Advertisement

ಮಳೆಗೆ ಶೇಂಗಾ ಬೆಳೆ ನಾಶ-ರೈತನಿಗೆ ಸಂಕಷ್ಟ

06:08 PM Nov 10, 2022 | Team Udayavani |

ಬಂಕಾಪುರ: ಈ ಭಾಗದಲ್ಲಿ ಅಕ್ಟೋಬರ್‌ ವರೆಗೆ ಸತತವಾಗಿ ಸುರಿದ ಮಳೆಯಿಂದಾಗಿ ಪಟ್ಟಣದ ಕೊಟ್ಟಿಗೇರಿ ನಿವಾಸಿ ಬಸವರಾಜ ಬಂಗಿ ಅವರಿಗೆ ಸೇರಿದ 8 ಎಕರೆ ಹೊಲದಲ್ಲಿ ಬೆಳೆದ ಶೇಂಗಾ ಬೆಳೆ ಸಂಪೂರ್ಣ ನಾಶವಾಗಿದೆ. ಇದಕ್ಕಾಗಿ ಮಾಡಿದ ಸಾಲ ರೈತನ ಬೆನ್ನೇರಿರುವುದರಿಂದ, ಹಿಂಗಾರು ಹಂಗಾಮಿಗೆ ಹೊಲ ಹದಗೊಳಿಸಲು ಹಣವಿಲ್ಲದೇ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಸತತ ಐದಾರು ವರ್ಷಗಳಿಂದ ಸರಿಯಾಗಿ ಬೆಳೆ ಬಾರದೆ, ಕೈಗೆ ಬಂದ ಬೆಳೆಗೆ ಸರಿಯಾದ ಬೆಲೆ ಸಿಗದೇ ರೈತ ಬಸವರಾಜ ಬಂಗಿ ಅವರು, ಈ ಬಾರಿಯಾದರೂ ಒಳ್ಳೆ ಫಸಲು ತೆಗೆಯುವ ಉದ್ದೇಶದಿಂದ ಸಿಕ್ಕ, ಸಿಕ್ಕಲ್ಲಿ ಸಾಲ ಮಾಡಿ, ಆಂಧ್ರಕ್ಕೆ ತೆರಳಿ ಖದರಿ ಲೇಪಾಕ್ಷಿ ತಳಿ ಶೆಂಗಾ ಬಿತ್ತನೆ ಬೀಜವನ್ನು 75 ಸಾವಿರ ಖರ್ಚು ಮಾಡಿ ತಂದು ಬಿತ್ತಿದ್ದರು.

ಗೊಬ್ಬರ, ಔಷಧ, ಆಳಿಗಾಗಿ 50 ಸಾವಿರ ಖರ್ಚು ಮಾಡಿದ್ದರು. 8 ಎಕರೆ ಜಮೀನಿನಲ್ಲಿ ಬೆಳೆದ ಶೇಂಗಾ ಗಿಡ ಕೀಳಿಸಲು 75 ಸಾವಿರ ಖರ್ಚು ಮಾಡಿದ್ದರು. ಕಿತ್ತು ಒಗೆದ ಶೇಂಗಾ ಅಕ್ಟೋಬರ್‌ ಕೊನೆಯ ವಾರದವರೆಗೂ ಸತತ ಸುರಿದ ಮಳೆಯಿಂದಾಗಿ ಮೊಳಕೆಯೊಡೆದು ಸಂಪೂರ್ಣ ನಾಶವಾಗಿದೆ. ಮುಂದಿನ ಬೆಳೆ ಬೆಳೆಯಲು ಹೊಲವನ್ನು ಹಸನು ಮಾಡಲಾಗದೇ ರೈತ ಬಸವರಾಜ ತಲೆಯ ಮೇಲೆ ಕೈಹೊತ್ತು ಕುಳಿತಿದ್ದಾನೆ.

