ಸಿಂದಗಿ: ತಾಲೂಕಿನ ಕ್ರೀಡಾ ಪ್ರೇಮಿಗಳ ಮತ್ತು ಅಭಿಮಾನಿಗಳ ಬಹು ವರ್ಷಗಳ ತಾಲೂಕು ಕ್ರೀಡಾಂಗಣ ಕಟ್ಟಡ ಪೂರ್ಣಗೊಂಡರೂ ಕಳೆದ ಒಂದುವರೆ ವರ್ಷದಿಂದ ಅದಕ್ಕೆ ಉದ್ಘಾಟನೆಯ ಯೋಗ ಕೂಡಿ ಬಂದಿಲ್ಲ. ಉದ್ಘಾಟನೆ ಮೊದಲೇ ಕ್ರೀಡಾಂಗಣ ಹಾಳಾಗುವ ದುಸ್ಥಿತಿಗೆ ತಲುಪಿಸಿದೆ.
ಪಟ್ಟಣದ ವಿದ್ಯಾನಗರದ ಒಂದನೇ ಕ್ರಾಸ್‌ನಲ್ಲಿನ 5.24 ಎಕರೆ ವಿಸ್ತೀರ್ಣದಲ್ಲಿ ಅಂದಾಜು 1.5 ಕೋಟಿ ರೂ.ವೆಚ್ಚದಲ್ಲಿ ತಾಲೂಕು ಕ್ರೀಡಾಂಗಣ ಸಜ್ಜಾಗಿದೆ. ಕ್ರೀಡಾಂಗಣದಲ್ಲಿ 200 ಮೀ. ಟ್ರ್ಯಾಕ್ ಸಿದ್ಧಗೊಂಡಿದೆ. ಮಲ್ಟಿ ಜಿಮ್‌ಗೆ ಬೇಕಾದ ಸ್ಥಳಾವಕಾಶ, ಸಾವಿರಾರು ಪ್ರೇಕ್ಷಕರು ಕುಳಿತು ವೀಕ್ಷಿಸುವವ ಕಟ್ಟೆ (ಗ್ಯಾಲರಿ), ಆಡಳಿತಕ್ಕೆ ಹಾಗೂ ಕ್ರೀಡಾಪಟುಗಳಿಗೆ ಅನುಕೂಲವಾಗುವ ಕೊಠಡಿಗಳು ಸಿದ್ಧವಾಗಿವೆ. ಕರ್ನಾಟಕ ಭೂಸೇನಾ ನಿಗಮ ಕ್ರೀಡಾಂಗಣ ಕಾಮಗಾರಿ ನಡೆಸುತ್ತಿದೆ. ಕ್ರೀಡಾಂಗಣದಲ್ಲಿ ವಾಲಿಬಾಲ್, ಬಾಸ್ಕೇಟ್ ಬಾಲ್, ಲಾಂಗ್‌ಜಂಪ್, ಹೈ ಜಂಪ್ ಪಿಟ್, ಖೋಖೋ, ಕಬಡ್ಡಿ ಆಟಗಳ ಮೈದಾನ ಸಿದ್ಧವಾಗಿದೆ. ಇನ್ನೂ ಕೆಲ ಸಣ್ಣ ಪುಟ್ಟ ಕಾಮಗಾರಿಗಳು ನಡೆಯುತ್ತಿವೆ. ಕಟ್ಟಡ ಸೇರಿದಂತೆ, ಆಟದ ಮೈದಾನಗಳ ಬಹುಭಾಗ ಕಾಮಗಾರಿ ಪೂರ್ಣಗೊಂಡರೂ ಕರ್ನಾಟಕ ಭೂಸೇನಾ ನಿಗಮಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಗೆ ಕ್ರೀಡಾಂಗಣ ಹಸ್ತಾಂತರಿಸಿಲ್ಲ.
