Advertisement
ನೀರಿಂಗಿಸುವಿಕೆ ಪಾಠಶಾಲೆಯಲ್ಲಿ ನೀರಿಂಗಿಸುವಿಕೆ ಪಾಠ 16 ವರ್ಷಗಳ ಹಿಂದೆಯೇ ಆರಂಭವಾಗಿದೆ. ಇದಕ್ಕೆ ಭದ್ರ ಅಡಿಪಾಯ ಹಾಕಿದವರು ಶ್ರೀಪಡ್ರೆ ಅವರು. 2002ರಲ್ಲಿ ಶ್ರೀಪಡ್ರೆ ಅವರನ್ನು ಆಹ್ವಾನಿಸಿ, ನೆಲ – ಜಲದ ಬಗ್ಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಅಂದು ಪಾಠ ಪ್ರಯೋಗಕ್ಕಿಳಿದ ಕಾರಣ ಇಂದು ಉತ್ತಮ ಫಲಿತಾಂಶ ಲಭಿಸಿದೆ.
ಶ್ರೀಪಡ್ರೆಯವರ ಪಾಠದಂತೆ ಓಡುವ ನೀರನ್ನು ನಿಲ್ಲಿಸುವ ಕಾರ್ಯ ಆರಂಭವಾಯಿತು. ನೇರವಾಗಿ ಚರಂಡಿ ಸೇರುತ್ತಿದ್ದ ನೀರನ್ನು ಸುತ್ತು ಬಳಸಿ, ಒಡ್ಡುಗಳನ್ನು ನಿರ್ಮಿಸಿ, ಎಲ್ಲ ಕಡೆ ತುಂಬಿದ ಬಳಿಕ ಮುಂದೆ ಸಾಗುವಂತೆ ಮಾಡಲಾಯಿತು. ಶಾಲೆ ಸಮೀಪದಲ್ಲಿರುವ 8 ಎಕರೆ ಜಾಗದಲ್ಲಿ ರಬ್ಬರು ಗಿಡಗಳನ್ನು ನೆಡಲಾಗಿದೆ. ಇಲ್ಲಿಯೂ ನೀರಿಂಗುತ್ತಿದೆ. ಶಾಲೆಯ ಮುಂಭಾಗ ಹಾಗೂ ಇತರ ಕಡೆಗಳಲ್ಲೂ ಹೊಂಡಗಳನ್ನು ತೋಡಿದ್ದು, ಒಂದು ಹೊಂಡ ಭಾಗಶಃ ಭರ್ತಿಯಾದ ಬಳಿಕ ಮತ್ತೂಂದು ಹೊಂಡಕ್ಕೆ ನೀರು ಹರಿಯುವಂತೆ ವ್ಯವಸ್ಥೆ ಮಾಡಲಾಗಿದೆ. ಅಂತಿಮವಾಗಿ ದೊಡ್ಡ ಹೊಂಡದಲ್ಲಿ ನೀರು ಶೇಖರಣೆಯಾಗುತ್ತದೆ. ಶಾಲೆ ಸುತ್ತ ವಿವಿಧ ಗಿಡಗಳು
ಶಾಲೆ ಸುತ್ತ ಸ್ಥಳೀಯ ಪರಿಸರಕ್ಕೆ ಹೊಂದಿಕೊಳ್ಳುವ ಹಲಸು, ಮಾವು, ನೆಲ್ಲಿಕಾಯಿ ಗಿಡಗಳನ್ನು ನಾಟಿ ಮಾಡಲಾಗಿದೆ. ಇವುಗಳನ್ನು ಬೆಳೆಸುವುದು ಶಾಲೆಯ ವಿದ್ಯಾರ್ಥಿಗಳೇ. ಪರಿಸರದ ಬಗ್ಗೆ ಪ್ರೀತಿ, ಆಸಕ್ತಿ ಮೂಡಲು ಇದು ಕಾರಣವಾಗುತ್ತಿದೆ. ಶಾಲೆಯಲ್ಲಿ ಮಕ್ಕಳಿಗೆ ಬೀಜದುಂಡೆ ಮಾಡಲು ತರಬೇತಿ ನೀಡಿದ್ದು, ಹೀಗೆ ತಯಾರಿಸಿದ ಬೀಜದುಂಡೆಗಳನ್ನು ಗ್ರಾ.ಪಂ.ಗೆ ನೀಡಿದ್ದಾರೆ. ಗ್ರಾ.ಪಂ. ನೀಡಿದ ಗಿಡಗಳನ್ನು ಮಕ್ಕಳು ಪ್ರೌಢಶಾಲೆಯ ಪರಿಸರದಲ್ಲಿ ನಾಟಿ ಮಾಡಿದ್ದಾರೆ.
