Advertisement

ಎಲ್ಲಿ ಹೋದವು ಗ್ರೀಟಿಂಗ್‌ ಕಾರ್ಡ್‌ಗಳು!

10:10 AM Feb 10, 2020 | Suhan S |

ಹೊಸವರ್ಷ ಬಂದು ಒಂದು ತಿಂಗಳು ದಾಟಿತು. ಹೊಸವರ್ಷದ ಸಂಭ್ರಮದೊಂದಿಗೆ ಸುಗ್ಗಿಯ ಹಬ್ಬದ ಸಡಗರವೂ ಸಂಪನ್ನಗೊಂಡಿತು. ವಾಟ್ಸಾಪ್‌, ಫೇಸ್‌ಬುಕ್‌ಗಳಲ್ಲಿ ವೈವಿಧ್ಯಮಯ ಶುಭಾಶಯ ಸಂದೇಶಗಳು ರಾರಾಜಿಸಿದವು. ನಾನೂ ಶುಭಾಶಯ ಸಂದೇಶಗಳನ್ನು ಮೊಬೈಲ್‌ ಮೂಲಕವೇ ವಿನಿಮಯ ಮಾಡಿಕೊಂಡೆ.

Advertisement

ಮನೆಯ ಮುಂದೆ ಅಂಚೆಯವನು ಬಂದಾಗ ಕುತೂಹಲದಿಂದ ಒಂದಾದರೂ ಗ್ರೀಟಿಂಗ್‌ ಕಾರ್ಡ್‌ಗಳಿವೆಯೆ, ನೋಡಿದೆ. ಇಲ್ಲ. 1990ರ ದಶಕದಲ್ಲಿ, ನಾನು ಉದ್ಯೋಗಕ್ಕೆ ಸೇರಿದ ಆರಂಭದ ಕೆಲವು ವರ್ಷಗಳಲ್ಲಿ, ಡಿಸೆಂಬರ್‌ ತಿಂಗಳ ಕೊನೆಯ ವಾರದಲ್ಲಿ ನಮಗೆ ಸಂಸ್ಥೆಯೊಂದಿಗೆ ಒಡನಾಟದಲ್ಲಿದ್ದ ವ್ಯಕ್ತಿಗಳಿಗೆ “ಗ್ರೀಟಿಂಗ್‌ ಕಾರ್ಡ್‌’ ಕಳುಹಿಸುವುದೇ ಕೆಲಸವಾಗಿತ್ತು. ಸಂಸ್ಥೆಗೂ, ವೈಯುಕ್ತಿಕಗಾಗಿ ನಮಗೂ ಒಂದಷ್ಟು ಗ್ರೀಟಿಂಗ್‌ ಕಾರ್ಡ್ಸ್‌ಗಳು ಬರುತ್ತಿದ್ದುವು. ಅಂದಚೆಂದದ ಚಿತ್ರಗಳುಳ್ಳ ಕಾರ್ಡ್‌ಗಳು, ದೇವರ ಚಿತ್ರದ ಕಾರ್ಡ್‌ಗಳು, ಚಾರಿಟಿ ಸಂಸ್ಥೆಗಳ ಮೊಹರನ್ನು ಹೊಂದಿದ ಕಾರ್ಡ್‌ಗಳು…ವೈವಿಧ್ಯಮಯವಾಗಿರುತ್ತಿದ್ದುವು. ಅವುಗಳನ್ನು ನಮ್ಮ ಮೇಜಿನಲ್ಲಿ ಕೆಲವು ದಿನಗಳ ಕಾಲ ಆಕರ್ಷಕವಾಗಿ ಜೋಡಿಸಿಡುತ್ತಿದ್ದವು.

ಈಗ ಮಧ್ಯವಯಸ್ಸಿನಲ್ಲಿರುವ ಹೆಚ್ಚಿನ ಕನ್ನಡಿಗರು ತಮ್ಮ ಶಾಲಾದಿನಗಳಲ್ಲಿ ಅಂಚೆಯ ಅಣ್ಣ ಬಂದಿಹೆ ಚಿಣ್ಣ, ಅಂಚೆಯ ಹಂಚಲು ಮನೆಮನೆಗೆ, ಸಾವಿರ ಸುದ್ದಿಯ ಬೀರುತ ಬರುವನು ತುಂಬಿದ ಚೀಲವು ಹೆಗಲೊಳಗೆ ಎಂಬ ಶಿಶುಗೀತೆಯನ್ನು ಹಾಡಿದವರೇ. ಜನರಿಗೆ ಖುಷಿ ಕೊಡುವ ವಾರ್ತೆ, ದುಃಖದ ವಾರ್ತೆ ಎರಡನ್ನೂ ತಂದೊಪ್ಪಿಸುವ ಅಂಚೆಯಣ್ಣ ಸೈಕಲ್‌ ನಲ್ಲಿ ಮನೆಯಂಗಳಕ್ಕೆ ಬಂದು ಟ್ರಿನ್‌ ಟ್ರಿನ್‌ ಬೆಲ್‌ ಮಾಡಿದಾಗ ಒಂದು ರೀತಿಯ ಸಂಚಲನವಾಗುತ್ತಿತ್ತು.

