ನವದೆಹಲಿ:ದೇಶಾದ್ಯಂತ ಕೋವಿಡ್ ಸೋಂಕು ನಡುವೆಯೇ ಕಪ್ಪು, ಬಿಳಿ ಮತ್ತು ಹಳದಿ ಫಂಗಸ್ ವರದಿಯಾದ ಬೆನ್ನಲ್ಲೇ ಇದೀಗ ಮಧ್ಯಪ್ರದೇಶದ ಇಂದೋರ್ ನಲ್ಲಿ ಗ್ರೀನ್ (ಹಸಿರು) ಫಂಗಸ್ ಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ.
ಇಂದೋರ್ ನಲ್ಲಿ 34ವರ್ಷದ ಕೋವಿಡ್ ಸೋಂಕಿತ ರೋಗಿಯಲ್ಲಿ ಹಸಿರು ಫಂಗಸ್ ಪತ್ತೆಯಾದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಏರ್ ಆ್ಯಂಬುಲೆನ್ಸ್ ಮೂಲಕ ಮುಂಬೈಗೆ ಸ್ಥಳಾಂತರಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ಅರಬಿಂದೋ ಇನ್ಸ್ ಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ.ರವಿ ದೋಸಿ ಈ ಬಗ್ಗೆ ಮಾಹಿತಿ ನೀಡಿದ್ದು, 34ವರ್ಷದ ಯುವಕನನ್ನು ಪರೀಕ್ಷೆಗೊಳಪಡಿಸಿದಾಗ ಬ್ಲ್ಯಾಕ್ ಫಂಗಸ್ ತಗುಲಿರುವುದಾಗಿ ಶಂಕಿಸಲಾಗಿತ್ತು. ಆದರೆ ಆತನಲ್ಲಿ ಹಸಿರು ಫಂಗಸ್ ಅಭಿವೃದ್ಧಿಯಾಗಿರುವುದು ಪತ್ತೆಯಾಗಿರುವುದಾಗಿ ತಿಳಿಸಿದ್ದಾರೆ.
ರೋಗಿ ಕೋವಿಡ್ 19 ಸೋಂಕಿನಿಂದ ಚೇತರಿಸಿಕೊಂಡಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಆದರೆ ರೋಗಿ ಮೂಗಿನಲ್ಲಿ ರಕ್ತಸ್ರಾವವಾಗಲು ಆರಂಭವಾಗಿದ್ದು, ವಿಪರೀತ ಜ್ವರ ಕಾಣಿಸಿಕೊಂಡಿತ್ತು. ಅಲ್ಲದೇ ಆತ ತೂಕ ಕಳೆದುಕೊಳ್ಳಲಾರಂಭಿಸಿರುವುದಾಗಿ ವೈದ್ಯರು ವಿವರಿಸಿದ್ದಾರೆ.
ಕೋವಿಡ್ ನಿಂದ ಚೇತರಿಸಿಕೊಂಡಿರುವ ಕೋವಿಡ್ 19 ಸೋಂಕಿತರಲ್ಲಿ ಹಸಿರು ಶಿಲೀಂಧ್ರದ ಸೋಂಕಿನ ಸ್ವರೂಪ ಇತರ ರೋಗಿಗಳಿಗಿಂತ ಭಿನ್ನವಾಗಿದೆಯೇ ಎಂಬ ಬಗ್ಗೆ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ ಎಂದು ಡಾ.ರವಿ ತಿಳಿಸಿದ್ದಾರೆ.