ವಾಡಿ: ಇಡೀ ಜಗತ್ತನ್ನೇ ತಲ್ಲಣಿಸುವಂತೆ ಮಾಡಿದ ಕ್ರೂರಿ ಕೊರೊನಾ ಸೊಂಕಿನ ಭೀತಿಯಿಂದ ಕಳೆದ 13 ತಿಂಗಳಿಂದ ಸಂಚಾರ ನಿಲ್ಲಿಸಿದ್ದ ಕಲ್ಯಾಣ ನಾಡಿನ ಪ್ಯಾಸೆಂಜರ್ ರೈಲುಗಳು ನಿಧಾನವಾಗಿ ಹಳಿ ಹಿಡಿಯುತ್ತಿವೆ. ಕಲಬುರಗಿ, ರಾಯಚೂರು, ಬೀದರ ಹಾಗೂ ಹೈದರಾಬಾದ ನಡುವೆ ಸಾಮಾನ್ಯ ದರ್ಜೆಯ ಪ್ಯಾಸೆಂಜರ್ ರೈಲುಗಳ ಸಂಚಾರಕ್ಕೆ ಸೆಂಟ್ರಲ್ ರೈಲ್ವೆ ಹಸಿರು ಬಾವುಟ ತೋರಿಸಿದ್ದು, ಜು.19 ರಿಂದ ರೈಲುಗಳ ಓಡಾಟ ಶುರುವಾಗಿದೆ.
ಪ್ರತಿದಿನ ಮಧ್ಯಾಹ್ನ 2:25ಕ್ಕೆ ಪಟ್ಟಣದ ರೈಲು ನಿಲ್ದಾಣದಿಂದ ಆಂಧ್ರಪ್ರದೇಶದ ಫಲಕನಾಮಾ ನಗರಕ್ಕೆ ಹೊರಡುವ ಪ್ಯಾಸೆಂಜರ್ ರೈಲು ಜು.21ರಂದು ತನ್ನ ಸೇವೆ ಆರಂಭಿಸಿತು. ಇದು ಸಂಜೆ 7:05ಕ್ಕೆ ಕಾಚಿಗುಡ ನಿಲ್ದಾಣ ತಲುಪುತ್ತದೆ. ಬೆಳಗ್ಗೆ 5:00 ಗಂಟೆಗೆ ಫಲಕನಾಮಾ ರೈಲು ನಿಲ್ದಾಣದಿಂದ ಹೊರಡುವ ಈ ಪ್ಯಾಸೆಂಜರ್ ಬೆಳಗ್ಗೆ 11:30ಕ್ಕೆ ವಾಡಿ ನಿಲ್ದಾಣ ತಲುಪುತ್ತದೆ. ಪ್ರತಿದಿನ ಸಂಜೆ 5:55ಕ್ಕೆ ಕಲಬುರಗಿ ನಿಲ್ದಾಣದಿಂದ ಹೊರಡುವ ಪ್ಯಾಸೆಂಜರ್ ರೈಲು ವಾಡಿ(ಜಂ)ಹಾಗೂ ಯಾದಗಿರಿ ಮಾರ್ಗವಾಗಿ ರಾತ್ರಿ 10:10ಕ್ಕೆ ರಾಯಚೂರು ತಲುಪುತ್ತದೆ.
ಬೆಳಗ್ಗೆ 7:45ಕ್ಕೆ ರಾಯಚೂರಿನಿಂದ ಹೊರಡುವ ಈ ರೈಲು ಬೆಳಗ್ಗೆ 10:45ಕ್ಕೆ ವಾಡಿ ಮಾರ್ಗವಾಗಿ ಕಲಬುರಗಿ ತಲುಪುತ್ತದೆ. ಬೆಳಗ್ಗೆ 6:55ಕ್ಕೆ ಬೀದರ ನಗರದಿಂದ ಹೊರಡುವ ಪ್ಯಾಸೆಂಜರ್ ರೈಲು ಬೆಳಗ್ಗೆ 10:30ಕ್ಕೆ ಕಲಬುರಗಿ ನಿಲ್ದಾಣ ತಲುಪುತ್ತದೆ. ಪುನಃ ಬೆಳಗ್ಗೆ 10:45ಕ್ಕೆ ಕಲಬುರಗಿ ನಿಲ್ದಾಣದಿಂದ ಹೊರಟು ಮಧ್ಯಾಹ್ನ 2:20ಕ್ಕೆ ಬೀದರ ತಲುಪುತ್ತದೆ. ಬೀದರದಿಂದ ಮಧ್ಯಾಹ್ನ 3:55ಕ್ಕೆ ಹೊರಟು ಸಂಜೆ 7:30ಕ್ಕೆ ಕಲಬುರಗಿ ತಲುಪಿದ ನಂತರ ರಾತ್ರಿ 7:45ಕ್ಕೆ ಪುನಃ ಬೀದರನತ್ತ ಚಲಿಸಲಿದೆ. ರೈಲುಗಳ ಸಂಖ್ಯೆ ಹಾಗೂ ವೇಳಾಪಟ್ಟಿ ಪರಿಷ್ಕರಿಸಲಾಗಿದೆ ಎಂದು ಸೆಂಟ್ರಲ್ ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಮಹಾರಾಷ್ಟ್ರದಲ್ಲಿ ಸೋಂಕು ನಿಯಂತ್ರಣಕ್ಕೆ ಬಾರದ ಕಾರಣ ಕರ್ನಾಟಕದ ಪ್ಯಾಸೆಂಜರ್ ರೈಲು ಸಂಚಾರಕ್ಕೆ ಅನುಮತಿ ನಿರಾಕರಿಸಿದ್ದರಿಂದ ಪ್ರತಿದಿನ ಬೆಳಗ್ಗೆ 7:00 ಗಂಟೆಗೆ ಕಲಬುರಗಿ ಮಾರ್ಗವಾಗಿ ಚಲಿಸುತ್ತಿದ್ದ ವಾಡಿ-ಸೊಲ್ಲಾಪುರ-ವಿಜಯಪುರ ಪ್ಯಾಸೆಂಜರ್ ರೈಲು ಸಂಚಾರ ಸದ್ಯಕ್ಕೆ ತಡೆಹಿಡಿಯಲಾಗಿದೆ ಎಂದು ಸೆಂಟ್ರಲ್ ರೈಲ್ವೆ ಕಚೇರಿ ಮೂಲಗಳು ತಿಳಿಸಿವೆ.
ಟಿಕೆಟ್ ದರ ಹೆಚ್ಚಳ: ಕೊರೊನಾ ಸೊಂಕಿನ ಲಾಕ್ ಡೌನ್ ನಂತರ ಪುನರಾರಂಭಗೊಂಡಿರುವ ಪ್ಯಾಸೆಂಜರ್ ರೈಲುಗಳ ಪ್ರಯಾಣ ದರದಲ್ಲಿ ಏರಿಕೆ ಕಂಡಿದೆ. ಈ ಮೊದಲು ಪ್ರತಿ 40 ಕಿ.ಮೀ ಪ್ರಯಾಣಕ್ಕೆ ಸಾಮಾನ್ಯ (ಪ್ಯಾಸೆಂಜರ್) ರೈಲುಗಳಿಗೆ ರೂ.10 ಟಿಕೆಟ್ ದರವಿದ್ದರೆ ಪರಿಷ್ಕೃತ ದರದ ಪ್ರಕಾರ 30 ರೂ.ಪಡೆಯಲಾಗುತ್ತಿದೆ. ನಿಲ್ದಾಣದ ಟಿಕೆಟ್ ಕೌಂಟರ್‌ಗಳಲ್ಲೇ ಪ್ಯಾಸೆಂಜರ್ ರೈಲುಗಳ ಟಿಕೆಟ್ ವಿತರಿಸಲಾಗುತ್ತಿದೆ. ರೈಲ್ವೆ ಖಾಸಗೀಕರಣದಿಂದ ಬಡ ಪ್ರಯಾಣಿಕರ ಮೇಲೆ ದರ ಏರಿಕೆಯ ಹೊರೆ ಬೀಳಲಿದೆ. ವ್ಯಾಪಾರ, ನೌಕರಿ, ಕಾಲೇಜು ಶಿಕ್ಷಣ, ದಿನಗೂಲಿಗಾಗಿ ಪ್ಯಾಸೆಂಜರ್ ರೈಲುಗಳನ್ನೇ ನೆಚ್ಚಿಕೊಂಡಿರುವ ಯಾದಗಿರಿ, ವಾಡಿ, ಕಲಬುರಗಿ ವ್ಯಾಪ್ತಿಯ ಜನರು ಹೆಚ್ಚಿನ ದರ ಪಾವತಿಸುವುದು ಅನಿವಾರ್ಯವಾಗಿದೆ. ಒಟ್ಟಾರೆ ವರ್ಷದಿಂದ ಸ್ಥಗಿತಗೊಂಡಿದ್ದ ಕಲಬುರಗಿ ಭಾಗದ ಪ್ಯಾಸೆಂಜರ್ ರೈಲುಗಳು ಮತ್ತೆ ಹಳಿಗೆ ಮರಳಿರುವುದು ಪ್ರಯಾಣಿಕರ ಹರ್ಷಕ್ಕೆ ಕಾರಣವಾಗಿದೆ.