Advertisement

ಅಪಾರ್ಟ್‌ಮೆಂಟ್‌ಗಳ ಸುತ್ತ ಅಂತರ್ಜಲ ಪಾತಾಳಕ್ಕೆ

11:10 PM Jul 03, 2019 | Team Udayavani |

ಬೆಂಗಳೂರು: ನಗರಕ್ಕೆ ವಲಸೆ ಬಂದವರಿಗೆಲ್ಲಾ ಅಪಾರ್ಟ್‌ಮೆಂಟ್‌ ಸಂಸ್ಕೃತಿ ಆಶ್ರಯ ನೀಡುವಲ್ಲಿ ಯಶಸ್ವಿ ಆಗಿರಬಹುದು. ಆದರೆ, ಇದರೊಂದಿಗೆ ನಿಧಾನವಾಗಿ ತನ್ನ ಸುತ್ತಲಿನ ಒಡಲಾಳವನ್ನೂ ಬರಿದು ಮಾಡುತ್ತಿದೆ. ಇದು ಮತ್ತೂಂದು ರೀತಿಯ ಆತಂಕಕ್ಕೆ ಕಾರಣವಾಗಿದ್ದು, ಈಗ ಅದು ನಿಷೇಧದ ಚಿಂತನೆಗೆ ತಂದು ಹಚ್ಚಿದೆ.

Advertisement

ಹೌದು, ಅಪಾರ್ಟ್‌ಮೆಂಟ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ತಲೆಯೆತ್ತಿರುವ ಬೆಂಗಳೂರು ಪೂರ್ವ, ಆಗ್ನೇಯ ಮತ್ತು ನೈರುತ್ಯ ಭಾಗ ಹಾಗೂ ಹಳೆಯ ಬೆಂಗಳೂರಿನ ವ್ಯಾಪ್ತಿಯಲ್ಲಿನ ಅಂತರ್ಜಲಮಟ್ಟವನ್ನು ಹೋಲಿಸಿದರೆ, ಭೂಮಿಯ ಒಳಲಾಳದ ಮೇಲೆ ಒತ್ತಡ ಬೀಳುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಒಂದೇ ಕಡೆ ಸಾವಿರಾರು ಕುಟುಂಬಗಳ ನೀರಿನ ದಾಹ ನೀಗಿಸಲು ಯಥೇತ್ಛವಾಗಿ ಕೊಳವೆಬಾವಿಗಳನ್ನು ಕೊರೆಯಲಾಗುತ್ತಿದೆ. ಇದರಿಂದ ವರ್ಷದಿಂದ ವರ್ಷಕ್ಕೆ ಅಂತರ್ಜಲಮಟ್ಟ ಕುಸಿಯುತ್ತಿದೆ.

ರಾಜ್ಯ ಅಂತರ್ಜಲ ನಿರ್ದೇಶನಾಲಯ ನೀಡುವ ಅಂಕಿ-ಅಂಶಗಳು ಕೂಡ ಇದಕ್ಕೆ ಪೂರಕವಾಗಿವೆ. ಅಪಾರ್ಟ್‌ಮೆಂಟ್‌ಗಳು ಹೆಚ್ಚಾಗಿರುವ ಭಾಗಗಳಲ್ಲಿ ಅಂದರೆ ನಗರದ ಪೂರ್ವ, ದಕ್ಷಿಣ ಮತ್ತು ಆನೇಕಲ್‌ ತಾಲೂಕು ವ್ಯಾಪ್ತಿಯಲ್ಲಿ 10 ವರ್ಷಗಳಲ್ಲಿ ಅಂತರ್ಜಲಮಟ್ಟ ಭೂಮಿಯ ಮಟ್ಟದಿಂದ ಕನಿಷ್ಠ 2015ರಿಂದ ಗರಿಷ್ಠ 32.53 ಮೀಟರ್‌ ಆಳಕ್ಕೆ ಹೋಗಿದ್ದು, ಕನಿಷ್ಠ 4.68ರಿಂದ ಗರಿಷ್ಠ 18.58 ಮೀಟರ್‌ನಷ್ಟು ಕುಸಿತ ಕಂಡಿದೆ. ಕಾವೇರಿ ನೀರಿನ ಸಂಪರ್ಕ ಹೊಂದಿರುವ 22,645 ಅಪಾರ್ಟ್‌ಮೆಂಟ್‌ಗಳ ಪೈಕಿ ಪೂರ್ವದಲ್ಲೇ 5,009, ದಕ್ಷಿಣದಲ್ಲಿ 3,661, ಆಗ್ನೇಯದಲ್ಲಿ 3,357 ಇವೆ.

