ಹುಬ್ಬಳ್ಳಿ: ಮುಂದಿನ ಪೀಳಿಗೆಗಾಗಿ ಅಂತರ್ಜಲ ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ನೀರಿನ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕೆಂದು ಪ್ರಧಾನ ಹಿರಿಯ ದಿವಾಣಿ ನ್ಯಾಯಾಧಿಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷ ರವೀಂದ್ರ ಆರಿ ಹೇಳಿದರು.
ಇಲ್ಲಿನ ಜಲಮಂಡಳಿ ವಿಭಾಗ ಕಚೇರಿಯಲ್ಲಿ ಜಲಮಂಡಳಿ, ಮಹಾನಗರ ಪಾಲಿಕೆ, ತಾಲೂಕು ಕಾನೂನು ಸೇವಾ ಸಮಿತಿ, ಅಭಿಯೋಜನಾ ಇಲಾಖೆ ವಕೀಲರ ಸಂಘದ ಆಶ್ರಯದಲ್ಲಿ ವಿಶ್ವ ಜಲ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಕಾನೂನು ಸಾಕ್ಷರತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹುಟ್ಟಿನಿಂದ ಸಾಯುವವರೆಗೂ ನೀರು ಮಹತ್ವ ಪಡೆದುಕೊಂಡಿದೆ. ಕೆರೆಗಳು ಪಶು ಪಕ್ಷಿಗಳಿಗೆ ನೀರೊದಗಿಸುತ್ತಿದ್ದವು. ಆದರಿಂದು ಕೆರೆಗಳು ಮಾಯವಾಗಿ ಅಂತರ್ಜಲ ಮಟ್ಟ ಕುಸಿಯುತ್ತಿವೆ. ಪಶ್ಚಿಮ ಘಟ್ಟಗಳಲ್ಲಿ ಮರಗಳು ಜಾಸ್ತಿ ಇರುವುದರಿಂದ ಮಳೆ ಹೆಚ್ಚಾಗುತ್ತದೆ. ಈ ಭಾಗದಲ್ಲೂ ಮರಗಳನ್ನು ಹೆಚ್ಚಾಗಿ ಬೆಳೆಸಿ, ಜಾಸ್ತಿ ಮಳೆ ಪಡೆಯಬಹುದು. ಮೈಸೂರಿನ ರೀತಿಯಲ್ಲಿ ಹುಬ್ಬಳ್ಳಿ-ಧಾರವಾಡ ನಿರ್ಮಾಣವಾಗಬೇಕು. ಜಲ ದಿನಾಚರಣೆ ಈ ದಿನಕ್ಕೆ ಸೀಮಿತವಾಗದೇ ವರ್ಷ ಪೂರ್ತಿ ನಡೆಯಬೇಕೆಂದು ಹೇಳಿದರು.
ಪಾಲಿಕೆ ಆಯುಕ್ತ ಡಾ|ಬಿ.ಗೋಪಾಲಕೃಷ್ಣ ಮಾತನಾಡಿ, ಮುಂದಿನ ಕಾರ್ಯಕ್ರಮಗಳಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಆಹ್ವಾನಿಸಲಾಗುವುದು. ಜೀವನದಲ್ಲಿ ಸಾಧನೆ ಮಾಡಲು ಶಿಸ್ತು-ಪರಿಶ್ರಮ ಅವಶ್ಯ. ಅಂತರ್ಜಲ ಸಂರಕ್ಷಣೆಗೆ ಎಲ್ಲರೂ ಶಪಥ ಮಾಡಬೇಕು. ನಮ್ಮ ಜವಾಬ್ದಾರಿ ಅರಿತು ಕೆಲಸ ನಿರ್ವಹಿಸಬೇಕು. ನಮಗೆ ಬಳಕೆಗೆ ಸಿಗುವ ನೀರನ್ನು ಇತಿಮಿತಿಯಲ್ಲಿ ಉಪಯೋಗಿಸಬೇಕಾಗಿದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಸಿ.ಆರ್.ಪಾಟೀಲ್ ಮಾತನಾಡಿ, ಮಳೆ ನೀರು ಪೋಲಾಗುವುದನ್ನು ತಪ್ಪಿಸಬೇಕು. ಇಂಗು ಗುಂಡಿಗಳನ್ನು ನಿರ್ಮಿಸಬೇಕು. ಜಲಮಂಡಳಿ-ಪಾಲಿಕೆ ಕೂಡಿಕೊಂಡು ಮಳೆ ನೀರನ್ನು ಸಂರಕ್ಷಣೆ ಮಾಡಲು ತಂಡ ರಚಿಸಲು ಮುಂದಾಗಬೇಕು ಎಂದು ಹೇಳಿದರು. ಕೆಎಲ್‌ಇ ಐಟಿ ಕಾಲೇಜಿನ ಪ್ರಾಧ್ಯಾಪಕ ಹಾಗೂ ಡೀನ್ ಡಾ|ಶರದ ಜೋಶಿ ಉಪನ್ಯಾಸ ನೀಡಿ, ಪಾಶ್ಚಿಮಾತ್ಯರಂತೆ ಜಲ ದಿನವನ್ನು ಈ ದಿನಕ್ಕೆ ಸೀಮಿತಗೊಳಿಸಬಾರದು. ಸಮಾಜದ ಕೊನೆಯ ಘಟಕಕ್ಕೆ ನೀರು ಮುಟ್ಟಿಸಬೇಕು. ನೀರಿನ ಸದ್ಬಳಕೆ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಜಲಮಂಡಳಿ ಕಾರ್ಯಪಾಲಕ ಅಭಿಯಂತರ ವಿ.ಟಿ. ಗುಡಿ, ದೀಪಕ ಆನದಿನ್ನಿ, ರಿಯಾಜ್, ರಂಜಿತಾ, ಮಹಾಂತೇಶ ಹುಲಗೂರ ಇನ್ನಿತರರಿದ್ದರು. ಗಂಗಾಧರ ಬ್ಯಾಹಟ್ಟಿ ನಿರೂಪಿಸಿದರು. ಸಿದ್ದಮ್ಮ ಪ್ರಾರ್ಥಿಸಿದರು. ಅಕ್ಷಯ ಸ್ವಾಗತಿಸಿದರು.