ಔರಂಗಬಾದ್ : 21 ಉಗುರುಳ್ಳ ಆಮೆ, ಕಪ್ಪು ಲ್ಯಾಬ್ರಡಾರ್ ನಾಯಿಯನ್ನು ವರದಕ್ಷಿಣೆಯಾಗಿ ನೀಡುವಂತೆ ಬೇಡಿಕೆಯಿಟ್ಟಿದ್ದ ವರ ಮಹಾಶಯನೋರ್ವ ಇದೀಗ ಕಂಬಿ ಹಿಂದೆ ಕುಳಿತಿದ್ದಾನೆ.
ಸಾಮಾನ್ಯವಾಗಿ ವರದಕ್ಷಿಣೆ ರೂಪದಲ್ಲಿ ಬಂಗಾರ, ಹಣ, ವಾಹನ ಪಡೆಯುವುದು ಸಾಮಾನ್ಯ. ಆದರೆ, ಮಹಾರಾಷ್ಟ್ರದಲ್ಲೊಂದು ಕುಟುಂಬ ಹಣದ ಜೊತೆ ಆಮೆ-ನಾಯಿ ಕೇಳಿದ್ದಾರೆ.
ಇದೇ ವರ್ಷ ಫೆಬ್ರುವರಿ 10 ರಂದು ನಾಸಿಕ್‌ನಲ್ಲಿ ಭಾರತೀಯ ಸೇನೆಯ ಜವಾನನಾಗಿ ಕೆಲಸ ನಿರ್ವಹಿಸುತ್ತಿರುವ ವಿವಾಹ ನಿಶ್ಚಯ ಮಾಡಿಕೊಂಡಿದ್ದ. ನಿಶ್ಚಿತಾರ್ಥದ ಬಳಿಕ ವಧುವಿನ ಮನೆಯವರ ಬಳಿ ವರದಕ್ಷಿಣೆಯಾಗಿ ವಿಚಿತ್ರ ಬೇಡಿಕೆ ಸಲ್ಲಿಸಿದ್ದಾನೆ. 21 ಉಗುರುಳ್ಳ ಆಮೆ, ಕಪ್ಪು ಲ್ಯಾಬ್ರಡಾರ್ ನಾಯಿಯನ್ನು ವರದಕ್ಷಿಣೆಯಾಗಿ ನೀಡುವಂತೆ ಬೇಡಿಕೆಯಿಟ್ಟಿದ್ದ.
ವಧುವಿನ ಮನೆಯವರ ಬಳಿ ಈಗಾಗಲೇ 2 ಲಕ್ಷ ರೂಪಾಯಿ ನಗದು ಮತ್ತು 10 ಗ್ರಾಂ ಚಿನ್ನವನ್ನು ಪಡೆದಿದ್ದ. ವಧುವಿಗೆ ಕಾಯಂ ಸರ್ಕಾರಿ ಕೆಲಸ ಕೊಡಿಸುವುದಾಗಿ ಸುಮಾರು 10 ಲಕ್ಷ ರೂಪಾಯಿಯನ್ನು ಕಸಿದುಕೊಂಡಿರುವುದಾಗಿ ಹುಡುಗಿಯ ಮನೆಯವರು ಆರೋಪಿಸಿದ್ದಾರೆ.
21 ಉಗುರುಳ್ಳ ಆಮೆಯನ್ನು ಕೊಡಬೇಕು ಎಂದು ವಧುವಿನ ಮನೆಯವರನ್ನು ಪೀಡಿಸಿದ್ದಾನೆ. ಜೊತೆಗೆ ಕಪ್ಪು ಲ್ಯಾಬ್ರಡಾರ್ ನಾಯಿ, ಬುದ್ಧನ ವಿಗ್ರಹ, ಬೆಲೆಬಾಳುವ ದೇವರ ದೀಪಗಳ ಬೇಡಿಕೆ ಇಟ್ಟಿದ್ದಾನೆ. ಇಂತಹ ಆಮೆಯನ್ನು ಹುಡುಕಲು ವಧುವಿನ ಮನೆಯವರೂ ಹರಸಾಹಸ ಪಟ್ಟಿದ್ದಾರೆ. ವಿಫಲರಾದಾಗ ವರನಿಗೆ ಈ ವಿಚಾರ ತಿಳಿಸಿದ್ದಾರೆ. ವರ ಮದುವೆಯನ್ನು ಮುರಿಯುವುದಾಗಿ ತಿಳಿಸಿ, ಈಗಾಗಲೇ ಕೊಟ್ಟಿದ್ದ ಹಣ ಮತ್ತು ಅಮೂಲ್ಯ ವಸ್ತುಗಳನ್ನು ಹಿಂತಿರುಗಿಸಲು ನಿರಾಕರಿಸಿದ್ದಾನೆ. ಈ ವೇಳೆ ವಧುವಿನ ಕುಟುಂಬ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವರನನ್ನು ಬಂಧಿಸಿದ್ದಾರೆ.
ಇನ್ನು 21 ಉಗುರುಳ್ಳ ಆಮೆಗೆ ಭಾರೀ ಬೇಡಿಕೆ ಇದೆ. ಅಪರೂಪದ ಈ ಆಮೆಯಿಂದ ಅದೃಷ್ಟ ಕುಲಾಯಿಸುತ್ತದೆ ಎಂಬೆಲ್ಲ ಮೂಢನಂಬಿಕೆಗಳು ಇವೆ. ಹೀಗಾಗಿ ಕಪ್ಪು ಮಾರುಕಟ್ಟೆಯಲ್ಲಿ ಈ ಆಮೆಗೆ ಲಕ್ಷಾಂತರ ರೂಪಾಯಿ ಬೆಲೆ ಇದೆ.