Advertisement

ಬಿತ್ತನೆಗೆ 12 ಲಕ್ಷ  ಬೀಜದುಂಡೆ ಸಿದ್ಧ 

05:19 AM May 26, 2018 | Karthik A |

ಕೋಟ: ವಾತಾವರಣದ ಉಷ್ಣಾಂಶ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಸಸ್ಯ ಸಂಕುಲದ ನಾಶ ಇದಕ್ಕೆಲ್ಲ ಕಾರಣ ಎನ್ನುವುದು ನಿಸ್ಸಂಶಯ. ಪರಿಹಾರೋಪಾಯವೆಂದರೆ ಹೆಚ್ಚು ಹೆಚ್ಚು ಗಿಡಮರಗಳನ್ನು ಬೆಳೆಸುವುದು. ಇದಕ್ಕಾಗಿ ‘ಸಾಸ್ತಾನ ಮಿತ್ರರು’ ಸಂಘಟನೆ ಲಕ್ಷಾಂತರ ಬೀಜದುಂಡೆಗಳನ್ನು ತಯಾರಿಸಿದ್ದು, ಮಳೆಗಾಲದ ಆಗಮನಕ್ಕೆ ಕಾಯುತ್ತಿದೆ. ಸಮಾಜಮುಖೀ ಸೇವೆಗಳನ್ನು ಮಾಡುತ್ತಿರುವ ಈ ಸಂಘಟನೆ ಕಳೆದ ವರ್ಷ 15 ಸಾವಿರ ಬೀಜದುಂಡೆಗಳನ್ನು ತಯಾರಿಸಿ ನಾಟಿ ಮಾಡಿತ್ತು. ಈ ಬಾರಿ ಮಳೆಗಾಲಕ್ಕಾಗಿ ಕಳೆದ ಜೂನ್‌ ನಿಂದಲೇ ತಯಾರಿ ನಡೆಸಿದೆ. ಶಾಲೆ – ಕಾಲೇಜು, ಸ್ವಸಹಾಯ ಸಂಘ, ಸಾಮಾಜಿಕ ಸಂಘಟನೆಗಳ ಸದಸ್ಯರಿಗೆ ತರಬೇತಿ ನೀಡಿ ಅವರ ಮೂಲಕ 12 ಲಕ್ಷ ಸೀಡ್‌ ಬಾಲ್‌ ಗ‌ಳನ್ನು ತಯಾರಿಸಿದೆ. ಹುಣಸೆ, ರಾಮಫಲ, ಕದಂಬ, ಲಕ್ಷ್ಮಣ ಫಲ, ಹೊಂಗೆ, ತುಳಸಿ, ಅರಳಿ ಮುಂತಾದ ಬೀಜಗಳಿಂದ ಇವು ಸಿದ್ಧಗೊಂಡಿವೆ. ಇಷ್ಟೊಂದು ಸಂಖ್ಯೆಯಲ್ಲಿ ಸೀಡ್‌ ಬಾಲ್‌ ತಯಾರಿ ಪ್ರಾಯಃ ಪ್ರಥಮ.

Advertisement

ಹೆಚ್ಚಿನ ಬೇಡಿಕೆ
‘ಸಾಸ್ತಾನ ಮಿತ್ರ’ರ ಬೀಜದುಂಡೆ ಯೋಜನೆಯ ಕುರಿತು ಸಾಮಾಜಿಕ ಮಾಧ್ಯಮಗಳ ಮೂಲಕ ತಿಳಿದು ಪ್ರಭಾವಿತರಾದ ಸಾಗರ, ತೀರ್ಥಹಳ್ಳಿ, ತುಮಕೂರು, ಶಿವಮೊಗ್ಗ, ಚಿಕ್ಕಬಳ್ಳಾಪುರ ಕಡೆಯ ಪರಿಸರ ಪ್ರೇಮಿಗಳು ಇವರಿಂದ ಸೀಡ್‌ ಬಾಲ್‌ ಗಳನ್ನು ಪಡೆಯುತ್ತಿದ್ದಾರೆ. ಶಿವಮೊಗ್ಗದ ಉತ್ತಿಷ್ಠ ಭಾರತ ಹಾಗೂ ಬಾಳ್ಕುದ್ರು ಮಠದವರು ‘ಸಾಸ್ತಾನ ಮಿತ್ರ’ರಿಗೆ ವಿವಿಧ ಗಿಡಮರಗಳ ಬೀಜಗಳನ್ನು ಸರಬರಾಜು ಮಾಡುತ್ತಾರೆ.

