ಕುಂದಾಪುರ : ಉದಯವಾಣಿ ಪತ್ರಿಕಾ ವಿತರಕ ಸುರೇಶ್ ಪೂಜಾರಿ ನೇರಳಕಟ್ಟೆ ಅವರ ದಿನಸಿ ಅಂಗಡಿ ಆಕಸ್ಮಿಕ ಬೆಂಕಿಯಿಂದಾಗಿ ಸಂಪೂರ್ಣ ಹಾನಿ ಉಂಟಾಗಿ, ಲಕ್ಷಾಂತರ ರೂ. ನಷ್ಟ ಉಂಟಾದ ಘಟನೆ ಶನಿವಾರ ಸಂಭವಿಸಿದೆ.
ಆಕಸ್ಮಿಕ ಬೆಂಕಿ ಅವಘಡಕ್ಕೆ ಕಾರಣ ಏನೆಂದು ಇನ್ನು ಸ್ಪಷ್ಟವಾಗಿ ತಿಳಿದು ಬಂದಿಲ್ಲ. ವಾರಾಂತ್ಯ ಕರ್ಫ್ಯೂ ಆಗಿರುವುದರಿಂದ ಸುರೇಶ್ ಅವರು ಬೆಳಗ್ಗೆ 6 ಗಂಟೆಯಿಂದ 10 ಗಂಟೆಗೆ ತೆರೆದಿದ್ದು, ಬಳಿಕ ಮುಚ್ಚಿ ಮನೆಗೆ ತೆರಳಿದ್ದರು. ಆದರೆ ಸುಮಾರು 11 ಗಂಟೆಯ ವೇಳೆ ಅಂಗಡಿಯೊಳಗೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ.
ಕೂಡಲೇ ಮನೆಯಿಂದ ಇಲ್ಲಿಗೆ ಸುರೇಶ್ ಪೂಜಾರಿ ಅವರು ಬರುವಷ್ಟರಲ್ಲಿ ಎಲ್ಲವೂ ಹೊತ್ತಿ ಉರಿದಿದೆ. ಕೆಲವೇ ಕ್ಷಣದಲ್ಲಿ ಎಲ್ಲರೂ ನೋಡು – ನೋಡುತ್ತಿದ್ದರಂತೆ ಅಂಗಡಿಯೊಳಗಿದ್ದ ಫ್ರಿಡ್ಜ್ ಸಹಿತ ಇನ್ನಿತರ ಎಲೆಕ್ಟ್ರಾನಿಕ್ಸ್ ಸೊತ್ತುಗಳು, ದಿನಸಿ ಸಾಮಗ್ರಿ, ತಿಂಡಿ- ತಿನಿಸುಗಳೆಲ್ಲ ಸಂಪೂರ್ಣ ಬೆಂಕಿಗೆ ಆಹುತಿಯಾಗಿವೆ. ಈ ಬೆಂಕಿ ಅವಘಢದಿಂದಾಗಿ ಅಂಗಡಿ ಸುಮಾರು 4.5 ರಿಂದ 5 ಲಕ್ಷ ರೂ.ವರೆಗೆ ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ :ಉಡುಪಿ ಭಾಗಶಃ ಲಾಕ್‌ಡೌನ್ : ನಿಯಮ ಉಲ್ಲಂಘಿಸಿದವರಿಗೆ ಲಾಠಿ ಏಟಿನ ಬಿಸಿ
ಕುಂದಾಪುರದ ಅಗ್ನಿ ಶಾಮಕ ದಳದವರು ಘಟನಾ ಸ್ಥಳಕ್ಕೆ ಬಂದು ಬೆಂಕಿ ನಂದಿಸಲು ಪ್ರಯತ್ನಿಸಿದ್ದು, ಆದರೆ ಅಷ್ಟರೊಳಗೆ ಅಂಗಡಿಯೊಳಗಿನ ವಸ್ತುಗಳೆಲ್ಲ ಸುಟ್ಟು ಕರಕಲಾಗಿದೆ.
ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.