ಬೆಂಗಳೂರು: ಗೃಹ ಲಕ್ಷ್ಮೀ ಯೋಜನೆ ಸೌಲಭ್ಯ ಪಡೆಯಲು ಮನೆಯೊಡತಿಯ ಮಗನ ತೆರಿಗೆ ಪಾವತಿ ಮಾಡುವುದನ್ನು ಪರಿಗಣಿಸುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್ ತಿಳಿಸಿದ್ಧಾರೆ.
ಮಗ ತೆರಿಗೆ ಪಾವತಿದಾರನಾಗಿದ್ದರೆ ತಾಯಿಗೆ ಗೃಹಲಕ್ಷ್ಮೀ ಯೋಜನೆ ಸಿಗುವುದಿಲ್ಲ ಎಂದು ಸಚಿವೆ ಬುಧವಾರವಷ್ಟೇ ಗೊಂದಲದ ಹೇಳಿಕೆ ನೀಡಿದ್ದರು. ಇದಕ್ಕೆ ಶುಕ್ರವಾರ ಸ್ಪಷ್ಟೀಕರಣ ನೀಡಿರುವ ಅವರು, ಮಗ ತೆರಿಗೆ ಪಾವತಿ ಮಾಡುವುದನ್ನು ಪರಿಗಣಿಸುವುದಿಲ್ಲ. ಗಂಡ ತೆರಿಗೆ ಪಾವತಿಸಿದರೆ ಪತ್ನಿಗೆ ಯೋಜನೆ ಅನ್ವಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಅದೇ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಗೃಹ ಲಕ್ಷ್ಮೀ ಯೋಜನೆಯ ಅರ್ಜಿ ನಮೂನೆ ಅಸಲಿ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು. ಗೃಹಲಕ್ಷ್ಮೀ ಅರ್ಜಿ ನಮೂನೆಯಲ್ಲಿ ಕೆಲವೊಂದು ಬದಲಾವಣೆ ಮಾಡಲಿದ್ದೇವೆ. ಬ್ಯಾಂಕ್ ಪಾಸ್‌ಬುಕ್ ಸೇರಿಸಲಾಗುವುದು. ಜಾತಿ ಬದಲು ವರ್ಗ ಅಂತ ಹಾಕುತ್ತೇವೆ. ಸಂದೇಶ ತಪ್ಪಾಗಿ ಹೋಗಬಾರದು. ಶೇ.90 ಬಿಪಿಎಲ್ ಕಾರ್ಡ್‌ನಲ್ಲಿ ಮಹಿಳೆಯರೇ ಪ್ರಮುಖ ಅಗಲಿದ್ದಾರೆ. ಯಾರಿಗೆಲ್ಲಾ ಫಲ ಸಿಗಬೇಕು ಅವರನ್ನ ಸೇರಿಸಲಾಗುತ್ತೆ. ಈಗ ಬಂದಿರೋ ಅರ್ಜಿ ಕರಡು ಮಾತ್ರ. ಯೋಜನೆ ಚಾಲನೆ ಕಾರ್ಯಕ್ರಮ ಬೆಳಗಾವಿಯಲ್ಲಿ ನಡೆಯಲಿದೆ. ಆಗಸ್ಟ್ 17 ಅಥವಾ 18ರಂದು ನಡೆಯಲಿದೆ ಸಚಿವರು ತಿಳಿಸಿದರು.
ಸಹೋದರನ ದರ್ಪ: ಗ್ಯಾರಂಟಿ ಯೋಜನೆಗಳ ಕುರಿತ ಅನುಮಾನಗಳ ಬಗ್ಗೆ ಪ್ರಶ್ನೆ ಮಾಡಲು ಸಚಿವರ ವಿಧಾನಸೌಧದ ಕಚೇರಿಗೆ ತೆರಳಿದ್ದ ಮಾಧ್ಯಮದವರ ಮೇಲೆ ಅಲ್ಲಿದ್ದ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್ ಸಹೋದರ ಹಾಗೂ ವಿಧಾನಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ದರ್ಪ ತೋರಿದ ಪ್ರಸಂಗ ನಡೆದಿದೆ. ಮಾಧ್ಯಮದವರು ಪ್ರಶ್ನೆ ಕೇಳಲು ತೆರಳಿದಾಗ, “ಹೊರಗೆ ನಡೆಯಿರಿ ಏನೂ ಉತ್ತರ ಕೊಡಲ್ಲ” ಎಂದು ಚನ್ನರಾಜ್ ಹೇಳಿದ್ದಾರೆ. ಇದಕ್ಕೆ ಮಾಧ್ಯಮದವರು ಆಕ್ಷೇಪ ವ್ಯಕ್ತಪಡಿಸಿದಾಗ ಪರಿಸ್ಥಿತಿ ಅರಿತ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್ ಸಹೋದರನ ಪರವಾಗಿ ಕ್ಷಮೆ ಕೇಳಿದ್ದಾರೆ.