ಆತನ ಖಾಕಿ ಚೀಲದಲ್ಲಿ ಹಳದಿ ಬಣ್ಣದ ಕಾರ್ಡ್‌ಗಳು, ತಿಳಿನೀಲಿ ಬಣ್ಣದ ಇನ್‌ಲಾÂಂಡ್‌ ಪತ್ರಗಳು, ಕಂದು ಬಣ್ಣದ ಕವರ್‌ಗಳು, ಯಾರದೋ ಮನೆಗೆ ಬಂದ ಮನಿ ಆರ್ಡರ್‌, ಪಾರ್ಸೆಲ್‌, ಪತ್ರಿಕೆಗಳು ಹೀಗೆ ಬಟವಾಡೆಯಾಗಬೇಕಾದ ವಸ್ತುಗಳು ತುಂಬಿರುತ್ತಿದ್ದುವು. ಮನೆಯವರಿಗೆ ಕೊಡಬೇಕಾದ ಪತ್ರಗಳನ್ನು ಕೊಟ್ಟು ಸ್ವಲ್ಪ ವಿರಮಿಸುವ ಅಂಚೆಯಣ್ಣನಿಗೆ ಕಾಲಕ್ಕೆ ತಕ್ಕತೆ ಬಿಸಿಕಾಯನ್ನೋ ತಂಪಾದ ಮಜ್ಜಿಗೆಯನ್ನೋ ಕುಡಿಯಲು ಕೊಡುವ ಅಥವಾ ಮೆಲ್ಲಲು ಎಲೆ-ಅಡಿಕೆ ತಟ್ಟೆಯನ್ನೊಡ್ಡುವ ಆತ್ಮೀಯತೆ ಮನೆಯವರಿಗೆ ಇರುತ್ತಿತ್ತು. ಅಂಚೆಯಣ್ಣನಿಗೂ ಧಾವಂತವಿರುತ್ತಿರಲಿಲ್ಲ. ಸ್ವಲ್ಪ ಲೋಕಾಭಿರಾಮ ಮಾತಾಡುತ್ತ, ಅವಶ್ಯವಿದ್ದರೆ ತಾನೇ ಪತ್ರವನ್ನು ಓದಿ ಹೇಳುವುದು ಅಥವಾ ಪತ್ರವನ್ನು ಬರೆದು ಕೊಡುವುದು ಹೀಗೆ ಸಮಾಜಸೇವೆ ಮಾಡಲೂ ಆತ ಸಿದ್ಧ. ಪ್ರತಿಮನೆಗಳಲ್ಲಿಯೂ ಪತ್ರವನ್ನು ತಲುಪಿದ ಕ್ಷಣ ಒಮ್ಮೆ ಓದಿ, ಆಮೇಲೆ ನಿಧಾನವಾಗಿ ಇನ್ನೊಮ್ಮೆ ಓದಿ, ಪುನಃ ಮನೆಮಂದಿಯೆಲ್ಲ ಒಟ್ಟಾಗಿ ಚರ್ಚಿಸುವ ಪದ್ಧತಿಯೂ ಇತ್ತು.

ರಿಜಿಸ್ಟರ್ಡ್‌ ಪೋಸ್ಟ್‌ ಬಂದರೆ ಕುತೂಹಲ ಮಿಶ್ರಿತ ಭಯ, ಲೇಖಕರಿಗೆ ಅಸ್ವೀಕೃತ ಬರಹ ವಾಪಸಾದರೆ ಸ್ವೀಕರಿಸಲು ಅಳುಕು, ಯಾರಾದರೂ ಸ್ಟ್ಯಾಂಪ್‌ ಹಚ್ಚದೆ ಕಳುಹಿಸಿದ್ದರೆ ಪಡೆದುಕೊಳ್ಳುವವರು ಹಣ ಕೊಡಬೇಕಾಗಿದ್ದ ಮುಜುಗರ, ಸಮಾರಂಭಕ್ಕೆ ಹೋಗಲು ಮನಸ್ಸಿಲ್ಲವಾದರೆ ಕಾಗದ ಇನ್ನೂ ತಲುಪಿಲ್ಲ ಎಂದು ಸಬೂಬು ಹೇಳಬಹುದಾದ ಸಾಧ್ಯತೆ… ಹೀಗೆ ಹಲವಾರು ಮುಖಗಳ ಅಂಚೆಯ ಸಂಚಲನವನ್ನು ಹೇಳಿದಷ್ಟೂ ಮುಗಿಯದು. ಆರ್‌. ಕೆ. ನಾರಾಯಣ್‌ ಅವರ ಮಿಸ್ಸಿಂಗ್‌ ಮೈಲ್  ಕತೆಯಲ್ಲಿ ಬರುವ ಪೋಸ್ಟ್‌ಮ್ಯಾನ್‌ನ ಕರ್ತವ್ಯನಿಷ್ಠೆ ಹಾಗೂ ಸಾಮಾಜಿಕ ಕಾಳಜಿಯ ದ್ವಂದ್ವ ಮುಖಗಳಾಗಿ ಮೂಡಿ ಬಂದು, ತನಪ್ಪ ಎಂಬ ಪೋಸ್ಟ್‌ಮ್ಯಾನ್‌ ಪಾತ್ರವನ್ನು ಅಮರವಾಗಿಸಿದೆ. ಗ್ರೀಟಿಂಗ್‌ ಕಾರ್ಡ್‌ಗಳ ನೆಪದಲ್ಲಿ ಮತ್ತು ನೆನಪಲ್ಲಿ ಅಂಚೆ ಸಂಸ್ಕೃತಿಯ ಬಗ್ಗೆ ಇಷ್ಟೆಲ್ಲ ಸಂಗತಿಗಳು ಹೊಳೆದವು !

Advertisement

 

-ಹೇಮಮಾಲಾ. ಬಿ

Advertisement

Udayavani is now on Telegram. Click here to join our channel and stay updated with the latest news.

Next