Advertisement

1.42 ಕೋಟಿ ಮಂದಿಗೆ ಗೃಹ ಜ್ಯೋತಿ ಲಾಭ

09:21 PM Aug 01, 2023 | Team Udayavani |

ಬೆಂಗಳೂರು: ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಗೃಹಜ್ಯೋತಿ ಯೋಜನೆಗೆ ಇದೇ ಶನಿವಾರ ವಿಧ್ಯುಕ್ತ ಚಾಲನೆ ಸಿಗಲಿದ್ದು, ಈ ಯೋಜನೆಯಿಂದ 1.42 ಕೋಟಿ ಜನರಿಗೆ ಅನುಕೂಲವಾಗಲಿದೆ ಎಂದು ಇಧನ ಸಚಿವ ಕೆ.ಜೆ. ಜಾರ್ಜ್‌ ಹೇಳಿದ್ದಾರೆ.

Advertisement

ಆ. 5ರಂದು ಕಲಬುರಗಿಯಲ್ಲಿ ನಡೆಯುವ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮತ್ತಿತರ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಯೋಜನೆ ಸಂಬಂಧ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಜಾರ್ಜ್‌, 1.42 ಕೋಟಿ ಅರ್ಹ ಫ‌ಲಾನುಭವಿಗಳ ವಿದ್ಯುತ್‌ ಬಳಕೆಯ ಶುಲ್ಕವನ್ನು ಸರಕಾರವೇ ಭರಿಸಲಿದೆ. ಹಾಗಾಗಿ ಇನ್ನು ಮುಂದೆ ಪ್ರತೀ ತಿಂಗಳು ಬಿಲ್‌ ಪಾವತಿಸುವ ಹೊರೆ ತಪ್ಪುವುದರ ಜತೆಗೆ ಉಳಿತಾಯದ ಆ ಹಣ ಗ್ರಾಹಕರ ಜೇಬು ತುಂಬಲಿದೆ ಎಂದರು.

ರಾಜ್ಯದಲ್ಲಿ ಒಟ್ಟು 2.16 ಕೋಟಿ ವಿವಿಧ ಪ್ರಕಾರದ ಗೃಹ ವಿದ್ಯುತ್‌ ಬಳಕೆದಾರರಿದ್ದಾರೆ. ಯೋಜನೆಯಡಿ ಇದುವರೆಗೆ ಒಟ್ಟು 1.42 ಕೋಟಿ ಗ್ರಾಹಕರು ಹೆಸರು ಮತ್ತು ಆರ್‌.ಆರ್‌. ಸಂಖ್ಯೆಯೊಂದಿಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಇದರಲ್ಲಿ ಭಾಗ್ಯಜ್ಯೋತಿ, ಕುಟೀರಜ್ಯೋತಿ ಹಾಗೂ ಅಮೃತಜ್ಯೋತಿ ಗ್ರಾಹಕರೂ ಸೇರಿದ್ದಾರೆ. 200 ಯೂನಿಟ್‌ಗಿಂತ ಮೇಲ್ಪಟ್ಟು ಬಳಕೆ, ಒಂದೇ ಹೆಸರಿನಲ್ಲಿ ಎರಡೆರಡು ಆರ್‌.ಆರ್‌. ಸಂಖ್ಯೆ ನೋಂದಣಿ ಸಹಿತ ಎಲ್ಲ ರೀತಿಯಿಂದ ಪರಿಶೀಲಿಸಿ ಅರ್ಹರನ್ನು ಆಯ್ಕೆ ಮಾಡಿದ್ದು, ಅಂತಿಮವಾಗಿ 1.42 ಕೋಟಿ ಗ್ರಾಹಕರು ಮೊದಲ ತಿಂಗಳು ಯೋಜನೆ ಸೌಲಭ್ಯ ಪಡೆಯಲು ಅರ್ಹರಾಗಿದ್ದಾರೆ ಎಂದು ಜಾರ್ಜ್‌ ಮಾಹಿತಿ ನೀಡಿದ್ದಾರೆ.

ಕೃಷಿ ಪಂಪ್‌ಸೆಟ್‌ಗಳಿಗೆ ನೀಡುವ ಉಚಿತ ವಿದ್ಯುತ್‌ಗೆ ತಗಲುವ ವೆಚ್ಚವನ್ನು ಸರಕಾರ ಭರಿಸುತ್ತಿದೆ. ಅದೇ ರೀತಿ ಗೃಹ ವಿದ್ಯುತ್‌ ಬಳಕೆದಾರರ ವೆಚ್ಚವನ್ನೂ ಪಾವತಿಸಲಿದೆ. ಆದ್ದರಿಂದ ಇಲಾಖೆ ಅಥವಾ ವಿದ್ಯುತ್‌ ಸರಬರಾಜು ಕಂಪೆನಿ (ಎಸ್ಕಾಂ)ಗಳಿಗೆ ಆರ್ಥಿಕ ಹೊರೆಯಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದಿದ್ದಾರೆ.

