Advertisement
ಮಹತ್ವದ ಬೆಳವಣಿಗೆಯಲ್ಲಿ ರಾಜ್ಯ ಸರಕಾರವು ಸಚಿವ ಸಂಪುಟದ ಒಪ್ಪಿಗೆ ಪಡೆದು ಕೆಲವು ಪರಿಷ್ಕರಣೆಯೊಂದಿಗೆ 2ನೇ ಸಲ ಕೇಂದ್ರ ಸರಕಾರಕ್ಕೆ ಕಳುಹಿಸಿದ್ದ ‘ಕಂಬಳ ತಿದ್ದುಪಡಿ ಮಸೂದೆ’ಗೆ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಇತ್ತೀಚೆಗಷ್ಟೇ ಸಹಿ ಹಾಕಿದ್ದರು. ಆ ಮೂಲಕ ಕಾನೂನು ಇಲಾಖೆಯಿಂದ ಹಲವು ತಿಂಗಳಿನಿಂದ ಎದುರಾಗಿದ್ದ ಕಾನೂನು ತೊಡಕು ಬಗೆಹರಿದಿದೆ. ಇದರೊಂದಿಗೆ ಉಭಯ ಸದನಗಳಲ್ಲಿ ಒಪ್ಪಿಗೆ ಪಡೆದು, ರಾಜ್ಯಪಾಲರ ಮೂಲಕ ಕೇಂದ್ರ ಸರಕಾರಕ್ಕೆ ಕಳುಹಿಸಿದ್ದ ಈ ‘ಕಂಬಳ ತಿದ್ದುಪಡಿ ಮಸೂದೆ’ಗೆ ಈಗ ಅರಣ್ಯ ಮತ್ತು ಪರಿಸರ, ಸಂಸ್ಕೃತಿ ಹಾಗೂ ಕಾನೂನು ಸಚಿವಾಲಯದ ಒಪ್ಪಿಗೆ ಸಿಕ್ಕಿದೆ. ಈ ಹಿಂದೆ ಕೇವಲ ಅರಣ್ಯ ಹಾಗೂ ಸಂಸ್ಕೃತಿ ಸಚಿವಾಲಯದಿಂದಷ್ಟೇ ಒಪ್ಪಿಗೆ ಲಭಿಸಿತ್ತು. ಆದರೆ, ವಿಧೇಯಕದಲ್ಲಿನ ಕೆಲವು ಪದ ಬಳಕೆಗೆ ಕಾನೂನು ಸಚಿವಾಲಯ ಆಕ್ಷೇಪವೆತ್ತಿದ್ದ ಕಾರಣ ಕಡತವನ್ನು ರಾಜ್ಯ ಸರಕಾರಕ್ಕೆ ವಾಪಸ್ ಕಳುಹಿಸಲಾಗಿತ್ತು.