ತಾಲೂಕು ಕ್ರೀಡಾಂಗಣ ಕಳೆದ ಒಂದುವರೆವರ್ಷದ ಹಿಂದೆ ಉದ್ಘಾಟನೆಗೆ ಸಿದ್ಧಗೊಂಡಿತ್ತು. ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆಯಿಂದ ಉದ್ಘಾಟನೆ ಮುಂದೂಡಲಾಯಿತು. ನಂತರದ ದಿನಗಳಲ್ಲಿ ತಾಲೂಕು ಕ್ರೀಡಾಂಗಣ ಉದ್ಘಾಟನೆಗೆ ಮೀನ ಮೇಷ ಎಣಿಸುತ್ತಿರುವದೇಕೆ ಎಂಬುದು ಪ್ರಶ್ನೆ ಯಕ್ಷಪ್ರಶ್ನೆಯಾಗಿದೆ. ಕೆಲವೆಡೆ ವಿಶಾಲ ಜಾಗೆ ಸಮಸ್ಯೆಯಿಂದ ಕ್ರೀಡಾಂಗಣ ಮಂಜೂರಾಗದೆ ಕ್ರೀಡಾಪಟುಗಳು ಅವಕಾಶ ವಂಚಿತಗೊಳ್ಳುತ್ತಾರೆ. ಇಲ್ಲಿ ಜಾಗೆ ಮತ್ತು ಕಟ್ಟಡ ಸೌಲಭ್ಯ ಇದ್ದರೂ ಅದು ಉದ್ಘಾಟನೆಯಾಗದೆಕ್ರೀಡಾಪಟುಗಳಿಗೆ ಪ್ರಯೋಜನಕ್ಕೆ ಬಾರದಂತಾಗಿದೆ.
ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗದಲ್ಲಿಯೂ ಉತ್ತಮ ಕ್ರೀಡಾಪಟುಗಳಿದ್ದಾರೆ. ರಾಜ್ಯ ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿದ್ದಾರೆ. ಬೇರೆ ಬೇರೆ ಕಡೆಗೆ ಕ್ರೀಡಾ ಯೋಜನೆ ರೂಪಿಸುವ ಬದಲು ಕ್ರೀಡಾಂಗಣದಲ್ಲಿ ಆಯೋಜಿಸಿಇಲ್ಲಿಯೇ ಇಲಾಖೆಯ ಮಟ್ಟದಲ್ಲಿ ತರಬೇತಿ ಕೊಡುವಂತಾದರೆ ಪ್ರತಿಭಾವಂತ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸಿದಂತಾಗುತ್ತದೆ. ಕ್ರೀಡಾಂಗಣ ಮತ್ತು ಕಟ್ಟಡ ಸಂಪೂರ್ಣ ಸದುಪಯೋಗವಾಗದಿದ್ದರೆ ಇಲ್ಲಿ ಅನೈತಿಕ ಚಟುವಟಿಕೆಗಳಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಇದನ್ನು ತಡೆಯಲು ಇಲಾಖೆ ಕೂಡಲೇ ಕ್ರಮ ಕೈಗೊಳ್ಳಬೇಕು. ತಾಲೂಕಿಗೆ ಯಾವಾಗಲೂ ಸರಕಾರಿ ಶಾಲಾ ದೈಹಿಕ ಶಿಕ್ಷಕರನ್ನು ಪ್ರಭಾರಿ ತಾಲೂಕು ಯುವಜನ ಮತ್ತು ಕ್ರೀಡಾಧಿ ಕಾರಿಯಾಗಿ ನೇಮಿಸಲಾಗುತ್ತಿತ್ತು. ಕಳೆದ ಒಂದುವರೆ ವರ್ಷದಿಂದ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಯಾರು ಎಂಬುದು ಗೊತ್ತಿಲ್ಲ ಹೀಗಾದಲ್ಲಿ ಯುವಜನರು ಯಾರಿಗೆಸಂಪರ್ಕಿಸಬೇಕು ಎಂಬುದು ತಿಳಿಯುತ್ತಿಲ್ಲ. ಇದರಿಂದ ತಾಲೂಕಿನಲ್ಲಿ ದಸರಾ ಮತ್ತು ಇತರ ತಾಲೂಕು ಮತ್ತು ಜಿಲ್ಲಾ ಮಟ್ಟದ ಕ್ರೀಡಾಕೂಟಗಳು ದಿಕ್ಕು ತಪ್ಪಲಿವೆ.
