Advertisement

ಗ್ರೀನ್‌ ಲಿಸ್ಟ್‌ಗೆ ಸೇರಲು ಗ್ರೀನ್‌ ಸಿಗ್ನಲ್‌!

10:09 AM Mar 21, 2020 | mahesh |

ಪುತ್ತೂರು: ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಘೋಷಿಸಿದ ರೈತರ 1 ಲ.ರೂ. ಸಾಲ ಮನ್ನಾ ಯೋಜನೆಯಲ್ಲಿ ವಿವಿಧ ಕಾರಣಗಳಿಂದ ಗ್ರೀನ್‌ ಲೀಸ್ಟ್‌ಗೆ ಸೇರಲು ಬಾಕಿ ಉಳಿದಿರುವವರಿಗೆ ಸಮರ್ಪಕ ದಾಖಲೆ ಸಲ್ಲಿಸಿ ಸೌಲಭ್ಯ ಪಡೆದುಕೊಳ್ಳಲು ಸರಕಾರ ಹಸುರು ನಿಶಾನೆ ನೀಡಿದೆ. ಈಗಾಗಲೇ ಮಂಜೂರಾತಿ ದೊರೆತು ಹಣ ಬಿಡುಗಡೆಗೊಂಡ ಎಲ್ಲ ಫಲಾನುಭವಿಗಳ ಖಾತೆಗೆ ಹಣ ಜಮೆ ಆಗುತ್ತಿದ್ದು, ಬಾಕಿ ಇರುವ ಅರ್ಹ ಫಲಾನುಭವಿಗಳನ್ನೂ ಪರಿಗಣಿಸುವುದಕ್ಕೆ ಸರಕಾರ ಮಾ.25ರ ವರೆಗೆ ಕಾಲಾವಕಾಶ ನೀಡಿದೆ.

Advertisement

ಬೇಡಿಕೆ ಪಟ್ಟಿ ಸಲ್ಲಿಕೆ ಹಂತದಲ್ಲೇ ತಿರಸ್ಕಾರ!
ಸಾಲಮನ್ನಾಕ್ಕೆ ಸಂಬಂಧಿಸಿ ಆರಂಭಿಕ ಹಂತದಲ್ಲಿ ಆಯಾ ಸಹಕಾರ ಸಂಘಗಳು ಅರ್ಹರನ್ನು ಪಟ್ಟಿ ಮಾಡಿ ಸರಕಾರಕ್ಕೆ ಬೇಡಿಕೆ ಸಲ್ಲಿಸಿದ್ದವು. ಮಂಜೂರಾತಿ ದೊರೆತ ಬಳಿಕ ಫಲಾನುಭವಿಗಳ ಖಾತೆಗೆ ಹಣ ಬಿಡುಗಡೆ ಆಗುವುದು ಪ್ರಕ್ರಿಯೆ. ಉಭಯ ಜಿಲ್ಲೆಗಳ ಬೇಡಿಕೆ ಪಟ್ಟಿಯಲ್ಲಿದ್ದ 14,537 ಮಂದಿಯ ಹೆಸರುಗಳನ್ನು (145.88 ಲಕ್ಷ ರೂ.) ವಿವಿಧ ಕಾರಣಗಳಿಗಾಗಿ ಮಂಜೂರಾತಿ ಹಂತದಲ್ಲಿ ಕೈ ಬಿಡಲಾಯಿತು. ಇದರಿಂದ ಈ ಫಲಾನುಭವಿಗಳು ಗ್ರೀನ್‌ ಲೀಸ್ಟ್‌ ನಿಂದ ಹೊರಗುಳಿದಿದ್ದರು.

ತಿರಸ್ಕೃತರಿಗೆ ಅವಕಾಶ
ಸಾಲಮನ್ನಾಕ್ಕೆ ಘೋಷಣೆ ಸಂದರ್ಭ ಹೊಸ ಪಡಿತರ ಚೀಟಿ ಪಡೆದಿದ್ದ ಫಲಾನುಭವಿಗಳ ಖಾತೆಯಲ್ಲಿ ಹೊಸ ನಂಬರ್‌ ಅಪ್‌ಡೇಟ್‌ ಆಗದ ಹಳೆ ನಂಬರ್‌ ಉಳಿದುಕೊಂಡಿರುವುದರಿಂದ ಲಿಂಕ್‌ ಆಗದಿರುವಂತಹ ಸಮಸ್ಯೆ ಕಂಡು ಬಂದಿತ್ತು. ಇಂತಹ ಲೋಪಗಳು ಗ್ರೀನ್‌ ಪಟ್ಟಿಗೆ ಸೇರದಿರಲು ಕಾರಣ ಎನ್ನಲಾಗಿದೆ. ತಿರಸ್ಕೃತ ಪ್ರಕರಣಗಳಲ್ಲಿ ಅರ್ಹ ಫಲಾನುಭವಿಗಳಿದ್ದು, ಅಂತಹವ ರಿಗೆ ತಿದ್ದುಪಡಿಗೆ ಅವಕಾಶ ಕಲ್ಪಿಸಲು ಸರಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಸರಕಾರ ಈಗ ಅವಕಾಶ ಕಲ್ಪಿಸಿದೆ.