ಅಪಾರ್ಟ್‌ಮೆಂಟ್‌ ಇದ್ದಲ್ಲಿ ಸಾವಿರ ಅಡಿ:”ಅಪಾರ್ಟ್‌ಮೆಂಟ್‌ಗಳು ಮತ್ತು ಇತರೆ ಭಾಗಗಳನ್ನು ಪ್ರತ್ಯೇಕಿಸಿ ಅಂತರ್ಜಲಮಟ್ಟದ ಬಗ್ಗೆ ಅಧಿಕೃತವಾಗಿ ಯಾವುದೇ ಅಧ್ಯಯನ ಆಗಿಲ್ಲ. ಆದರೆ, ಬಹುತೇಕ ಅಪಾರ್ಟ್‌ಮೆಂಟ್‌ಗಳು ಕಾವೇರಿ ನೀರಿನ ಸಂಪರ್ಕ ಪಡೆದಿಲ್ಲ. ಬದಲಿಗೆ ಅವುಗಳು ಕೊಳವೆಬಾವಿಗಳನ್ನು ಅವಲಂಬಿಸಿವೆ. ಹಾಗಾಗಿ ಈ ಬಹುಮಹಡಿ ಕಟ್ಟಡಗಳಿರುವ ಕಡೆಗಳಲ್ಲಿ ಸಾವಿರ ಅಡಿಗಿಂತ ಹೆಚ್ಚು ಆಳಕ್ಕೆ ಹೋಗಿರುವುದನ್ನು ಕಾಣಬಹುದು. ಅದೇ ರೀತಿ, ನಗರದ ಮಲ್ಲೇಶ್ವರ, ರಾಜಾಜಿನಗರ, ಸದಾಶಿವನಗರ, ನಾಗರಬಾವಿ ಮತ್ತಿತರ ಪ್ರದೇಶಗಳಲ್ಲಿ ಅಷ್ಟಾಗಿ ಈ ಅಪಾರ್ಟ್‌ಮೆಂಟ್‌ ಸಂಸ್ಕೃತಿ ಇಲ್ಲದಿರುವುದರಿಂದ 500 ಅಡಿಗೇ ನೀರು ಸಿಕ್ಕಿ ಬಿಡುತ್ತದೆ’ ಎಂದು ಜಲಮಂಡಳಿಯ ಮುಖ್ಯ ಎಂಜಿನಿಯರೊಬ್ಬರು ಮಾಹಿತಿ ನೀಡಿದರು.

“ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಕೇಂದ್ರೀಯ ಅಂತರ್ಜಲ ಮಂಡಳಿಯು ಅಂತರ್ಜಲ ಮಟ್ಟವನ್ನು ಅಳೆಯುವ ಸುಮಾರು 60 ಕೊಳವೆಬಾವಿಗಳನ್ನು ನಿರ್ಮಿಸಿದೆ. ಆ ಪೈಕಿ ಕೋರ್‌ ಬೆಂಗಳೂರು ಅಂದರೆ 250 ಚದರ ಕಿ.ಮೀ. ವ್ಯಾಪ್ತಿಯಲ್ಲಿ 8ರಿಂದ 10 ಕೊಳವೆಬಾವಿಗಳಿದ್ದರೆ, ಉಳಿದವು ಹೊರಭಾಗಗಳಲ್ಲಿ ಇವೆ. ಅವುಗಳ ದತ್ತಾಂಶಗಳನ್ನು ವಿಶ್ಲೇಷಿಸಿದಾಗಲೂ ಈ ವ್ಯತ್ಯಾಸವನ್ನು ಕಾಣಬಹುದು. ಹೃದಯಭಾಗದಲ್ಲಿ ಈಗಲೂ 50 ಮೀಟರ್‌ ಒಳಗೇ ನೀರಿನ ಮೂಲ ಸಿಗುತ್ತದೆ. ಯಾಕೆಂದರೆ ಇಂದಿಗೂ ಕಾವೇರಿ ಪೈಪ್‌ಲೈನ್‌ಗಳು ಹಾದುಹೋಗಿವೆ. ಆದರೆ, ಹೊರವಲಯದಲ್ಲಿ 60 ಮೀಟರ್‌ಗಿಂತಲೂ ಆಳಕ್ಕಿಳಿಯಬೇಕಾಗುತ್ತದೆ’ ಎಂದು ಕೇಂದ್ರೀಯ ಅಂತರ್ಜಲ ಮಂಡಳಿ ಹಿರಿಯ ವಿಜ್ಞಾನಿಯೊಬ್ಬರು “ಉದಯವಾಣಿ’ಗೆ ಸ್ಪಷ್ಟಪಡಿಸಿದರು.

Advertisement

ಎರಡೂವರೆ ಪಟ್ಟು ಹೆಚ್ಚು ಬಳಕೆ: “ಭೂಮಿಯ ಮೇಲೆ ನೀರಿನ ಲಭ್ಯತೆ ನಮಗೆ ಗೊತ್ತಿದೆ. ಇದೇ ರೀತಿ, ಭೂಮಿಯ ಒಳಗಿನ ನೀರಿನ ಲಭ್ಯತೆ ಗೊತ್ತಿಲ್ಲ. ಈ ಬಗ್ಗೆ ನಿಖರ ಮಾಹಿತಿ ನೀಡುವಂತೆ ನಾವು ಈ ಹಿಂದೆಯೇ ಕೇಂದ್ರೀಯ ಅಂತರ್ಜಲ ಮಂಡಳಿಗೆ ಪತ್ರ ಬರೆದಿದ್ದೆವು. ಈವರೆಗೆ ವರದಿ ಬಂದಿಲ್ಲ. ಆದರೆ, ಅಂತರ್ಜಲ ಮರುಪೂರಣಕ್ಕಿಂತ ಎರಡೂವರೆ ಪಟ್ಟು ನೀರನ್ನು ಭೂಮಿಯ ಆಳದಿಂದ ಎತ್ತುತ್ತಿದ್ದೇವೆ ಎಂಬುದು ಮಾತ್ರ ಗೊತ್ತಾಗಿದೆ. ಈ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಜಲಮಂಡಳಿ ಅಧ್ಯಕ್ಷ ತುಷಾರ್‌ ಗಿರಿನಾಥ್‌ ತಿಳಿಸಿದರು.

ರಸ್ತೆಯ ಮೇಲೂ ಒತ್ತಡ: ಅಪಾರ್ಟ್‌ಮೆಂಟ್‌ಗಳಿಂದ ಅಂತರ್ಜಲಕ್ಕೆ ಮಾತ್ರ ಅಲ್ಲ; ರಸ್ತೆಯ ಮೇಲೂ ಒತ್ತಡ ಬೀಳುತ್ತಿದೆ. ಸಾಮಾನ್ಯವಾಗಿ ಒಂದೇ ಅವಧಿಯಲ್ಲಿ ಏಕಕಾಲದಲ್ಲಿ ಸಾವಿರಾರು ವಾಹನಗಳು ರಸ್ತೆಗಿಳಿಯುತ್ತವೆ. ಆದರೆ, ಅಷ್ಟೊಂದು ದಟ್ಟಣೆಯನ್ನು ತಡೆದುಕೊಳ್ಳುವ ಸಾಮರ್ಥ್ಯ ನಗರದ ರಸ್ತೆಗಳಿವೆಯೇ? ಇಲ್ಲ. ಇದು ವಾಹನಗಳ ದಟ್ಟಣೆಗೆ ಕಾರಣವಾಗುತ್ತಿದೆ. ಗಂಟೆಗಟ್ಟಲೆ ಜನ ಸಂಚಾರದಟ್ಟಣೆ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಸಮಸ್ಯೆ ನಿವಾರಣೆಗಾಗಿ ರಸ್ತೆ ವಿಸ್ತರಣೆ ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಆದರೆ, ನಿರೀಕ್ಷಿತ ಫ‌ಲ ದೊರೆಯುತ್ತಿಲ್ಲ.

