Advertisement

ಹಸಿರು ಸಂಚಾರಿ ಪಥ ಲೋಕಾರ್ಪಣೆ

09:47 AM May 08, 2022 | Team Udayavani |

ಹುಬ್ಬಳ್ಳಿ: ದೇಶದ ಮೊದಲ ಹಸಿರುಪಥ ಲೋಕಾರ್ಪಣೆ ಮಾಡಲಾಗಿದ್ದು, ಎರಡನೇ ಹಂತದ ಕಾಮಗಾರಿಗೆ ಭೂಮಿಪೂಜೆ ಮಾಡಲಾಗುವುದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

Advertisement

ಹು-ಧಾ ಸ್ಮಾರ್ಟ್‌ ಸಿಟಿ ಯೋಜನೆಯಡಿ ಲಿಂಗರಾಜ ನಗರ ಬಳಿಯ ರಾಣಿ ಚನ್ನಮ್ಮ ನಗರ ಸೇತುವೆ ಹತ್ತಿರ 8 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ 630 ಮೀಟರ್‌ ಉದ್ದದ ಮೊದಲ ಹಂತದ ಹಸಿರು ಸಂಚಾರಿ ಪಥ ಲೋಕಾರ್ಪಣೆಗೊಳಿಸಿ, 96 ಕೋಟಿ ರೂ. ವೆಚ್ಚದಲ್ಲಿ ಎರಡನೇ ಹಂತದ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ನಗರದ ಚರಂಡಿಗಳ ನೀರು ಶುದ್ಧೀಕರಿಸಿ ನಾಲಾಕ್ಕೆ ಬಿಡುವ ಜೊತೆಗೆ ಸೈಕ್ಲಿಂಗ್‌ ಹಾಗೂ ಪಾದಚಾರಿಗಳ ಅನುಕೂಲಕ್ಕಾಗಿ ಹಸಿರು ಸಂಚಾರ ಪಥ ನಿರ್ಮಾಣವಾಗಿದೆ. ಸ್ಮಾರ್ಟ್‌ ಸಿಟಿ ಯೋಜನೆ ಅನುದಾನದ ಜೊತೆ 130 ಕೋಟಿ ರೂ. ವಿದೇಶಿ ನೆರವು ಹಾಗೂ ಕರ್ನಾಟಕ ರಾಜ್ಯ ಸಮಗ್ರ ನಿಧಿಯಡಿ 200ಕೋಟಿ ರೂ. ನೆರವು ಹೆಚ್ಚುವರಿಯಾಗಿ ಅವಳಿನಗರದ ಅಭಿವೃದ್ಧಿಗೆ ದೊರೆಯಲಿದೆ ಎಂದರು.

ದೇಶದ ಆಯ್ದ ನೂರು ನಗರಗಳ ಸರ್ವಾಂಗೀಣ ಅಭಿವೃದ್ಧಿ ಗುರಿಯೊಂದಿಗೆ ಈ ಯೋಜನೆ ಅನುಷ್ಠಾನವಾಗುತ್ತಿದೆ. ಹಸಿರು ಸಂಚಾರ ಪಥದ ಯೋಜನೆಯಲ್ಲಿ ಚರಂಡಿ ನೀರನ್ನು ಶುದ್ಧೀಕರಿಸಿ ನಾಲಾಕ್ಕೆ ಬಿಡುವ ಕಾರ್ಯ ಕೈಗೊಳ್ಳಲಾಗಿದೆ. ರಾಣಿಚನ್ನಮ್ಮ ನಗರದಿಂದ ಬಿಡನಾಳವರೆಗೂ ಈ ಯೋಜನೆ ಕೊಂಡೊಯ್ಯುವ ಗುರಿ ಹೊಂದಲಾಗಿದೆ. ಸ್ಮಾರ್ಟ್‌ ಸಿಟಿ ಸೊಸೈಟಿ ಮೂಲಕ ಇದರ ನಿರ್ವಹಣೆ ನಡೆಯಲಿದೆ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಮಾತನಾಡಿ, ಕೇಂದ್ರ ರಸ್ತೆ ನಿಧಿ ಮತ್ತಿತರ ಅನುದಾನಗಳನ್ನು ಹು-ಧಾಕ್ಕೆ ತರಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ. ಈಗಾಗಲೇ ತೋಳನಕೆರೆ ಅಭಿವೃದ್ಧಿಯಾಗಿದ್ದು, ಉದ್ಘಾಟನೆಗೆ ಸಿದ್ಧತೆ ನಡೆಯುತ್ತಿದೆ. ಬರುವ ದಿನಗಳಲ್ಲಿ ಉಣಕಲ್‌ ಕೆರೆ ಅಭಿವೃದ್ಧಿಯಾಗಲಿದೆ. ಈ ನಾಲಾದ ಹತ್ತಿರ ಸಂಚರಿಸಲೂ ಸಾಧ್ಯವಾಗದ ಪರಿಸ್ಥಿತಿ ಇತ್ತು. ಇದೀಗ ಹಸಿರು ಸಂಚಾರ ಪಥ ನಿರ್ಮಾಣದಿಂದ ವಾತಾವರಣ ಬದಲಾಗಿದೆ. ಈ ಯೋಜನೆಯನ್ನು ಫ್ರಾನ್ಸ್  ನಿಯೋಗದ ಪ್ರತಿನಿಧಿಗಳು ನೋಡಿಕೊಂಡು ಹೋಗಿದ್ದು, ಹೆಚ್ಚುವರಿಯಾಗಿ 130 ಕೋಟಿ ರೂ. ಅನುದಾನ ದೊರೆಯಲಿದೆ. ಅವಳಿನಗರದಲ್ಲಿ ಕಸದ ಸಮಸ್ಯೆ ತೀವ್ರವಾಗಿದ್ದು, ಆಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಳ್ಳುವ ಮೂಲಕ ವಿಲೇವಾರಿಗೆ ಸೂಕ್ತ ಕ್ರಮಕ್ಕೆ ಚಿಂತನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ, ಈರಣ್ಣ ಜಡಿ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಪಾಲಿಕೆ ಸದಸ್ಯ ಉಮೇಶ ಕೌಜಗೇರಿ, ತಿಪ್ಪಣ್ಣ ಮಜ್ಜಗಿ, ಪಾಲಿಕೆ ಆಯುಕ್ತ ಡಾ| ಬಿ. ಗೋಪಾಲಕೃಷ್ಣ, ಸ್ಮಾರ್ಟ್‌ಸಿಟಿ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕ ಶಕೀಲ ಅಹ್ಮದ, ಜಂಟಿ ವ್ಯವಸ್ಥಾಪಕ ನಿರ್ದೇಶಕ ಅಜೀಜ ದೇಸಾಯಿ ಮೊದಲಾದವರಿದ್ದರು.

ಅವಳಿನಗರದಲ್ಲಿ ಬೀದಿದೀಪಗಳ ಸಮಸ್ಯೆ ಹೆಚ್ಚಿದೆ. ಮೊದಲು ಅದರ ಪರಿಹಾರಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಎಲ್‌ ಇಡಿ ವಿದ್ಯುತ್‌ ದೀಪಗಳನ್ನು ಅಳವಡಿಸಲು ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್‌ ಸಿಟಿ ಯೋಜನೆ ಅಧಿಕಾರಿಗಳು ಕ್ರಮವಹಿಸಬೇಕು. –ಪ್ರಹ್ಲಾದ ಜೋಶಿ, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next