ಕಟ್ಟಡ ಕಾಮಗಾರಿ ಇತರ ಕಾಮಗಾರಿ ಪೂರ್ಣಗೊಂಡರೂ ಅದು ಕ್ರೀಡಾಪಟುಗಳಿಗೆ ಸಾರ್ವತ್ರಿಕವಾಗಿ ಅರ್ಪಣೆಯಾಗುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗುತ್ತಿಲ್ಲ. ಇದರಿಂದ ಕ್ರೀಡಾಳುಗಳಿಗೆ ಉತ್ತೇಜನವಾಗಬೇಕಾಗಿದ್ದ ಯುವಜನ ಮತ್ತು ಕ್ರೀಡಾ ಇಲಾಖೆ ದಿವ್ಯ ಮೌನದಿಂದ ಕ್ರೀಡಾಪಟುಗಳಿಗೆ ನಿರಾಶೆಯಾಗುತ್ತಿದೆ. ಕೇವಲ ಸರಕಾರ ಕಟ್ಟಡ ನಿರ್ಮಾಣ ಮಾಡಿದರೆ ಸಾಲದು, ಕ್ರೀಡಾ ಚಟುವಟಿಕೆ ನಿರಂತರವಾಗಿರಲು ಇಲ್ಲಿ ಸರಿಯಾದ ವ್ಯವಸ್ಥೆ ಕಲ್ಪಿಸಿಕೊಡಬೇಕು. ಕಟ್ಟಡದ ಎಲ್ಲ ಕೊಠಡಿ ಮತ್ತು ಭಾಗಗಳಸಂಪೂರ್ಣ ಬಳಕೆಯಾಗಬೇಕು. ಸಿಬ್ಬಂದಿ ಕಾರ್ಯ ನಿರ್ವಹಿಸುವಂತಾಗಬೇಕು. ಒಬ್ಬದಕ್ಷ ಕ್ರೀಡಾಧಿಕಾರಿಯನ್ನ ನೇಮಕ ಮಾಡಿದಲ್ಲಿಕ್ರೀಡಾಂಗಣ ಸುಸಜ್ಜಿತವಾಗಿ ಇರಲು ಮತ್ತು ಕ್ರೀಡಾ ಚಟುಟಿಕೆಗಳು ನಡೆಯುತ್ತವೆ ಎಂಬುದು ಕ್ರೀಡಾಪಟುಗಳ ಮತ್ತು ಸಾರ್ವಜನಿಕರ ಅಭಿಪ್ರಾಯ.
ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪಠ್ಯ ಅಧ್ಯಯನದ ಜೊತೆಗೆ ಕ್ರೀಡೆ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಪಟ್ಟಣದಲ್ಲಿ ಕ್ರೀಡಾಪಟುಗಳಿಗೆ ಸಿದ್ಧಗೊಂಡತಾಲೂಕು ಕ್ರೀಡಾಂಗಣ ಉದ್ಘಾಟನೆಗೊಂಡು ಅಲ್ಲಿ ವಿದ್ಯಾರ್ಥಿ ಹಾಗೂ ಯುವಕರಿಗಾಗಿ ಕ್ರೀಡಾ ಚಟುವಟಿಕೆಗಳು ಪ್ರಾರಂಭವಾಗಲಿ -
ನವೀನ ಶಹಾಪುರ,ಕ್ರೀಡಾಭಿಮಾನಿ, ಸಿಂದಗಿ
ಕ್ರೀಡಾಂಗಣ ಕಟ್ಟಡ ಪೂರ್ಣಗೊಂಡ ನಂತರ ಕ್ರೀಡಾಂಗಣದಲ್ಲಿ ವಿವಿಧ ಕ್ರೀಡೆಗಳ ಮೈದಾನ ಸಿದ್ಧ ಪಡಿಸಲು ವಿಳಂಬವಾಗಿದೆ. ಅಲ್ಲದೆ ಕರ್ನಾಟಕ ಭೂಸೇನಾ ನಿಗಮ ನಮ್ಮ ಇಲಾಖೆಗೆ ಇನ್ನೂ ಹಸ್ತಾಂತರಿಸಿಲ್ಲ. ಆದ ಕಾರಣ ಉದ್ಘಾಟನೆ ವಿಳಂಬವಾಗಿದೆ.
ಎಸ್.ಜಿ. ಲೋಣಿ ಸಹಾಯಕ ನಿರ್ದೇಶಕರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ವಿಜಯಪುರ
ಪಟ್ಟಣದಲ್ಲಿ ಕ್ರೀಡಾಂಗಣ ಇಲ್ಲದ ಸಂದರ್ಭದಲ್ಲಿ ಸ್ಥಳೀಯ ಶಾಲಾ-ಕಾಲೇಜುಗಳಲ್ಲಿ ಕ್ರೀಡಾಭ್ಯಾಸ ಮಾಡುತ್ತಿದ್ದೇವು. ಆದರೆ ಈಗ ಅಲ್ಲಿ ಅವಕಾಶ ಸಿಗುತ್ತಿಲ್ಲ. ಕ್ರೀಡಾಂಗಣ ಶೀಘ್ರದಲ್ಲಿ ಉದ್ಘಾಟನೆಯಾಗಬೇಕು. –
ಮಲ್ಲನಗೌಡ ಬಿರಾದಾರ, ಮ್ಯಾರಾಥಾನ್ ಪಟು, ಚಿಕ್ಕಸಿಂದಗಿ
-ರಮೇಶ ಪೂಜಾರ