Related Articles
ನೀರಿಂಗಿಸುವಿಕೆ ಹಾಗೂ ಪರಿಸರ ಸಂರಕ್ಷಣೆ ಕಾರ್ಯದಿಂದ ಸ್ಥಳೀಯರೂ ಪ್ರೇರೇಪಿತರಾಗಿದ್ದಾರೆ. ಮಕ್ಕಳ ಮೂಲಕ ಹಾಗೂ ಸ್ವಯಂ ಪ್ರೇರಿತರಾಗಿ ತಾವೂ ಜಮೀನಿನಲ್ಲಿ ಗಿಡಗಳನ್ನು ನಾಟಿ ಮಾಡಿದ್ದಾರೆ. ಜತೆಗೆ ಸ್ಥಳೀಯವಾಗಿ ಇಂಗುಗುಂಡಿಗಳನ್ನು ಮಾಡುವ ಮೂಲಕ ಅಂತರ್ಜಲ ವೃದ್ಧಿಸಿಕೊಂಡಿದ್ದಾರೆ. ಊರಿನ ಕೆರೆ, ಬಾವಿ ಮೊದಲಾದ ನೀರಿನ ಮೂಲಗಳಲ್ಲಿ ಜಲಸಿರಿ ಸಮೃದ್ಧವಾಗಿರುವುದನ್ನು ಕಂಡುಕೊಂಡಿದ್ದಾರೆ.
Advertisement
ಶಾಲೆಗೆ ಪ್ರಶಸ್ತಿ ಗರಿಭಾರತ ಸರಕಾರದ ಸ್ವಚ್ಛ ಭಾರತ್ ಸ್ವಚ್ಛ ವಿದ್ಯಾಲಯ ಪುರಸ್ಕಾರ, ಶುದ್ಧ ಕುಡಿಯುವ ನೀರು ಮತ್ತು ಶುಚಿತ್ವಕ್ಕಾಗಿ ನೀಡುವ 2017ರ ರಾಜ್ಯ ಮಟ್ಟದ ಪುರಸ್ಕಾರಕ್ಕೂ ಬೆಳಾಲು ಪ್ರೌಢಶಾಲೆ ಪಾತ್ರವಾಗಿದೆ. ಆಯ್ಕೆ ಪ್ರಕ್ರಿಯೆಯಲ್ಲಿ ಪ್ರೌಢಶಾಲೆ ಅತ್ಯುತ್ತಮ ನೀರಿನ ಮತ್ತು ಶುಚಿತ್ವದ ವ್ಯವಸ್ಥೆಗಾಗಿ ಪುರಸ್ಕಾರ ಪಡೆದಿತ್ತು. ವಿಶೇಷವಾದ ಜಲ ಮರುಪೂರಣ ಕಾರ್ಯಕ್ರಮಗಳಿಗಾಗಿ 2016ನೇ ಸಾಲಿನಲ್ಲಿ ಬೆಳ್ತಂಗಡಿ ತಾಲೂಕಿನ ಅತ್ಯುತ್ತಮ ಶಾಲೆ ಪುರಸ್ಕಾರವನ್ನೂ ಶಿಕ್ಷಣ ಇಲಾಖೆಯಿಂದ ಪಡೆದಿದೆ. ಕಡಿಮೆಯಾಗಿಲ್ಲ
ಇತರೆ ಪ್ರದೇಶಗಳಲ್ಲಿ ಬೇಸಗೆಯಲ್ಲಿ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುವುದನ್ನು ಗಮನಿಸಿದ್ದೇನೆ. ಮನೆ ಶಾಲೆಗೆ ಸಮೀಪ ಇರುವುದರಿಂದಲೋ ಏನೋ, ನಮ್ಮ ಬಾವಿಯಲ್ಲಿ ನೀರಿನ ಮಟ್ಟ ಕಡಿಮೆಯಾಗಿಲ್ಲ. ಬೆಳಾಲು ಪ್ರೌಢಶಾಲೆ ಜನ ಸಂರಕ್ಷಣೆಗೆ ಕ್ರಮ ಕೈಗೊಳ್ಳುತ್ತ, ಮಾರ್ಗದರ್ಶನ ನೀಡುತ್ತಿರುವುದು ಇತರ ಶಾಲೆಗಳಿಗೂ ಮಾದರಿ.
– ನೋಣಯ್ಯಗೌಡ, ಸ್ಥಳೀಯರು ಪರಿಸರದ ಚಟುವಟಿಕೆ
ಶಾಲೆಯ ಮಕ್ಕಳು ಪರಿಸರ ಸಂರಕ್ಷಣೆಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮನೆಯಲ್ಲಿಯೂ ಈ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ನೀರಿನ ಸಂರಕ್ಷಣೆಗಾಗಿ ಸ್ವಯಂಪ್ರೇರಿತರಾಗಿ ಇಂಗು ಗುಂಡಿ ರಚಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಹಳ್ಳಿ ಪ್ರದೇಶದ ಈ ಶಾಲೆ ಆರಂಭದಿಂದಲೂ ವಿವಿಧ ರೀತಿಯಲ್ಲಿ ಪರಿಸರ ಸಂರಕ್ಷಣೆ ಚಟುವಟಿಕೆಗಳನ್ನು ನಡೆಸುತ್ತಿದೆ.
– ರಾಮಕೃಷ್ಣ ಭಟ್ ಚೊಕ್ಕಾಡಿ, SDM ಪ್ರೌಢಶಾಲೆ ಮುಖ್ಯೋಪಾಧ್ಯಾಯ, ಬೆಳಾಲು — ಹರ್ಷಿತ್ ಪಿಂಡಿವನ