Advertisement

ಹಸಿರು “ಹೆಣ್ಣು’

06:10 PM Jun 11, 2019 | mahesh |

ನಮಗೆ ಬೇಕಾದ ಎಲ್ಲ ಸೌಂದರ್ಯವರ್ಧಕಗಳನ್ನು ಈ ಪ್ರಕೃತಿಯೇ ಧಾರಾಳವಾಗಿ ನೀಡಿದೆ. ಅಷ್ಟಕ್ಕೂ, ಫೇಸ್‌ವಾಶು, ಕ್ರೀಮು, ಟೂತ್‌ಪೇಸ್ಟ್‌ಗಳ ಜಾಹೀರಾತಿನಲ್ಲಿ ತೋರಿಸುವ ಲಿಂಬೆ, ಬೇವು, ಅರಿಶಿನ, ಲವಂಗ ಎಲ್ಲವೂ ಪ್ರಕೃತಿದತ್ತವೇ ಆಗಿದೆ…

Advertisement

“ಅಜ್ಜಿ, ನಿಮ್ಮ ಕಾಲದ ಹೆಂಗಸರ ಸೌಂದರ್ಯದ ರಹಸ್ಯವೇನು?’ ಅಂತೊಮ್ಮೆ ಅವರನ್ನು ಕೇಳಿದ್ದೆ. ಆಗ ಅವರು, “ಅದರಲ್ಲಿ ರಹಸ್ಯವೇನು ಬಂತು? ಸುತ್ತಮುತ್ತ ಏನು ಸಿಗುತ್ತಿತ್ತೋ, ಅದನ್ನೇ ಎಲ್ಲಾ ಬಳಸುತ್ತಿದ್ವಿ. ಈಗಿನಂತೆ ಬ್ಯೂಟಿ ಪಾರ್ಲರೂ, ಕ್ರೀಮು, ಸೋಪು, ಶ್ಯಾಂಪೂ ಏನೂ ಇರಲಿಲ್ಲ. ಮೈಗೆ ಕಡಲೆಹಿಟ್ಟು, ತಲೆಗೆ ಸೀಗೇಕಾಯಿ, ಮುಖಕ್ಕೆ ಅರಿಶಿನ’ ಅಂತ ಹೇಳಿದ್ದರು. ನಮಗೆ ಬೇಕಾದ ಎಲ್ಲ ಸೌಂದರ್ಯವರ್ಧಕಗಳನ್ನು ಈ ಪ್ರಕೃತಿಯೇ ಧಾರಾಳವಾಗಿ ನೀಡಿದೆ ಅನ್ನೋದು ಅಜ್ಜಿ ಯಾವಾಗಲೂ ಹೇಳುತ್ತಿದ್ದ ಮಾತು.

ಆ ಮಾತನ್ನು ಇಂದಿನವರು ಮರೆತಿದ್ದರಿಂದಲೇ ಇರಬೇಕು ಗಲ್ಲಿಗಲ್ಲಿಗಳಲ್ಲೂ ಬ್ಯೂಟಿಪಾರ್ಲರ್‌ಗಳು ತಲೆ ಎತ್ತಿರುವುದು ಮತ್ತು ಸೌಂದರ್ಯ ಉತ್ಪನ್ನಗಳ ಮಾರುಕಟ್ಟೆ ಹುಲುಸಾಗಿ ಬೆಳೆಯುತ್ತಿರುವುದು. ಅಷ್ಟಕ್ಕೂ ಪಾರ್ಲರ್‌ನವರು ಏನು ಮಾಡುತ್ತಾರೆ? ನಿಮ್ಮ ವಯಸ್ಸನ್ನು, ಚರ್ಮದ ಮೇಲಿನ ಸುಕ್ಕು-ಕಲೆಗಳನ್ನು ಮರೆಮಾಚಲು ಒಂದಿಷ್ಟು ಫೇಸ್‌ಕ್ರೀಂ, ಬ್ಲೀಚ್‌, ಲಿಪ್‌ಸ್ಟಿಕ್‌ ಅಂತೇನೇನೋ ಬಳಿದು ನಿಮ್ಮನ್ನು ಅಂದವಾಗಿ ಕಾಣುವಂತೆ ಮಾಡುತ್ತಾರೆ. ಆದರೆ, ಈ ಬಣ್ಣಗಳೆಲ್ಲ ಸ್ವಲ್ಪ ದಿನಗಳು ಮಾತ್ರ. ಪುನಃ ನಿಮ್ಮ ಸೌಂದರ್ಯ ಮಾಮೂಲಿಗಿಂತ ಹದಗೆಡುತ್ತದೆ. ಆಗ ನೀವು ಇನ್ನೂ ದುಬಾರಿ ಬೆಲೆಯ ಕೃತಕ ವಸ್ತುಗಳ ಮೊರೆ ಹೋಗುತ್ತೀರಿ. ಇದರಿಂದ ನಿಮ್ಮ ಚರ್ಮದ ಆರೋಗ್ಯಕ್ಕೇ ನಷ್ಟ. ಹಣವೂ ಪೋಲು.

