Advertisement

ಕೊಳವೆ ಬಾವಿಗೆ ಮಳೆನೀರು ಹರಿಸಿ ಅಂತರ್ಜಲ ವೃದ್ಧಿ

05:54 PM Oct 29, 2019 | Suhan S |

ರಾಮನಗರ: ಅಂತರ್ಜಲ ವೃದ್ಧಿಗೆ ಹಲವಾರು ಉಪಾಯ ಗಳಿವೆ. ಮಳೆ ನೀರನ್ನು ಸದ್ಬಳಕೆ ಮಾಡಿಕೊಳ್ಳಲು ನಗರಸಭೆಯ ಅಧಿಕಾರಿಗಳು ಮುಂದಾಗಿದ್ದಾರೆ. ಕೊಳವೆ ಬಾವಿಗಳಿಗೆ ನೇರ ಮಳೆ ನೀರನ್ನು ಹರಿಸುವ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದಾರೆ. ಮಳೆ ನೀರನ್ನು ನೇರವಾಗಿ ಕೊಳವೆ ಬಾವಿಗೆ ಇಳಿಸಿದರೆ ನೀರನಲ್ಲಿ ಇರಬಹುದಾದ ಮಣ್ಣು, ಕಲ್ಮಶಗಳು ಬಾವಿಯ ನೀರನ್ನು ಕಲುಷಿತಗೊಳಿಸ ಬಹುದಲ್ಲವೇ? ಈ ಸಮಸ್ಯೆಗೆ ಸ್ಥಳೀಯ ನಗರಸಭೆಯ ಅಧಿಕಾರಿಗಳ ವಿಭಿನ್ನ ಆಲೋಚನೆ ಉತ್ತರ ನೀಡಿದೆ.

Advertisement

ಆಯುಕ್ತರು, ಎಂಜಿನಿಯರ್‌ಗಳ ಚಿಂತನೆ: ಇಂಗು ಗುಂಡಿಗಳ ಮೂಲಕ ಅಂತರ್ಜಲ ವೃದ್ಧಿಸುವುದು ಈಗಾಗಲೆ ರೂಢಿಯಲ್ಲಿದೆ. ಕೊಳವೆ ಬಾವಿಗಳ ಬಳಿ ಇಂಗು ಗುಂಡಿಗಳನ್ನು ನಿರ್ಮಿಸುವುದು ಸಹ ವಾಡಿಕೆಯಲ್ಲಿದೆ. ಶುದ್ದ ಕುಡಿಯುವ ನೀರಿನ ಘಟಕಗಳಿಗೆ ನೀರು ಪೂರೈಸಲುಕೊಳವೆ ಬಾವಿಗಳನ್ನೇ ಆಶ್ರಯಿಸ  ಬೇಕಾಗಿದ್ದು, ಎಲ್ಲಾ ಕೊಳವೆ ಬಾವಿಗಳಲ್ಲೂ ಅಗತ್ಯ ಪ್ರಮಾಣದ ನೀರು ಲಭ್ಯವಾಗುತ್ತಿಲ್ಲ ಎಂಬುದು ಚಿಂತೆಗೆ ಕಾರಣವಾಗಿರುವ ಸಂಗತಿ. ಶುದ್ದ ಕುಡಿಯುವ ನೀರಿನ ಘಟಕಗಳಿಗೆ ನೀರು ಪೂರೈಸುವ ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ವೃದ್ಧಿಸಲು ನಗರಸಭೆಯ ಆಯುಕ್ತರು ಮತ್ತು ಎಂಜಿನಿಯರ್‌ಗಳ ಚಿಂತನೆಯ ಫ‌ಲವಾಗಿ ಈ ಉಪಾಯವನ್ನು ಕಂಡುಕೊಂಡಿದ್ದಾರೆ.