ಮಾ.25: ಕೊನೆ ದಿನಾಂಕ
ನಿರ್ಧಾರವನ್ನು ಮಾ.12, 2020ರಂದು ಸಹಕಾರ ಸಚಿವರು ಅಧಿಕಾರಿಗಳ ಸಭೆಯಲ್ಲಿ ಪ್ರಕಟಿಸಿದ್ದು, ವಂಚಿತ ರೈತರು ಮಾ.25ರೊಳಗೆ ದಾಖಲೆ ಸಲ್ಲಿಸಿದರೆ ಸೌಲಭ್ಯ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ. ಈ ರೈತರು ದಾಖಲೆಗಳ ನ್ಯೂನತೆ ಸರಿಪಡಿಸಿಕೊಂಡು ಪುನಃ ಅರ್ಜಿ ದಾಖಲೆ ಸಲ್ಲಿಸಬಹುದು. ಒಂದು ವೇಳೆ ದಾಖಲೆ ಸಲ್ಲಿಸದಿದ್ದಲ್ಲಿ ಅಂಥವರು ಈ ಸೌಲಭ್ಯದಿಂದ ವಂಚಿತರಾಗುತ್ತಾರೆ. ರೈತರು ದಾಖಲೆ ಸಲ್ಲಿಸಿದರೂ

ಎಸ್‌ಎಸ್‌ಡಿ ತಂತ್ರಾಂಶದಲ್ಲಿ ಸಮರ್ಪಕವಾಗಿ ಮಾಹಿತಿ ತುಂಬದಿದ್ದಲ್ಲಿ ಅಥವಾ ಸಕಾಲಕ್ಕೆ ಮಾಹಿತಿ ಒದಗಿಸದಿದ್ದಲ್ಲಿ ಸಂಘದ ಸಿಇಒ ಸೇರಿದಂತೆ ಸಂಬಂಧಿಸಿದ ಅಧಿಕಾರಿ/ಸಿಬಂದಿಯನ್ನೇ ಹೊಣೆಗಾರರನ್ನಾಗಿಸುವ ಜತೆಗೆ ಅವರಿಂದಲೇ ವಸೂಲಿ ಮಾಡಿ ರೈತರಿಗೆ ಸೌಲಭ್ಯ ಒದಗಿಸುವ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.

Advertisement

ಸಹಕಾರ ಸಂಘದಿಂದ ಕಳುಹಿಸಿದ ಬೇಡಿಕೆ ಪಟ್ಟಿಯಲ್ಲಿ ನನ್ನ ಹೆಸರಿತ್ತು. ಅನಂತರ ಮಂಜೂರಾತಿ (ಗ್ರೀನ್‌ ಲಿಸ್ಟ್‌) ಹಂತದಲ್ಲಿ ಹೆಸರು ಕೈ ಬಿಡಲಾಗಿತ್ತು. ಇದಕ್ಕೆ ಕಾರಣ ತಿಳಿದಿಲ್ಲ. ಸಮಸ್ಯೆ ಸರಿಪಡಿಸಿ ಮನ್ನಾ ಹಣ ನೀಡಲಾಗುವ ಭರವಸೆ ನೀಡಿ ವರ್ಷ ಸಮೀಪಿಸಿದ್ದರೂ ಅದಕ್ಕೆ ಸ್ಪಂದನೆ ಸಿಕ್ಕಿರಲಿಲ್ಲ. ಈಗ ದಾಖಲೆ ಸಲ್ಲಿಸಲು ಅವಕಾಶ ಸಿಕ್ಕಿದೆ.
– ಶ್ರೀನಿವಾಸ ಸುಳ್ಯ

ಸಾಲ ಮನ್ನಾ ಸೌಲಭ್ಯದಿಂದ ವಂಚಿತರಾದ ರೈತರು ಮಾರ್ಚ್‌ 25 ರೊಳಗೆ ದಾಖಲೆ ಸಲ್ಲಿಸಿದರೆ ಸೌಲಭ್ಯ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ. ಈ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.
-ಶಿವಲಿಂಗಯ್ಯ, ಸಹಕಾರ ಇಲಾಖಾಧಿಕಾರಿ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next