ಬೆಳಗಾವಿ: ಈ ತಿಂಗಳ 14ರಿಂದ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭ ಬಗ್ಗೆ ಮಾತನಾಡಿಕೊಂಡಿದ್ದೇವೆ. ಜು.3 ಅಥವಾ 4ರಂದು ಈ ಬಗ್ಗೆ ಅಧಿಕೃತ
ವಾಗಿ ಘೋಷಿಸುತ್ತೇವೆ. ಮುಂದಿನ ಆಗಸ್ಟ್ ನಿಂದ ಗೃಹಲಕ್ಷ್ಮೀ ಯೋಜನೆಯಡಿ ಮನೆ ಯಜಮಾನಿಗೆ ಧನಸಹಾಯ ಸಿಗಲಿದೆ ಎಂದು ಮಹಿಳಾ ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ತಿಂಗಳಿಂದ ಗೃಹಜ್ಯೋತಿ, ಅನ್ನಭಾಗ್ಯ ಲಾಭ ಎಲ್ಲರಿಗೂ ಸಿಗುತ್ತದೆ. ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಿದ್ದೇವೆ. ಸರಕಾರ ಚೆನ್ನಾಗಿ ಕೆಲಸ ಮಾಡುತ್ತಿದೆ. ಮುಂದಿನ ದಿನಗಳಲ್ಲೂ ರಾಜ್ಯದ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇವೆ ಎಂದರು.
ನಮ್ಮ ಸರಕಾರ ಆಡಳಿತ ಆರಂಭಿಸಿ ಒಂದು ತಿಂಗಳು 5 ದಿನಗಳು ಮಾತ್ರ ಆಗಿದೆ. ಅಷ್ಟರಲ್ಲೇ ನಾವು ಕೊಟ್ಟ ಭರವಸೆಗಳನ್ನು ಒಂದೊಂದಾಗಿ ಈಡೇರಿಸುತ್ತಿದ್ದೇವೆ. ರಾಜ್ಯ ಕಾಂಗ್ರೆಸ್ ಸರಕಾರದಲ್ಲಿ ವೈಎಸ್‌ಟಿ ಸಂಗ್ರಹ ಆರಂಭವಾಗಿದೆ ಎನ್ನುವ ಎಚ್.ಡಿ. ಕುಮಾರಸ್ವಾಮಿ ಅಣ್ಣ ಹಿರಿಯರು, ರಾಜಕೀಯ ಮುತ್ಸದ್ಧಿ. ಅವರು ಕೂಡ ಹಿಂದೆ ಸಿಎಂ ಆಗಿದ್ದವರು. ಆಡಳಿತ ನಡೆಸಿದ ಅನುಭವ ಇದೆ. ಯಾವ ಅರ್ಥದಲ್ಲಿ ಹಾಗೆ ಹೇಳಿದ್ದಾರೋ ಗೊತ್ತಿಲ್ಲ. ಜನರು ಬಹಳಷ್ಟು ಆಶಾಭಾವನೆ ಇಟ್ಟುಕೊಂಡು ಕಾಂಗ್ರೆಸ್‌ಗೆ ಆಶೀರ್ವಾದ ಮಾಡಿದ್ದಾರೆ. ಈಗಲೇ ನೀವು ಈ ರೀತಿ ಮಾತನಾಡಲು ಆರಂಭಿಸಿದರೆ ಅದು ತಪ್ಪಾಗುತ್ತದೆ. ಸ್ವಲ್ಪ ಸಮಯ ಕೊಡಿ ಎಂದರು.