ಕಾರ್ಯವಿಧಾನ ಏನು?: ನಗರದ ವಿವಿಧ ವಾರ್ಡುಗಳಲ್ಲಿ ಪ್ರಾಯೋಗಿಕವಾಗಿ 15 ಕೊಳವೆ ಬಾವಿಗಳಲ್ಲಿ ಈ ಕಾಮಗಾರಿಯನ್ನು ಅಳವಡಿಸಲಾಗುತ್ತಿದೆ. ಕೊಳವೆ ಬಾವಿಗಳ ಸುತ್ತ ಸುಮಾರು 6 ಆಡಿ ಅಗಲ, 11 ಅಡಿಯಷ್ಟು ಆಳ ಮಣ್ಣು ಅಗೆಯುವುದು ಮೊದಲ ಕಾಮಗಾರಿ. ನಂತರ ಕೊಳವೆ ಬಾವಿಯ ಕೇಸಿಂಗ್‌ ಪೈಪ್‌ಗೆ ರಂಧ್ರಗಳನ್ನು ಕೊರೆದು, ಸುತ್ತ

ಮೆಷ್‌(ಜಾಲರಿ) ಸುತ್ತಲಾಗುತ್ತದೆ. ಕೇಸಿಂಗ್‌ ಪೈಪಿನ ಸುತ್ತ 40 ಎಂ.ಎಂ.ಜಲ್ಲಿ ಕಲ್ಲುಗಳನ್ನು ತುಂಬಲಾಗುತ್ತದೆ. ಅದರ ಮೇಲೆ ಸಣ್ಣ ಜಲ್ಲಿ ಕಲ್ಲುಗಳು, ಮರಳು ತುಂಬಲಾಗುತ್ತದೆ.  15 ಕೊಳವೆ ಬಾವಿ ಗುರುತು: ಕೊಳವೆ ಬಾವಿಸುತ್ತ ಇರುವ ಜಲ್ಲಿ ಕಲ್ಲುಗಳ ಮತ್ತು ಜಾಲರಿ, ನಂತೆ ಕಾರ್ಯ ನಿರ್ವಹಿಸುವುದರಿಂದ ನೀರನಲ್ಲಿರುವ ತ್ಯಾಜ್ಯ, ಕಲ್ಮಶಗಳು ಪ್ರತ್ಯೇಕಗೊಳ್ಳುತ್ತವೆ. ನೀರು ಕೊಳವೆ ಬಾವಿಯೊಳಗೆ ಜಿನುಗಿ ಅಂತರ್ಜಲ ಮಟ್ಟವನ್ನು ಸುಧಾರಿಸುತ್ತದೆ. ನಗರಸಭೆಯ ಆಯುಕ್ತರು ಮತ್ತು ಎಂಜಿನಿಯರ್‌ಗಳು ದೀರ್ಘಾಲೋಚನೆಯ ನಂತರ ಈ ಉಪಾಯ ಕಂಡುಕೊಂಡಿದ್ದಾರೆ.

ನಗರದಲ್ಲಿರುವ ಕೊಳವೆ ಬಾವಿಗಳ ಪೈಕಿ ನೀರಿನ ಪ್ರಮಾಣ ಕಡಿಮೆ ಇರುವ 15 ಕೊಳವೆ ಬಾವಿಗಳನ್ನು ಗುರುತಿಸಿ ಈ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದಾರೆ. ಒಟ್ಟು 5.42 ಲಕ್ಷ ರೂ ವೆಚ್ಚದ ಕ್ರಿಯಾ ಯೋಜನೆಗೆ ನಗರಸಭೆಯ ಅಧಿಕಾರಿಗಳು ಜಿಲ್ಲಾಡಳಿತದಿಂದ ಅನುಮೋದನೆಯನ್ನು ಪಡೆದುಕೊಂಡಿದ್ದಾರೆ.