ಪ್ರತ್ಯೇಕ ನೀರುಗಾಲುವೆ ಇಲ್ಲ: ಅಪಾರ್ಟ್‌ಮೆಂಟ್‌ಗಳಲ್ಲಿರುವ ನೂರಾರು ಫ್ಲ್ಯಾಟ್‌ಗಳಿಂದ ಹೊರ ಬರುವ ತ್ಯಾಜ್ಯ ನೀರು ಹರಿದು ಹೋಗಲು ಪ್ರತ್ಯೇಕ ನೀರುಗಾಲುವೆಗಳೇನೂ ಇಲ್ಲ. ಇದು ಸುತ್ತಲಿರುವ ನಿವಾಸಿಗಳಿಗೂ ಪರಿಣಾಮ ಬೀರುತ್ತಿದೆ. ಬೃಹದಾಕಾರದ ಅಪಾರ್ಟ್‌ಮೆಂಟ್‌ಗಳಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ನಿರ್ಮಿಸಲಾಗಿರುತ್ತದೆ. ಆದರೆ, ಮಧ್ಯಮ ಅಥವಾ ಸಣ್ಣ ಗಾತ್ರದ ಅಪಾರ್ಟ್‌ಮೆಂಟ್‌ಗಳಲ್ಲಿ ಈ ವ್ಯವಸ್ಥೆ ಇಲ್ಲ. ಅಲ್ಲಿರುವ ಹತ್ತಾರು-ನೂರಾರು ಫ್ಲ್ಯಾಟ್‌ಗಳಿಂದ ಒಮ್ಮೇಲೆ ತ್ಯಾಜ್ಯ ನೀರು ಸಾಮಾನ್ಯ ನೀರುಗಾಲುವೆಗೆ ನುಗ್ಗುತ್ತದೆ. ಹೀಗೆ ಸಾಮರ್ಥ್ಯಕ್ಕಿಂತ ಹೆಚ್ಚು ತ್ಯಾಜ್ಯ ನೀರು ಹರಿದು ಬರುವುದರಿಂದ ಸುತ್ತಲಿನ ನಿವಾಸಿಗಳು ಇದರಿಂದ ಸಮಸ್ಯೆ ಎದುರಿಸುತ್ತಾರೆ.

ರಾಜ್ಯ ಅಂತರ್ಜಲ ನಿರ್ದೇಶನಾಲಯದ ಪ್ರಕಾರ ಕಳೆದ ಹತ್ತು ವರ್ಷಗಳಲ್ಲಿ ನಗರದ ಅಂತರ್ಜಲ ಮಟ್ಟ (ಮೀಟರ್‌ಗಳಲ್ಲಿ)
ತಾಲೂಕು 2009 2010 2011 2012 2013 2014 2015 2016 2017 2018 ಸರಾಸರಿ ಕುಸಿತ
ಆನೇಕಲ್‌ 13.95 15.68 16.86 21.75 24.86 26.10 26.06 26.37 34.71 32.53 18.58
ಉತ್ತರ 17.63 20.72 23.53 30.90 39.81 40.85 37.74 28.88 29.04 20.62 2.99
ದಕ್ಷಿಣ 15.47 17.03 19.21 24.43 28.62 34.32 32.66 22.08 21.06 20.15 4.68
ಪೂರ್ವ – 16.79 28.81 18.33 20.50 18.80 22.65 18.91 22.87 28.65 11.86

* ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next