Advertisement

Rahul ಅನುಕೂಲಕ್ಕೆ ಗೃಹಲಕ್ಷ್ಮೀ ಸ್ಥಳಾಂತರ: ಸತೀಶ ಜಾರಕಿಹೊಳಿ

08:31 PM Aug 21, 2023 | Team Udayavani |

ಬೆಳಗಾವಿ: ಗೃಹಲಕ್ಷ್ಮೀ ಯೋಜನೆ ಉದ್ಘಾಟನೆಗೆ ರಾಹುಲ್‌ ಗಾಂಧಿ ಆಗಮಿಸುವ ಹಿನ್ನೆಲೆಯಲ್ಲಿ ಅವರಿಗೆ ಅನುಕೂಲವಾಗುವ ದೃಷ್ಟಿಯಿಂದ ಕಾರ್ಯಕ್ರಮವನ್ನು ಬೆಳಗಾವಿಯಿಂದ ಮೈಸೂರಿಗೆ ಸ್ಥಳಾಂತರಿಸಲಾಗಿದೆ ಎಂದು ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ಮೊದಲು ಬೆಳಗಾವಿಯಲ್ಲಿ ಕಾರ್ಯಕ್ರಮ ನಡೆಸುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದರು. ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ತಾವು ಪ್ರತಿನಿಧಿಸುವ ಕೇರಳದ ವಯನಾಡ್‌ ಲೋಕಸಭಾ ಕ್ಷೇತ್ರದಲ್ಲಿ ಕಾರ್ಯಕ್ರಮ ನಿಗದಿಪಡಿಸಿದ್ದಾರೆ. ಅಲ್ಲಿಂದ ಆಗಮಿಸಲು ಅವರಿಗೆ ಅನುಕೂಲವಾಗಲಿ ಎಂಬ ಕಾರಣದಿಂದ ಗೃಹಲಕ್ಷ್ಮೀ ಯೋಜನೆ ಉದ್ಘಾಟನೆ ಕಾರ್ಯಕ್ರಮವನ್ನು ಮೈಸೂರಿಗೆ ಸ್ಥಳಾಂತರಿಸಲಾಗಿದೆ ಎಂದು ಸಂಪುಟ ಸಭೆಯಲ್ಲಿ ನಮಗೆ ತಿಳಿಸಲಾಯಿತು. ಹೀಗಾಗಿ ಇದರ ಬಗ್ಗೆ ಸಿದ್ದರಾಮಯ್ಯ ಅಥವಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೆಚ್ಚಿನ ಸ್ಪಷ್ಟನೆ ನೀಡಬಹುದು ಎಂದರು.

ಮೇಲಾಗಿ ಗೃಹಲಕ್ಷ್ಮೀ ಯೋಜನೆ ಒಂದು ಜಿಲ್ಲೆಗೆ ಸೀಮಿತವಾದ ಕಾರ್ಯಕ್ರಮವಲ್ಲ. ಇದು ಇಡೀ ರಾಜ್ಯಕ್ಕೆ ಸಂಬಂಧಿಸಿದ್ದು. ಹೀಗಾಗಿ ಇದರಲ್ಲಿ ಯಾವುದೇ ಅಸಮಾಧಾನ ಅಥವಾ ಭಿನ್ನಾಭಿಪ್ರಾಯ ಇಲ್ಲ. ನಾನೂ ಸಹ ಮೈಸೂರಿನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ. ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ನಲ್ಲಿ ಯಾವುದೇ ಮುಸುಕಿನ ಗುದ್ದಾಟವಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ. ಇದರಲ್ಲಿ ಗೊಂದಲ ಇಲ್ಲ ಎಂದರು.

ಬೆಳಗಾವಿ ಬಿಜೆಪಿಗರು ಕಾಂಗ್ರೆಸ್‌ಗೆ ಬರಲ್ಲ: ಕಾಂಗ್ರೆಸ್‌ನಿಂದ ಬಿಜೆಪಿಗೆ ಹೋದ ಶಾಸಕರನ್ನು ಮರಳಿ ನಮ್ಮ ಪಕ್ಷಕ್ಕೆ ಕರೆದುಕೊಳ್ಳುವ ಅನಿವಾರ್ಯತೆ ಇಲ್ಲ. ಆದರೆ ಅವರು ಬರುತ್ತಾರೆ ಎಂದರೆ ಅಭ್ಯಂತರವಿಲ್ಲ. ಬಿಜೆಪಿ ಮತ್ತು ಜೆಡಿಎಸ್‌ನ ಸುಮಾರು 20 ಶಾಸಕರು ಕಾಂಗ್ರೆಸ್‌ ಸೇರಲು ಬಯಸಿದ್ದು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಜಿಲ್ಲೆಯ ಯಾವ ಬಿಜೆಪಿ ನಾಯಕರೂ ಸದ್ಯ ಕಾಂಗ್ರೆಸ್‌ಗೆ ಬರುತ್ತಿಲ್ಲ ಎಂದರು.

