Advertisement

ಭಾರತ ಮಾತೆಗೆ ಹಸಿರು ಹೊದಿಕೆ; ಪರಿಸರ ಕಾಳಜಿಗೆ ಪಂಚಾಮೃತ’

08:25 PM Feb 01, 2023 | Team Udayavani |

ಪರಿಸರ ಕಾಳಜಿಗೆ ವಿಶೇಷ ಒತ್ತು ನೀಡಿರುವ ಮೋದಿ ಸರ್ಕಾರ ಭಾರತ ಮಾತೆಗೆ ಹಸಿರು ಹೊದಿಕೆ’ ಹೊದಿಸಲು ಆದ್ಯತೆ ನೀಡಿದೆ. ಹಸಿರೇ ಉಸಿರು ಗಾದೆ ಮಾತಿಗೆ ಬಲ ತುಂಬಲು ಸಾವಿರಾರು ಕೋಟಿ ಹಣದ ಜತೆಗೆ ವಿಶೇಷ ಯೋಜನೆಗಳನ್ನೂ ಘೋಷಿಸಿದೆ. ಕಾರ್ಬನ್‌ ಮುಕ್ತ ಭುವಿಗೆ ಪಂಚಾಮೃತ’ ಉಣಿಸಲು ಸಜ್ಜಾಗಿದೆ. 2070ರ ವೇಳೆಗೆ ಇಂಗಾಲ ಡೈ ಆಕ್ಸೈಡ್ ಪ್ರಮಾಣವನ್ನು ಶೂನ್ಯಕ್ಕೆ ಇಳಿಸುವ ಗಟ್ಟಿ ನಿರ್ಧಾರ ಕೈಗೊಂಡಿದೆ. ಇದಕ್ಕಾಗಿ ಹಸಿರು ಕೈಗಾರಿಕಾ ಹಾಗೂ ಆರ್ಥಿಕ ವಲಯ ಸ್ಥಾಪಿಸಲಿದೆ.

Advertisement

ಹಸಿರು ಹೈಡ್ರೋಜನ್‌ ಮಿಷನ್‌
ಇಂಧನ ಆಮದು ಹೊರೆ ತಗ್ಗಿಸಲು ದಿಟ್ಟ ಹೆಜ್ಜೆ ಇಟ್ಟಿರುವ ಮೋದಿ ಸರ್ಕಾರ ಗ್ರೀನ್‌ ಹೈಡ್ರೋಜನ್‌ ಮಿಷನ್‌ ಜಾರಿಗೆ 19,700 ಕೋಟಿ ಮೀಸಲಿರಿಸಿದೆ. ಹಸಿರು ಹೈಡ್ರೋಜನ್‌ ಉತ್ಪಾದನೆ ಹೆಚ್ಚಳ ಮೂಲಕ ಪಳೆಯುಳಿಕೆ ಇಂಧನ ಆಮದು ಪ್ರಮಾಣ ಗಣನೀಯ ಪ್ರಮಾಣದಲ್ಲಿ ತಗ್ಗಲಿದೆ. ಅಲ್ಲದೇ ಗ್ರೀನ್‌ ಹೈಡ್ರೋಜನ್‌ ಮತ್ತು ಅದರ ಉತ್ಪನ್ನಗಳ ರಫ್ತಿಗೂ ಭರಪೂರ ಅವಕಾಶ ಸಿಗಲಿದೆ. 2030ರ ವೇಳೆಗೆ 5 ಮಿಲಿಯನ್‌ ಮೆಟ್ರಿಕ್‌ ಟನ್‌ ಉತ್ಪಾದನಾ ಸಾಮರ್ಥ್ಯ ವೃದ್ಧಿಯ ಗುರಿ ಇಟ್ಟುಕೊಳ್ಳಲಾಗಿದೆ. ಈ ಕ್ಷೇತ್ರದ ತಾಂತ್ರಿಕ ಮಾರುಕಟ್ಟೆಯಲ್ಲಿ ನಿರ್ಣಾಯಕ’ ಪಾತ್ರ ವಹಿಸಲು ಭಾರತ ದೀರ್ಘ‌ ಕಾಲದ ಯೋಜನೆ ರೂಪಿಸಿದೆ.

ಇಂಧನ ಪರಿವರ್ತನೆ
ಇಂಧನ ಪರಿವರ್ತನೆಯತ್ತಲೂ ದೃಷ್ಟಿ ಹರಿಸಿರುವ ಮೋದಿ ಸರ್ಕಾರ ಈ ಯೋಜನೆಗೆ ಭರ್ಜರಿ 35,000 ಕೋಟಿ ನಿವ್ವಳ ಹೂಡಿಕೆ ಮಾಡಲಿದೆ. ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯದ ಮೂಲಕ ಇದನ್ನು ಅನುಷ್ಠಾನಗೊಳಿಸಲು ನಿರ್ಧರಿಸಿದೆ.