ಈಗ ಆತನ ಹೊಲ ಕೆರೆಯಂತಾಗಿದ್ದು, ಕಿತ್ತು ಒಗೆದ ಶೇಂಗಾ ಹೊಲದಲ್ಲಿಯೇ ಕೊಳೆಯುತ್ತಿದೆ. ಈಗಾಗಲೇ ಸಾಲ ಮಾಡಿ ಗಾಯದ ಮೇಲೆ ಬರೆ ಎಳೆದುಕೊಂಡ ರೈತ, ಮುಂದೆ ದುಸ್ಸಾಹಸ ಮಾಡಿ ಪುನಃ ಸಾಲ ಮಾಡಲಾಗದೇ ಕೈಚೆಲ್ಲಿ ಕುಳಿತಿದ್ದಾನೆ. ಇದು ಒಬ್ಬ ಬಸವರಾಜನ ಕತೆಯಲ್ಲ. ರಾಜ್ಯದ ರೈತರ ಸಂಕಷ್ಟದ ಕತೆಯಾಗಿದೆ. ಈಗಾಗಲೇ ಜಿಲ್ಲಾದ್ಯಂತ ನೂರಕ್ಕಿಂತಲೂ ಅಧಿಕ ರೈತರು ಸಾಲ ಬಾಧೆಯಿಂದ ಸಾವನ್ನಪ್ಪಿದ್ದು, ರೈತರ ಸಾವಿನ ಸಂಖ್ಯೆ ಹೆಚ್ಚಾಗುವ ಮೊದಲು, ಭೂತಾಯಿಯನ್ನು ನಂಬಿ ಬದುಕುವ ಸಂಕಷ್ಟದಲ್ಲಿರುವ ರೈತರ ಬಾಳಿಗೆ ಆಸರೆಯಾಗಿ ಸ್ವ ಕ್ಷೇತ್ರದ ಸಿ.ಎಂ.ಬಸವರಾಜ ಬೊಮ್ಮಾಯಿ ಅವರು ನಿಲ್ಲುವರೇ ಎಂದು ರೈತರು ಕಾದು ನೋಡುವಂತಾಗಿದೆ.

Advertisement

ಭೂ ತಾಯಿಯನ್ನೇ ನಂಬಿ ಇಲ್ಲಿಯವರೆಗೂ ವ್ಯವಸಾಯ ಮಾಡಿಕೊಂಡು ಬಂದಿದ್ದೇನೆ. ನಾನು ಈಗ ತುಂಬಾ ಸಂಕಷ್ಟದಲ್ಲಿದ್ದು, ಕೂಡಲೇ ಕಂದಾಯ ಅಧಿಕಾರಿಗಳು ಗಮನ ಹರಿಸಿ, ಸರ್ಕಾರದಿಂದ ಆರ್ಥಿಕ ಸಹಾಯ ಕಲ್ಪಿಸಿ ನನ್ನ ಮುಂದಿನ ಜೀವನಕ್ಕೆ ಆಸರೆಯಾಗಬೇಕು.  –ಬಸವರಾಜ ಬಂಗಿ, ರೈತ

ಬಸವರಾಜ ಬಂಗಿ ಅವರು ಬಾಳ ಕಷ್ಟದಲ್ಲಿದ್ದಾರ್ರಿ.. ಅವರ ಹೋಲದಾಗ ಕಿತ್ತೂಗೆದ ಶೇಂಗಾನ ಹಂಗ ಒಯ್ಯಂದ್ರೂ ಯಾರೂ ಒಯ್ಯವಲ್ರರೀ. ಹೊಲ ಹಸನ ಮಾಡಾಕೂ ಅವರ ಕೈಯ್ನಾಗ ದುಡ್ಡಿಲ್ರಿ. ಅಧಿಕಾರಿಗಳು ಬಂದು ನೋಡಿ ಅವರಿಗೆ ಸಹಾಯ ಮಾಡಬೇಕು.  –ನಾಗರಾಜ ಹಾದಿ, ರೈತ 

ಸದಾಶಿವ ಹಿರೇಮಠ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next