ಅದರ ಬದಲು ನೀವೊಮ್ಮೆ ಪ್ರಕೃತಿಯತ್ತ ಮುಖ ಮಾಡಿ, ಅಲ್ಲಿ ನಿಮ್ಮ ಸೌಂದರ್ಯ ಹೆಚ್ಚಿಸುವ ಎಲ್ಲ ವಸ್ತುಗಳೂ ಲಭ್ಯ. ಅಷ್ಟಕ್ಕೂ, ನಿಮ್ಮ ಫೇಸ್‌ವಾಶು, ಕ್ರೀಮು, ಟೂತ್‌ಪೇಸ್ಟ್‌ಗಳ ಜಾಹೀರಾತಿನಲ್ಲಿ ತೋರಿಸುವ ಲಿಂಬೆ, ಬೇವು, ಅರಿಶಿನ, ಲವಂಗ ಎಲ್ಲವೂ ಪ್ರಕೃತಿದತ್ತವೇ ಅಲ್ಲವೆ? ಅದಕ್ಕೇ ಹೇಳ್ಳೋದು, ಪ್ರಕೃತಿಗಿಂತ ಬೆಸ್ಟ್‌ ಬ್ಯೂಟಿಪಾರ್ಲರ್‌ ಅಂತ.

1 ಮೈ ಕಾಂತಿಗೆ ಮ್ಯಾಜಿಕ್‌
ಮೈ ಬಣ್ಣ ಬಿಳಿಯಾಗಿಸಲು ಸಾವಿರಾರು ರೂ. ಖರ್ಚು ಮಾಡುವಿರೇಕೆ? ಲಿಂಬೆರಸಕ್ಕೆ, ಚಿಟಿಕೆ ಅರಿಶಿನ ಪುಡಿಯನ್ನು ಸೇರಿಸಿ, ಈ ಮಿಶ್ರಣಕ್ಕೆ ಒಂದು ಟೀ ಚಮಚ ಸೌತೆಕಾಯಿ ರಸವನ್ನು ಹಾಕಿ ಚೆನ್ನಾಗಿ ಬೆರೆಸಿ, ಮುಖ - ಕುತ್ತಿಗೆ ಭಾಗಗಳಿಗೆ ಮಸಾಜ್‌ ಮಾಡಿ. ಅರ್ಧ ಗಂಟೆಯ ನಂತರ ತಣ್ಣೀರಿನಿಂದ ಮುಖ ತೊಳೆಯುವುದು, ಪಾರ್ಲರ್‌ನಲ್ಲಿ ಒಂದು ಗಂಟೆ ಮುಖಕ್ಕೆ ಕೆಮಿಕಲ್‌ ಉಜ್ಜಿಸಿಕೊಳ್ಳುವುದಕ್ಕಿಂತ ಹೆಚ್ಚು ಪರಿಣಾಮಕಾರಿ.

Advertisement

2 ಮೊಡವೆ ಧರಿಸಿದ್ದೀರಾ?
ಒಂದು ತುಂಡು ಶ್ರೀಗಂಧವನ್ನು, ಸ್ವಲ್ಪ ಸೌತೆಕಾಯಿ ರಸ ಅಥವಾ ಗುಲಾಬಿ ನೀರಿನೊಂದಿಗೆ ಸ್ವತ್ಛವಾದ ಕಲ್ಲಿನಲ್ಲಿ ತೇಯ್ದು, ಆ ಮಿಶ್ರಣವನ್ನು ದಿನಕ್ಕೊಂದು ಬಾರಿ ಮುಖಕ್ಕೆ ಲೇಪಿಸಬೇಕು.

3 ಪಾದಗಳಿಗೆ ಲಿಂಬೆಸ್ನಾನ
ಅಂಗೈ, ಅಂಗಾಲು ಒಡೆದಿದ್ದರೆ ಪೆಡಿಕ್ಯೂರ್‌ ಮಾಡಿಕೊಳ್ಳಬೇಕಿಲ್ಲ. ಅಂಗಾಲಿಗೆ ಲಿಂಬೆರಸವನ್ನು ತಿಕ್ಕಿ ಸ್ವಲ್ಪ ಸಮಯ ಬಿಟ್ಟು ತೊಳೆದು, ಬೆಣ್ಣೆ ಅಥವಾ ಹಾಲಿನ ಕೆನೆಯನ್ನು ಹಾಕಿ ತಿಕ್ಕಿದರೆ, ಚರ್ಮ ನುಣುಪಾಗುತ್ತದೆ.

4 ಹುಬ್ಬಿಗೆ ಕೊಬ್ಬರಿ ಎಣ್ಣೆ ಕುಡಿಸಿ…
ಕಣ್ಣಿನ ಹುಬ್ಬುಗಳನ್ನು ಕಪ್ಪಾಗುವಂತೆ ಮಾಡಲು ದಿನವೂ ಸ್ವಲ್ಪ ಕೊಬ್ಬರಿ ಎಣ್ಣೆ ಅಥವಾ ಹರಳೆಣ್ಣೆಯನ್ನು ಮೃದುವಾಗಿ ಹಚ್ಚಿ. ಅಂದವಾದ ತುಟಿಯ ರಹಸ್ಯ ಎಲ್ಲಿ ಅಡಗಿದೆ ಗೊತ್ತಾ?

