ಬೆಂಗಳೂರು: ಬಿಬಿಎಂಪಿ ವತಿಯಿಂದ ನಗರದ ಮಾರ್ಗೋಸಾ ರಸ್ತೆ ಹಾಗೂ ಕೆ.ಜಿ.ರಸ್ತೆಯಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಟೆಂಡರ್‌ಶೂರ್ ರಸ್ತೆ ಕಾಮಗಾರಿಗೆ ಸಂಚಾರ ಪೊಲೀಸರು ಅನುಮೋದನೆ ನೀಡಿದ್ದು, ಗುರುವಾರದಿಂದ ಕಾಮಗಾರಿ ಆರಂಭವಾಗಲಿದೆ.
ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಮಾರ್ಗೋಸಾ ರಸ್ತೆಯ ಕೆ.ಸಿ.ಜನರಲ್ ಆಸ್ಪತ್ರೆಯಿಂದ ಮಾರಮ್ಮ ವೃತ್ತದವರೆಗೆ ಹಾಗೂ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಕೆ.ಜಿ.ರಸ್ತೆಯ ಉಪ್ಪಾರ ಪೇಟೆ ಠಾಣೆಯಿಂದ ಎಸ್‌ಬಿಐ ರಸ್ತೆಯವರೆಗೆ ಕಾಮಗಾರಿ ನಡೆಸಲು ಪೊಲೀಸರು ಅನುಮೋದನೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಗುರುವಾರದಿಂದಲೇ ವಿವಿಧ ಸೇವಾಜಾಲಗಳ ಸ್ಥಳಾಂತರ ಕಾಮಗಾರಿಗೆ ಅಧಿಕಾರಿಗಳು ಮುಂದಾಗಲಿದ್ದು, ಎಲ್ಲ ಸೇವಾಜಾಲಗಳನ್ನು ಪಾದಚಾರಿ ಮಾರ್ಗದ ಕೆಳಗೆ ತರಲಿದ್ದಾರೆ. ಅದರಂತೆ ಪ್ರಾಥಮಿಕವಾಗಿ ಸಿದ್ಧತೆಗಳನ್ನು ಮಾಡಿಕೊಳ್ಳಲಿದ್ದು, ಒಂದೊಮ್ಮೆ ಸೇವಾಜಾಲಗಳು ರಸ್ತೆ ನಡುವೆ ಹಾದು ಹೋಗಿದ್ದರೆ, ತಾತ್ಕಾಲಿಕವಾಗಿ ಸಂಚಾರ ಸ್ಥಗಿತಗೊಳಿಸಿ ಕಾಮಗಾರಿ ನಡೆಸಲಿದ್ದಾರೆ.
ಸಂಚಾರ ವ್ಯವಸ್ಥೆಯಲ್ಲಿ ವ್ಯತ್ಯಯವಿಲ್ಲ: ಮಲ್ಲೇಶ್ವರ ಹಾಗೂ ಗಾಂಧಿನಗರದಲ್ಲಿ ಟೆಂಡರ್‌ಶ್ಯೂರ್ ರಸ್ತೆ ನಿರ್ಮಿಸಲು ಈಗಾಗಲೇ ಸರ್ಕಾರ ಅನುಮೋದನೆ ನೀಡಿದೆ.
ಇದರೊಂದಿಗೆ ಅನುಮತಿ ಕೋರಿ ಒಂದು ತಿಂಗಳ ಬಳಿಕ ಸಂಚಾರ ಪೊಲೀಸರು ಅನುಮತಿ ನೀಡಿದ್ದಾರೆ. ಅದರಂತೆ ಎರಡೂ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳಲ್ಲಿ ಮಾತ್ರ ಕಾಮಗಾರಿ ನಡೆಯಲಿದ್ದು, ವಾಹನ ಸಂಚಾರಕ್ಕೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಪಾಲಿಕೆಯ ಯೋಜನಾ ವಿಭಾಗದ ಮುಖ್ಯ ಇಂಜಿನಿಯರ್ ಕೆ.ಟಿ.ನಾಗರಾಜ್ ತಿಳಿಸಿದ್ದಾರೆ.