾಹ ನೀಗಿಸಿದ ಈ ಜಲಾಶಯದ ಅಸ್ತಿತ್ವಕ್ಕೆ ಭೂ ವಿಜ್ಞಾನಿಗಳ ಸೂಚನೆಯಿಂದಾಗಿ ಪೆಟ್ಟು ಬೀಳುವ ಕಾಲ ಸನ್ನಿಹಿತವಾಗಿದೆ.

Advertisement

ಕಳೆದ ತಿಂಗಳು ಅಧ್ಯಯನ ನಡೆಸಿದ ಹಾಗೂ 2009ರಲ್ಲಿ ಅಧ್ಯಯನ ನಡೆಸಿದ್ದ ಭೂ ವಿಜ್ಞಾನಿಗಳ ಅಭಿಪ್ರಾಯದಲ್ಲಿ ಅಂತರ್ಜಲ ಹೆಚ್ಚಳಕ್ಕೆ ಕಾರಣವಾದ ಪ್ರಮುಖ ಮೂರು ಅಂಶಗಳಲ್ಲಿ ಕೆಂಪಗೆರಿ ಜಲಾಶಯವೂ ಒಂದಾಗಿದೆ.

23 ವರ್ಷಗಳ ಹಿನ್ನೆಲೆ: ದಶಕಗಳ ಹಿಂದೆ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸಲು ಪಟ್ಟಣದ ಸಿದ್ಧೇಶ್ವರ ಗುಡ್ಡದ ವಾರೆಯಲ್ಲಿ ಎತ್ತರ ಪ್ರದೇಶದಲ್ಲಿ 1996ರಲ್ಲಿ ಈ ಜಲಾಶಯ ನಿರ್ಮಾಣವಾಗಿದೆ. ಆಗ ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿತ್ತು. 59.50 ಎಕರೆ ಪ್ರದೇಶದಲ್ಲಿ ನಿರ್ಮಿತ ಜಲಾಶಯ ಪಕ್ಕದಲ್ಲೇ ನೀರು ಶುದ್ಧೀಕರಣ ಘಟಕವಿದೆ. 23ವರ್ಷಗಳಿಂದ ಇದೇ ಜಲಾಶಯದಿಂದ ಪಟ್ಟಣಕ್ಕೆ ನಲ್ಲಿ ಮೂಲಕ ನೀರು ಪೂರೈಸಲಾಗುತ್ತಿತ್ತು. ಕಳೆದ ವರ್ಷ ಪಟ್ಟಣಕ್ಕೆ ನವಿಲುತೀರ್ಥ ಜಲಾಶಯದಿಂದ ಪೈಪ್‌ಲೈನ್‌ ಮೂಲಕ ನೀರು ಸರಬರಾಜು ಮಾಡುವ 24×7 ಯೋಜನೆ ಅನುಷ್ಠಾನ ಬಳಿಕ ಜಲಾಶಯದಿಂದ ನೀರಿನ ಬಳಕೆ ಸ್ಥಗಿತ ಮಾಡಲಾಗಿತ್ತು. ಇದೀಗ ವಿಜ್ಞಾನಿಗಳ ಸೂಚನೆ ಮೇರೆಗೆ ಜಲಾಶಯ ನೀರನ್ನು ಖಾಲಿ ಮಾಡಲು ಪುರಸಭೆ ಮುಂದಾಗಿದೆ.

ಸೋರಿಕೆ ಹಿನ್ನೆಲೆ: ಜಲಾಶಯ ನಿರಂತರ ಸೋರಿಕೆಯಲ್ಲಿ ಗುರುತಿಸಿಕೊಂಡಿದೆ. 2009ರಲ್ಲಿ ಐದು ಬಡಾವಣೆಗಳಲ್ಲಿ ಭೂಕುಸಿತ ಘಟನೆಗಳಿಂದ ಅಧ್ಯಯನ ನಡೆಸಿದ ಭೂ ವಿಜ್ಞಾನಿಗಳ ತಂಡ ಅಂತರ್ಜಲ ಹೆಚ್ಚಳದಿಂದ ಈ ಸಮಸ್ಯೆ ಎದುರಾಗಿದೆ. ಕೆಂಪಗೆರಿ ಜಲಾಶಯ, ಗುಡ್ಡದ ಮೇಲ್ಭಾಗ ಬಿರುಕು, ಚರಂಡಿಗಳ ಸೋರಿಕೆಯಿಂದ ಅಪಾರ ಪ್ರಮಾಣ ನೀರು ಇಂಗುವಿಕೆ ಅಂತರ್ಜಲ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಅಧ್ಯಯನ ವರದಿ ನೀಡಿದ್ದು ಸ್ಮರಿಸಬಹುದು.