5 ಅಧರಂ ಮಧುರಂ
ತಾವರೆಯ ಮೊಗ್ಗಿನೊಳಗೆ ಕೇಸರದ ಬಳಿಯಿರುವ ಸಣ್ಣ ದಳಗಳನ್ನು ಲಿಂಬೆರಸದಲ್ಲಿ ಅದ್ದಿ ತುಟಿಗೆ ತಿಕ್ಕುವುದರಿಂದ ಕಪ್ಪಾದ ತುಟಿಗಳು ಗುಲಾಬಿ ಬಣ್ಣ ಪಡೆಯುತ್ತವೆ.

6 ನ್ಯಾಚುರಲ್‌ ಫೇಸ್‌ಪ್ಯಾಕ್‌
ಮುಖದ ಸೌಂದರ್ಯಕ್ಕೆ ಸೌತೆಕಾಯಿ ರಸವನ್ನು ಹತ್ತಿಯಲ್ಲಿ ಅದ್ದಿ ಮುಖದ ಮೇಲೆ ಮೃದುವಾಗಿ ಉಜ್ಜಿ. ಬಳಲಿದ ಚರ್ಮಕ್ಕೆ ಆರೈಕೆ ಸಿಗುತ್ತದೆ. ಕ್ಯಾರೆಟ್‌ ಅನ್ನು ತುರಿದು, ಆದರ ರಸವನ್ನು ಮುಖಕ್ಕೆ ಲೇಪಿಸಿ, ಅರ್ಧ ಗಂಟೆ ಬಿಟ್ಟು ಮುಖ ತೊಳೆಯಿರಿ.

7 ಕಪ್ಪು ಕೂದಲಿಗೆ ಪಂಚತಂತ್ರ
ಹಿಂದಿನ ಕಾಲದ ಮಹಿಳೆಯರೆಲ್ಲ ಉದ್ದ ಕೂದಲಿನ ಒಡತಿಯರು. ಆ ಕಾಲದಲ್ಲಿ ಕೂದಲಿಗೆ ಬಣ್ಣ ಹಚ್ಚಬಹುದೆಂಬ ಕಲ್ಪನೆಯೂ ಅವರಿಗೆ ಇರಲಿಕ್ಕಿಲ್ಲ. ಆದರೆ, ಈಗ ವಯಸ್ಸು ಇಪ್ಪತ್ತೈದು ದಾಟುವಷ್ಟರಲ್ಲಿ ಬಿಳಿ ಕೂದಲು ಕಾಣಿಸಿಕೊಳ್ಳುತ್ತಿದೆ. ಅದನ್ನು ಮರೆ ಮಾಚಲು, ರಾಸಾಯನಿಕ ಬಣ್ಣಗಳ ಮೊರೆ ಹೋಗುತ್ತೇವೆ. ಹಾಗಾದ್ರೆ, ಹಿಂದಿನವರನ್ನೇಕೆ ಈ ಸಮಸ್ಯೆ ಕಾಡಿರಲಿಲ್ಲ? ಅವರಿಗೆ ಈ ಕೆಳಗಿನ ಗುಟ್ಟು ಗೊತ್ತಿತ್ತು…

– ತಣ್ಣೀರಿನಿಂದ ತಲೆ ಸ್ನಾನ ಮಾಡುವುದರಿಂದ ವಯಸ್ಸಿಗೂ ಮೊದಲು ಕೂದಲು ಬೆಳ್ಳಗಾಗುವುದನ್ನು ತಪ್ಪಿಸಬಹುದು.

– ಕೂದಲಿನ ಬುಡದಿಂದ, ತುದಿಯವರೆಗೆ ಮಜ್ಜಿಗೆಯಲ್ಲಿ ಚೆನ್ನಾಗಿ ನೆನೆಸಿ ಅರ್ಧ ಗಂಟೆಯ ನಂತರ ತಲೆ ಸ್ನಾನ ಮಾಡಬೇಕು.

– ತಲೆಗೆ ಸೋಪಿನ ಬದಲು ಕಡಲೆ ಹಿಟ್ಟು/ಹೆಸರು ಹಿಟ್ಟನ್ನು ಬಳಸಬೇಕು.

– ದಾಸವಾಳ ಹೂ ಮತ್ತು ಕರಿಬೇವಿನ ರಸಕ್ಕೆ ಸ್ವಲ್ಪ ಲಿಂಬೆರಸ ಬೆರೆಸಿ ಕೂದಲಿಗೆ ಹಚ್ಚಿಕೊಳ್ಳಬೇಕು.

– ಕೊಬ್ಬರಿ ಎಣ್ಣೆಯಲ್ಲಿ ಮೆಂತ್ಯೆಯನ್ನು ನೆನೆಹಾಕಿ ಕೂದಲಿನ ಬುಡಕ್ಕೆ ಮಸಾಜ್‌ ಮಾಡಬೇಕು.

– ವೇದಾವತಿ ಎಚ್‌. ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next