ಕಾಂಗ್ರೆಸ್‌ನಲ್ಲಿ ಉನ್ನತ ಸ್ಥಾನದಲ್ಲಿರುವ ನಾಯಕರನ್ನು ಬಿಜೆಪಿಗೆ ಸೆಳೆಯುವುದಾಗಿ ಸಿ.ಟಿ.ರವಿ ಹೇಳಿದ್ದಾರೆ. ಆದರೆ ಈಗ ಕಾಂಗ್ರೆಸ್‌ ಶಾಸಕರನ್ನು ಬೇಟೆಯಾಡುವ ಸ್ಥಿತಿಯಲ್ಲಿ ಬಿಜೆಪಿ ಇಲ್ಲ. ಬದಲಾಗಿ ನಮ್ಮ ಪಕ್ಷವೇ ವಿಪಕ್ಷದ ಶಾಸಕರನ್ನು ಬೇಟೆಯಾಡುವ ಸ್ಥಿತಿಯಲ್ಲಿದೆ. ಹಾಲಿ, ಮಾಜಿ ಶಾಸಕರು ಸೇರಿ ಪಕ್ಷದ ಎಲ್ಲ ಕಾರ್ಯಕರ್ತರನ್ನು ನಿಗಮ, ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ಮಾಡಲು ಸಾಧ್ಯವಿಲ್ಲ. ನಿಗಮ-ಮಂಡಳಿಗಳಲ್ಲಿ ಸುಮಾರು 100 ಹುದ್ದೆಗಳಿರಬಹುದು. ಆದರೆ ಲಕ್ಷಾಂತರ ಕಾರ್ಯಕರ್ತರಿದ್ದಾರೆ. ಹಾಗಾಗಿ ಕೆಲವರಿಗೆ ಮಾತ್ರ ಹುದ್ದೆ ಸಿಗಬಹುದು ಎಂದರು.

Advertisement

ಬೈಲಹೊಂಗಲ ಮತ್ತು ಅಥಣಿ ತಾಲೂಕಿನವರೂ ಸಹ ಪ್ರತ್ಯೇಕ ಜಿಲ್ಲೆಗೆ ಬೇಡಿಕೆ ಇಟ್ಟಿರುವುದು ತಪ್ಪಲ್ಲ. ಹೊಸ ಜಿಲ್ಲೆಯನ್ನು ಮಾಡುವಂತೆ ಕೇಳುವ ಹಕ್ಕು ಎಲ್ಲರಿಗೂ ಇದೆ. ಆದರೆ ಈ ವಿಷಯದಲ್ಲಿ ಸರ್ಕಾರವೇ ಸೂಕ್ತ ತೀರ್ಮಾನ ಕೈಗೊಳ್ಳುತ್ತದೆ. ಜಿಲ್ಲೆ ವಿಭಜನೆ ನಿರ್ಧಾರಕ್ಕೆ ಇನ್ನೂ ಸ್ವಲ್ಪ ಸಮಯ ಬೇಕಾಗಬಹುದು. ನ.1ರೊಳಗೆ ಬೆಳಗಾವಿ ತಾಲೂಕು ವಿಭಜನೆಯಾಗಬೇಕೆಂದು ನಾವು ನಿರೀಕ್ಷೆ ಮಾಡಿದ್ದೇವೆ ಎಂದರು.

ಲೋಕಸಭೆ ಚುನಾವಣೆಗೆ ಇನ್ನೂ ಸಮಯಾವಕಾಶ ಇದೆ. ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳಿಂದ ಸ್ಪರ್ಧಿಸಲು ಹಲವು ಆಕಾಂಕ್ಷಿಗಳು ಆಸಕ್ತಿ ತೋರಿದ್ದಾರೆ. ಚಿಕ್ಕೋಡಿಯಿಂದ ಪ್ರಕಾಶ ಹುಕ್ಕೇರಿ, ಲಕ್ಷ್ಮಣರಾವ ಚಿಂಗಳೆ ಸೇರಿದಂತೆ ಹಲವು ಆಕಾಂಕ್ಷಿಗಳಿದ್ದಾರೆ. ಅದೇ ರೀತಿ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಿರಣ ಸಾಧುನವರ ಸೇರಿದಂತೆ ಕೆಲವರು ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸೆಪ್ಟೆಂಬರ್‌ ಮೊದಲ ವಾರ ಸಭೆ ನಡೆಸಲಾಗುವುದು. ರಾಜ್ಯದಲ್ಲಿ ಕನಿಷ್ಟ 20 ಸ್ಥಾನಗಳನ್ನು ಗೆಲ್ಲುವುದೇ ನಮ್ಮ ಗುರಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next