ಸೀಡ್‌ ಬಾಲ್‌ ತಯಾರಿ
ಮೂರು ಭಾಗ ಮಣ್ಣಿಗೆ ಒಂದು ಭಾಗ ಗೋಮೂತ್ರ, ಸೆಗಣಿ ಮಿಶ್ರಣ ಮಾಡಿ ಅದರೊಳಗೆ ಬೀಜ ಇರಿಸಿ ಉಂಡೆ ತಯಾರಿಸಲಾಗುತ್ತದೆ. ಇದು ಗಟ್ಟಿಯಾಗಲು ಸ್ವಲ್ಪ ಜೇಡಿಮಣ್ಣು ಬಳಸಲಾಗುತ್ತದೆ. ಇದನ್ನು ಒಂದೆರಡು ದಿನ ಬಿಸಿಲಲ್ಲಿ ಒಣಗಿಸಿದರೆ ಸೀಡ್‌ ಬಾಲ್‌ ಸಿದ್ಧಗೊಳ್ಳುತ್ತದೆ. ಮಳೆಗಾಲದಲ್ಲಿ ರಸ್ತೆಬದಿ, ಖಾಲಿ ಜಾಗ ಹಾಗೂ ಕಾಡಿನಲ್ಲಿ ಇದನ್ನು ಬಿತ್ತಲಾಗುತ್ತದೆ. ಈ ಬಾರಿಯ ಬಿತ್ತನೆ ಈಗಾಗಲೇ ಆರಂಭಗೊಂಡಿದೆ.

ಬೀಜದುಂಡೆ ಉಡುಗೊರೆ
ಶುಭ ಸಮಾರಂಭ ಹಾಗೂ ಸಾರ್ವಜನಿಕ ಸಮಾರಂಭಗಳಲ್ಲಿ ಅತಿಥಿಗಳಿಗೆ ಉಡುಗೊರೆಯಾಗಿ ಸೀಡ್‌ ಬಾಲ್‌ ನೀಡುವ ಸಂಪ್ರದಾಯವನ್ನು ಈ ಭಾಗದಲ್ಲಿ ‘ಸಾಸ್ತಾನ ಮಿತ್ರರು’ ಚಾಲ್ತಿಗೆ ತಂದಿದ್ದು, ಜನಪ್ರಿಯಗೊಂಡಿದೆ. ಲಕ್ಷಾಂತರ ಬೀಜದುಂಡೆಗಳು ಈಗಾಗಲೇ ಹೀಗೆ ವಿತರಣೆಯಾಗಿವೆ. 

ಹಸುರು ಬೆಳೆಸುವ ಜಾಗೃತಿ ಮೂಡಿಸುವುದಕ್ಕಾಗಿ ಈ ಅಭಿಯಾನ ಆರಂಭಿಸಿದೆವು. ಈಗಾಗಲೇ 12 ಲಕ್ಷ ಬೀಜದುಂಡೆ ತಯಾರಿಸಿದ್ದೇವೆ. ಆಸಕ್ತರಿಗೆ ಇದನ್ನು ನೀಡುತ್ತೇವೆ, ಉಳಿದವುಗಳನ್ನು ನಾವೇ ಬಿತ್ತನೆ ಮಾಡುತ್ತೇವೆ. ಬಿತ್ತುವುದು ಮಾತ್ರ ಅಲ್ಲ, ಎಷ್ಟು ಮೊಳಕೆ ಒಡೆದು, ಬೆಳೆದಿವೆ ಎನ್ನುವುದನ್ನು ಗಮನಿಸುತ್ತಿರುತ್ತೇವೆ.
– ವಿನಯ್‌ಚಂದ್ರ ಸಾಸ್ತಾನ, ಮುಖ್ಯಸ್ಥರು – ಸಾಸ್ತಾನ ಮಿತ್ರರು ಸಂಘಟನೆ

Advertisement

— ರಾಜೇಶ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next