ಬೀಳಗಿ: ಬೂದಿಹಾಳ ಪುನರ್ವಸತಿ ಕೇಂದ್ರದ ಬಾವಲತ್ತಿ ತೋಟದ ಶಾಲೆ ಹಸಿರಿನಿಂದ, ಅಂದ-ಚಂದದ ಬಣ್ಣಗಳ ಚಿತ್ತಾರದಿಂದ ಕಂಗೊಳಿಸುವುದರ ಜತೆಗೆ ಮಕ್ಕಳ ಅಕ್ಷರ ಹಸಿವನ್ನು ನೀಗಿಸಿ ಮಾದರಿಯಾಗಿದೆ.
ಮಕ್ಕಳ ಹೆಮ್ಮೆ: ತಾಲೂಕಿನ ಬೂದಿಹಾಳ ಪುನರ್ವಸತಿ ಕೇಂದ್ರದ ಅರಡ್ಡಿಯವರ ತೋಟದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೂರು ಕೊಠಡಿಯನ್ನು ಹೊಂದಿದ್ದು, ತೋಟದ ಶಾಲೆಯಲ್ಲಿ ಒಟ್ಟು 15 ಮಕ್ಕಳು ಓದುತ್ತಿದ್ದಾರೆ. 1ರಿಂದ 5ನೇ ತರಗತಿಯವರೆಗಿನ ಈ ಶಾಲೆಯ ಆವರಣದಲ್ಲಿ ಚಿಕ್ಕು, ಬಾಳೆ, ಪಪ್ಪಾಯಿ, ತೆಂಗು, ನುಗ್ಗೆ, ಕರಿಬೇವು ಸೇರಿದಂತೆ ವಿವಿಧ ಜಾತಿಯ ಗಿಡಗಳು ಮತ್ತು ಹೂದೋಟ ಹಸಿರಿನ ಅಂದ ಕಟ್ಟುವ ಮೂಲಕ ಮನಸ್ಸಿಗೆ ಮುದ ನೀಡುತ್ತದೆ.
ಶಿಕ್ಷಕಿಯ ಇಚ್ಛಾಶಕ್ತಿ: ಕಳೆದ ನಾಲ್ಕು ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಶಂಕ್ರಮ್ಮ ಪಾಟೀಲ ಅವರ ಇಚ್ಛಾಶಕ್ತಿ ಮತ್ತು ಎಸ್‌ಡಿಎಂಸಿ, ಪಾಲಕರ ಸಹಕಾರದ ಫಲವಾಗಿ ಕಲಿಕೆಯಿಂದ ಹಿಡಿದು, ಸ್ವಚ್ಚತೆ, ಶಿಸ್ತು, ಹಸಿರು ಪ್ರಜ್ಞೆ ಹೇಳಿಕೊಡುತ್ತಿದೆ ಈ ಶಾಲೆ. ಶಿಕ್ಷಕರು ಮತ್ತು ಶಾಲಾ ಸುಧಾರಣಾ ಸಮಿತಿಯವರು ಇಚ್ಛಾಸಕ್ತಿ ಮೆರೆದರೆ ಕನ್ನಡ ಶಾಲೆಗಳಿಗೂ ಮೌಲ್ಯ ತಂದು ಕೊಡಬಹುದು ಎನ್ನುವುದಕ್ಕೆ ಈ ತೋಟದ ಶಾಲೆ ಜೀವಂತ ಸಾಕ್ಷಿಯಾಗಿದೆ. ಶಿಕ್ಷಕಿ ಶಂಕ್ರಮ್ಮನವರ ಕಠಿಣ ಪರಿಶ್ರಮ ಮತ್ತೂಬ್ಬರಿಗೆ ಮಾರ್ಗದರ್ಶಿಯಾಗಿದೆ.
ಬಣ್ಣದ ಲೋಕ: ಈ ಶಾಲೆಗೆ ಒಬ್ಬರೆ ಶಿಕ್ಷಕರು. ಶಿಕ್ಷಕಿ ಶಂಕ್ರಮ್ಮ ಪಾಟೀಲ, ಎಸ್‌ಡಿಎಂಸಿ, ಪಾಲಕರು ಸೇರಿಕೊಂಡು ಸ್ವಂತ 20 ಸಾವಿರಕ್ಕೂ ಹೆಚ್ಚು ಹಣ ಖರ್ಚು ಮಾಡಿ ಗೋಡೆಗಳಿಗೆ ಅಂದದ ಚಿತ್ತಾರ ಬಿಡಿಸಿದ್ದಾರೆ. ಶಾಲೆಯ ಗೋಡೆಯ ಮೇಲಿನ ನಿಸರ್ಗ ರಮಣೀಯ ಅಂದಚಂದದ ಚಿತ್ತಾರದಲ್ಲಿಯೇ ಅಕ್ಷರ ಲೋಕವನ್ನು ಕಲಾವಿದ ರವಿ ಸೃಷ್ಟಿಸಿರುವುದು ವಿಶೇಷತೆಯಾಗಿದೆ.
ಎಸ್‌ಡಿಎಂಸಿ ಹೆಚ್ಚಿನ ಸಹಕಾರದಿಂದ ಶಾಲೆ ಅಭಿವೃದ್ಧಿ ಕಾಣುವಂತಾಗಿದೆ. ಕನ್ನಡ ಶಾಲೆಗಳು ಆಕರ್ಷಣೆಯಾಗಬೇಕು. ಶಾಲೆಯ ಮಕ್ಕಳನ್ನು ಮನೆಯ ಮಕ್ಕಳಂತೆ ಪ್ರೀತಿಸಬೇಕು. ನಮ್ಮ ಕನ್ನಡ ಶಾಲೆ, ಯಾವ ಖಾಸಗಿ ಶಾಲೆಗೂ ಕಡಿಮೆಯಿಲ್ಲ ಎನ್ನುವ ಭಾವನೆ ಮಕ್ಕಳಲ್ಲಿ ಮೂಡಿದಾಗ ಶಿಕ್ಷಕರ ಶ್ರಮ ಸಾರ್ಥಕವಾಗುತ್ತದೆ.
–ಶಂಕ್ರಮ್ಮ ಬಿ.ಪಾಟೀಲ, ಶಿಕ್ಷಕಿ, ಬಾವಲತ್ತಿ ತೋಟದ ಶಾಲೆ
-ರವೀಂದ್ರ ಕಣವಿ