ಸಾಮಾನ್ಯವಾಗಿ ಮೀಟರ್‌ ರೀಡಿಂಗ್‌ 10ನೇ ತಾರೀಕಿನವರೆಗೂ ನಡೆಯುತ್ತದೆ. ಅದರಂತೆ ಕಳೆದ ತಿಂಗಳಿನ ಮೊದಲ ವಾರದಲ್ಲಿ ಬಳಕೆ ಮಾಡಿದ ವಿದ್ಯುತ್‌ಗೆ ಗ್ರಾಹಕರು ಬಿಲ್‌ ಪಾವತಿಸಿರುತ್ತಾರೆ. ಈ ಅವಧಿಯ ಬಳಕೆಯ ಮೊತ್ತವನ್ನು ಲೆಕ್ಕಹಾಕಿ, ಮುಂಬರುವ ದಿನಗಳಲ್ಲಿ ಬ್ಯಾಂಕ್‌ ಬಡ್ಡಿ ಸಹಿತ ಮರು ಪಾವತಿ ಮಾಡಲಾಗುವುದು ಎಂದು ಸಚಿವ ಜಾರ್ಜ್‌ ಭರವಸೆ ನೀಡಿದರು. ಒಂದು ವೇಳೆ ಗ್ರಾಹಕರೇ ಬಾಕಿ ಉಳಿಸಿಕೊಂಡಿದ್ದರೆ ಈ ಮೊತ್ತದಲ್ಲಿ ಹೊಂದಾಣಿಕೆ ಮಾಡಿಕೊಳ್ಳಲಾಗುವುದು ಎಂದೂ ಸ್ಪಷ್ಟಪಡಿಸಿದರು.

Advertisement

ಆತಂಕ ಬೇಡ

ಜು. 28ರ ಬಳಿಕ ಅರ್ಜಿ ಸಲ್ಲಿಸಿದವರಿಗೆ, ಮಾಸಾಂತ್ಯದ ವರೆಗೆ ನೋಂದಣಿ ಮಾಡಿಸಿಕೊಳ್ಳುವವರಿಗೆ ಸೆಪ್ಟಂಬರ್‌ ಬಿಲ್‌ನಲ್ಲಿ ಯೋಜನೆ ಸೌಲಭ್ಯ ಸಿಗಲಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನ ನಿಗದಿಪಡಿಸಿಲ್ಲ. ಆದ್ದರಿಂದ ಆತಂಕಪಡುವ ಅಗತ್ಯವಿಲ್ಲ ಎಂದರು.

ಮಾದರಿ ಬಿಲ್‌ ಬಿಡುಗಡೆ

“ಗೃಹಜ್ಯೋತಿ’ ಮಾದರಿ ವಿದ್ಯುತ್‌ ಬಿಲ್‌ ಅನ್ನು ಸಚಿವ ಕೆ.ಜೆ. ಜಾರ್ಜ್‌ ಬಿಡುಗಡೆಗೊಳಿಸಿದರು. ಮಾದರಿ ಬಿಲ್‌ನಲ್ಲಿ ಎಂದಿನಂತೆ ಗ್ರಾಹಕರ ಆರ್‌.ಆರ್‌. ಸಂಖ್ಯೆ, ಖಾತೆ ಸಂಖ್ಯೆ, ಗ್ರಾಹಕರ ವಿಳಾಸ ಮತ್ತಿತರ ಮಾಹಿತಿ ನೀಡಲಾಗಿದೆ. ಅದರೊಂದಿಗೆ ಮೀಟರ್‌ ಲೋಡ್‌, ಗೃಹಜ್ಯೋತಿ ಯೋಜನೆ ನೋಂದಣಿ ದಿನಾಂಕ, ಗ್ರಾಹಕರ ವಾರ್ಷಿಕ ಸರಾಸರಿ ಬಳಕೆ, ಅರ್ಹ ಯೂನಿಟ್‌ ಪ್ರಮಾಣ ಇದೆ.

ಅದರ ಕೆಳಗೆ ನಿಗದಿತ ಅವಧಿ, ರೀಡಿಂಗ್‌ ದಿನಾಂಕ, ಬಿಲ್‌ ಸಂಖ್ಯೆ, ಇಂದಿನ ಮಾಪನ, ಹಿಂದಿನ ಮಾಪನ, ನಿಗದಿತ ಶುಲ್ಕ, ಬಳಕೆ, ಇಂಧನ ಹೊಂದಾಣಿಕೆ ಶುಲ್ಕ, ತೆರಿಗೆ ಸೇರಿ ಒಟ್ಟು ಮೊತ್ತ ನಮೂದಾಗಿರುತ್ತದೆ. ಅವೆಲ್ಲವೂ ಗೃಹಜ್ಯೋತಿ ಅನುದಾನದ ರೂಪದಲ್ಲಿ ಪಾವತಿಯಾಗಿ, ಕೊನೆಯಲ್ಲಿ ಮೊತ್ತ “0′ ಎಂದು ಇದೆ.

Advertisement

Udayavani is now on Telegram. Click here to join our channel and stay updated with the latest news.

Next