2019ರಲ್ಲೂ ಅಧ್ಯಯನ: ಮತ್ತೆ ಭೂಕುಸಿತ ಘಟನೆಗಳ ಹಿನ್ನೆಲೆಯಲ್ಲಿ ಅ. 30, 31ರಂದು ಅಧ್ಯಯನ ನಡೆಸಿದ ಭೂ ವಿಜ್ಞಾನಿಗಳ ತಂಡದ ಬಳಿಕ ಸ್ಥಳಕ್ಕಾಗಮಿಸಿದ ಗಣಿಮತ್ತು ಭೂ ವಿಜ್ಞಾನ ಇಲಾಖೆ ಹೆಚ್ಚುವರಿ ನಿರ್ದೇಶಕ ಶಶಿಕಾಂತ ರೆಡ್ಡಿ ಅವರು ಕೆಂಪಗೆರಿ ಜಲಾಶಯದತ್ತ ಬೊಟ್ಟು ತೋರಿಸಿದ್ದಲ್ಲದೇ ಜಲಾಶಯ ನೀರು ಖಾಲಿ ಮಾಡುವಂತೆ ಪುರಸಭೆ ಅಧಿಕಾರಿಗಳಿಗೆ ಸೂಚಿಸಿದ್ದು, ಅಂತರ್ಜಲ ದೃಷ್ಟಿ ಕೆಂಪಗೆರಿ ಮೇಲೆ ವಕ್ಕರಿಸಿದ್ದಕ್ಕೆ ಸಾಕ್ಷಿಯಾಗಿದೆ. ಸಾಲದೆಂಬಂತೆ ಕೆಂಪಗೆರಿ ಜಲಾಶಯ ಸುತ್ತ ಇರುವ ಕಂದಕದಲ್ಲಿ ಪತ್ತೆಯಾದ ಅಪರೂಪದ ಕಲ್ಲೊಂದನ್ನು ಗುರುತಿಸಿದ ವಿಜ್ಞಾನಿಗಳ ತಂಡ ಅದು ಡೊಲೋರೇಟ್‌ ಕಲ್ಲು ಎಂದು ಕರೆದಿದ್ದಾರೆ. ಈ ಕಲ್ಲು ಸಾಗಿದಲ್ಲೆಲ್ಲ ತಡೆಗೋಡೆಯಂತೆ ನಿರ್ಮಾಣವಾಗಿ ಅಂತರ್ಜಲ ಮತ್ತೂಂದು ಬದಿಗೆ ಹರಿ ಬಿಡುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದು ಕೂಡ ಕೆಂಪಗೆರಿ ಸುತ್ತ ವಿಜ್ಞಾನಿಗಳ ದೃಷ್ಠಿ ನೆಟ್ಟಿದ್ದು ನಿದರ್ಶನವಾಗಿದೆ.

Advertisement

ಕೆರೆ ಸೋರಿಕೆ: ಕೆಂಪಗೆರಿ ಜಲಾಶಯ ಸೋರಿಕೆಗೆ ಪಕ್ಕದ ಸೋಮಾಪುರ ಕಾಲುವೆಯಲ್ಲಿ ನಿರಂತರ ಸಣ್ಣಗೆ ನೀರು ಹರಿಯುತ್ತಿರುವುದು ಮತ್ತು ಕಾಲುವೆ ಆಚೆಗೆ ಕೆಲ ರೈತರ ಜಮೀನುಗಳು ನಿರಂತರ ತೇವಾಂಶದಿಂದ ಸವಳು ಭೂಮಿಯಾಗಿ ಪರಿವರ್ತನೆಗೊಂಡಿದ್ದು ವಿಪರ್ಯಾಸ. ಹೀಗಾಗಿ 23 ವರ್ಷಗಳ ಕಾಲ ಜನರ ದಾಹ ನೀಗಿಸಿದ ಕೆಂಪಗೆರಿ ಜಲಾಶಯ ತನ್ನ ಅಸ್ತಿತ್ವ ಕಳೆದುಕೊಳ್ಳಲಿದ್ದು, ಇದು ತುಂಬಿ ನಿಲ್ಲುವಷ್ಟು ಭೂಕುಸಿತಕ್ಕೆ ದಾರಿಯಾಗುತ್ತಿದೆ ಎಂಬ ವಿಜ್ಞಾನಿಗಳ ಅಭಿಪ್ರಾಯ ಇದನ್ನು ಸಾಕ್ಷೀಕರಿಸಿದೆ.

 

-ಸಿದ್ಧಲಿಂಗಯ್ಯ ಮಣ್ಣೂರಮಠ

Advertisement

Udayavani is now on Telegram. Click here to join our channel and stay updated with the latest news.

Next