ಪ್ರಾಣಿ ಹಿಂಸೆಯ ನೆಪವೊಡ್ಡಿ ಕಂಬಳ ಸಹಿತ ಇದೇ ರೀತಿಯ ಕ್ರೀಡೆಗಳನ್ನು ರದ್ದುಪಡಿಸುವಂತೆ ಪ್ರಾಣಿದಯಾ ಸಂಘದವರು 2014ರಲ್ಲಿ ಹೈಕೋರ್ಟ್ ಮೊರೆ ಹೋಗಿದ್ದರು. ಅನಂತರ ನ್ಯಾಯಾಲಯವು ಈ ರೀತಿಯ ಆಚರಣೆಗಳಿಗೆ ತಡೆಯಾಜ್ಞೆ ನೀಡಿತ್ತು. ಮುಂದೆ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಉಳಿಸಲು ಬೃಹತ್ ಆಂದೋಲನ ನಡೆದು ಸರಕಾರ ಒಪ್ಪಿಗೆ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಅನಂತರ 2016ರಲ್ಲಿ ಕಂಬಳದ ಪರ ಜನರ ಹೋರಾಟ ಜೋರಾದಾಗ ರಾಜ್ಯ ಸರಕಾರವೇ ಅದಕ್ಕೆ ಪೂರಕವಾಗಿ ಕಾನೂನು ರೂಪಿಸಲು ಮುಂದಾಯಿತು. ಅದರಂತೆ ‘ಪ್ರಾಣಿ ಹಿಂಸೆ ತಡೆ (ಕರ್ನಾಟಕ ತಿದ್ದುಪಡಿ)ವಿಧೇಯಕ-2017’ ಅನ್ನು ಉಭಯ ಸದನಗಳಲ್ಲಿ ಒಪ್ಪಿಗೆ ಪಡೆದು ಫೆ.7ರಂದು ರಾಜ್ಯಪಾಲರ ಒಪ್ಪಿಗೆ ಕಳುಹಿಸಲಾಗಿತ್ತು. ರಾಜ್ಯಪಾಲರು ಅದನ್ನು ಫೆ.23ರಂದು ಕೇಂದ್ರ ಸರಕಾರಕ್ಕೆ ಕಳುಹಿಸಿದ್ದರು. ಅಲ್ಲಿಂದ ಈ ವಿಧೇಯಕ ಗೃಹ ಸಚಿವಾಲಯಕ್ಕೆ ಬಂದಿದ್ದು, ಅನಂತರ ಅದನ್ನು ಪರಿಸರ, ಸಂಸ್ಕೃತಿ ಹಾಗೂ ಕಾನೂನು ಸಚಿವಾಲಯದ ಒಪ್ಪಿಗೆಗೆ ಕಳುಹಿಸಲಾಗಿತ್ತು. ಅದರಂತೆ ಪರಿಸರ ಮತ್ತು ಸಂಸ್ಕೃತಿ ಇಲಾಖೆ ತನ್ನ ಒಪ್ಪಿಗೆ ಸೂಚಿಸಿತ್ತು. ಆದರೆ, ಪ್ರಾಣಿ ಹಿಂಸೆ ವಿಚಾರವಾಗಿ ವಿಧೇಯಕದಲ್ಲಿ ಬಳಸಿದ ಪದವೊಂದು ಸೂಕ್ತವಲ್ಲದ ಕಾರಣ ಕಾನೂನು ಸಚಿವಾಲಯ ವಿಧೇಯಕಕ್ಕೆ ತನ್ನ ಒಪ್ಪಿಗೆ ನೀಡಿರಲಿಲ್ಲ.
Related Articles
Advertisement
ಮತ್ತೆ ಸದನದ ಒಪ್ಪಿಗೆ ಬೇಡ‘ಕಂಬಳ ಮಸೂದೆ ಈಗಾಗಲೇ ಉಭಯ ಸದನಗಳ ಒಪ್ಪಿಗೆ ಪಡೆದಿರುವ ಕಾರಣ ಮತ್ತೆ ರಾಜ್ಯ ವಿಧಾನ ಮಂಡಲದಲ್ಲಿ ಮಂಡಿಸುವ ಅಗತ್ಯವಿಲ್ಲ. ಗೃಹ ಸಚಿವಾಲಯದಿಂದ ನೇರವಾಗಿ ಅದನ್ನು ರಾಷ್ಟ್ರಪತಿಗೆ ಕಳುಹಿಸಿಕೊಡಲಾಲಾಗಿತ್ತು. ಹೀಗಾಗಿ ಕಂಬಳ ಮಸೂದೆಯನ್ನು ಕಾನೂನಾಗಿ ಜಾರಿಗೊಳಿಸುವುದಕ್ಕೆ ಇನ್ನು ಕೇಂದ್ರ ಅಥವಾ ರಾಜ್ಯ ಸರಕಾರದ ಮಟ್ಟದಲ್ಲಿ ಯಾವುದೇ ಅಡೆತಡೆಗಳಿಲ್ಲ.