Advertisement

ಕಾಮಗಾರಿ ಪೂರ್ಣ: ಗ್ಯಾಸ್‌ ಗೋಡೌನ್‌-

ಉದ್ಯಾನವನದ ಬಳಿ, ಪಂಪ್‌ ಹೌಸ್‌ ರಸ್ತೆ,   ದ್ಯಾವರಸೇಗೌಡನ ದೊಡ್ಡಿ ರಸ್ತೆ, ಅಂಬೇಡ್ಕರ್‌ ನಗರ, ರಾಮದೇವರ ದೇವಸ್ಥಾನ ಬಳಿ, ಪ್ರಗತಿ ಶಾಲೆ ಬಳಿ, ನೀರಿನ ಟ್ಯಾಂಕ್‌ ವೃತ್ತ (ವಾರ್ಡ್‌ 12), ನಾಗನ ಕಟ್ಟೆ, ಟಿಪ್ಪು ಶಾಲೆಯ ಬಳಿ, ಮಂಜುನಾಥ ನಗರದಲ್ಲಿ ಶಾಲೆಯ ಹತ್ತಿರ, ಇಂದಿರಾ ಕ್ಯಾಂಟೀನ್‌ ಪಕ್ಕ, ರೈಲ್ವೆ ಕಾಂಪೌಂಡ್‌ ಬಳಿ, ಹೊಳೆ ಬೀದಿ, ಅರ್ಚಕರಹಳ್ಳಿ ಗೇಟ್‌ ಬಳಿ, ರಂಗರಾಯರ ದೊಡ್ಡಿ ರಸ್ತೆ, ಗೂಳಿ ಅಂಗಡಿ ರಸ್ತೆಯಲ್ಲಿರುವ ಕೊಳವೆ ಬಾವಿಗಳನ್ನು ಸಧ್ಯ ಗುರುತಿಸಲಾಗಿದೆ. ಅಂಬೇಡ್ಕರ್‌ ನಗರದ ಕೊಳವೆ ಬಾವಿಯ ಕಾಮಗಾರಿ ಪೂರ್ಣ ಗೊಂಡಿದೆ.

ಖಾಸಗಿ ಕೊಳವೆ ಬಾವಿಗಳ ಮಾಲೀಕರಿಗೆ ಪ್ರೋತ್ಸಾಹ: ನಗರಸಭೆ ಕೈಗೊಂಡಿರುವ ಈ ನೂತನ ವಿಧಾನದ ಬಗ್ಗೆ ರಾಜ್ಯದ ಕೆಲವು ನಗರಸಭೆ, ಪುರಸಭೆಗಳು ಆಸಕ್ತಿ ತೋರಿಸಿದ್ದಾರೆ. ಉದಯವಾಣಿಯೊಂದಿಗೆ ಮಾತನಾಡಿದ ನಗರಸಭೆಯ ಆಯುಕ್ತ  ರಾದ ಬಿ.ಶುಭಾ, ಕೊಳವೆ ಬಾವಿಗಳಿಗೆ ನೇರವಾಗಿ ಮಳೆ ನೀರನ್ನು ಹರಿಸುವ ಯೋಜನೆಯ ಬಗ್ಗೆ ಖಾಸಗಿ ಕೊಳವೆ ಬಾವಿಗಳ ಮಾಲೀಕರನ್ನು ಪ್ರೋತ್ಸಾಹಿಸಿರುವುದಾಗಿ, ಜಿಲ್ಲಾಪಂಚಾಯ್ತಿ ಮತ್ತು ಜಿಲ್ಲಾಡಳಿತ ಕೂಡ ಈ ಬಗ್ಗೆ ಆಸಕ್ತಿ ತೋರಿಸಿದೆ ಎಂದು ತಿಳಿಸಿದ್ದಾರೆ.

 

ಬಿ.ವಿ.ಸೂರ್ಯ ಪ್ರಕಾಶ್‌

Advertisement

Udayavani is now on Telegram. Click here to join our channel and stay updated with the latest news.

Next