ಇಂಧನ ಸಂಗ್ರಹ ಯೋಜನೆಗಳು
ಸುಸ್ಥಿರ ಅಭಿವೃದ್ಧಿ ಹಾದಿ ಸದೃಢಗೊಳಿಸುವುದರ ಜತೆಗೆ ಆರ್ಥಿಕ ಚೇತೋಹಾರಿಗೆ ಬ್ಯಾಟರಿ ಚಾಲಿತ ಇಂಧನ ಸಂಗ್ರಹಕ್ಕೂ ಬಹು ದೊಡ್ಡ ಕೊಡುಗೆ ನೀಡಲಾಗಿದೆ. 4000 ಎಂಡಬ್ಲ್ಯುಎಚ್‌ (ಮೆಗ್ಯಾವ್ಯಾಟ್‌ ಪರ್‌ ಅವರ್‌) ಸಾಮರ್ಥ್ಯದ ಇಂಧನ ಸಂಗ್ರಹ ವ್ಯವಸ್ಥೆಗೆ ಆರ್ಥಿಕ ಬಲ ತುಂಬುವ ಕಾರ್ಯಸಾಧ್ಯತೆಗೆ ಆದ್ಯತೆ ನೀಡಲಾಗಿದೆ. ದರ ಅನುಷ್ಠಾನಕ್ಕೆ ಪಂಪ್ಡ್ ಸ್ಟೋರೇಜ್‌ ಪ್ರೊಜೆಕ್ಟ್ಗಳನ್ನು ರಚಿಸಲು ನಿರ್ಧರಿಸಲಾಗಿದೆ.

ನವೀಕರಿಸಬಹುದಾದ ಇಂಧನ
ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಆದ್ಯತೆ ನೀಡಿರುವ ಮೋದಿ ಸರ್ಕಾರ ಅಂತಾರಾಜ್ಯ ವಿದ್ಯುತ್‌ ಪ್ರಸರಣ ವ್ಯವಸ್ಥೆಯತ್ತಲೂ ಚಿತ್ತ ಹರಿಸಿದೆ. ಲಡಾಕ್‌ನಲ್ಲಿ 20,700 ಕೋಟಿ ರೂ. ವೆಚ್ಚದಲ್ಲಿ 13 ಗಿಗಾ ವ್ಯಾಟ್‌ ಸಾಮರ್ಥ್ಯದ ನವೀಕರಿಸಬಹುದಾದ ಇಂಧನ ಘಟಕ ಸ್ಥಾಪನೆ ನಿರ್ಧರಿಸಿದೆ. ಇದಕ್ಕೆ ಕೇಂದ್ರ ಸರ್ಕಾರ 8300 ಕೋಟಿ ರೂ. ಪಾವತಿಸಲಿದೆ.

Advertisement

ಗ್ರೀನ್‌ ಕ್ರೆಡಿಟ್‌ ಪ್ರೋಗ್ರಾಮ್‌
ಪರಿಸರ ಕಾಳಜಿ’ ಜಾಗೃತಗೊಳಿಸುವುದರ ಜತೆಗೆ ಎಲ್ಲರನ್ನೂ ಒಳಗೊಳ್ಳಲು ದಿಟ್ಟ ಹೆಜ್ಜೆ ಇಟ್ಟಿದ್ದು, ಇದಕ್ಕಾಗಿ ಬಜೆಟ್‌ನಲ್ಲಿ ಗ್ರೀನ್‌ ಕ್ರೆಡಿಟ್‌ ಪ್ರೋಗ್ರಾಮ್‌ ಘೋಷಿಸಲಾಗಿದೆ. ಕೈಗಾರಿಕೋದ್ಯಮಿಗಳು, ಸ್ಥಳೀಯ ಸಂಸ್ಥೆಗಳು ಹಾಗೂ ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಳ್ಳಲು ಅನುವು ಮಾಡಿಕೊಡಲಾಗಿದೆ. ನಿಗದಿತ ಪ್ರದೇಶದಲ್ಲಿ ಅರಣ್ಯ ಪ್ರದೇಶ ಬೆಳೆಸಲು ಹಾಗೂ ಅದಕ್ಕೆ ಪ್ರೋತ್ಸಾಹಿಸಲು ನೈಸರ್ಗಿಕ ರಕ್ಷಣಾ ಕಾಯ್ದೆ ಮೂಲಕ ಅನುಕೂಲ ಕಲ್ಪಿಸಲಾಗಿದೆ. ಇದಕ್ಕೆ ಕೇಂದ್ರದ ವಿಶೇಷ ಪ್ರೋತ್ಸಾಹ’ವೂ ಸಿಗಲಿದೆ.

ಪಿಎಂ-ಪ್ರಣಾಮ್‌
ಅನ್ನದಾತರು ತಮ್ಮ ಬೆಳೆ ರಕ್ಷಣೆ, ಹೆಚ್ಚಿನ ಇಳುವರಿಗೆ ಹೇರಳವಾಗಿ ಬಳಸುತ್ತಿರುವ ರಾಸಾಯನಿಕ ಪ್ರಮಾಣ ತಗ್ಗಿಸಲು ಪಿಎಂ ಪ್ರಣಾಮ್‌’ ಯೋಜನೆ ಘೋಷಿಸಲಾಗಿದೆ. ಭೂತಾಯಿಯ ಪೋಷಣೆ, ಸುಧಾರಣೆ ಪುನರ್‌ ನಿರ್ಮಾಣ ಹಾಗೂ ಜಾಗೃತಿಯ ಪರಿಕಲ್ಪನೆ ಈ ಯೋಜನೆ ಜಾರಿಯಾಗಲಿದೆ. ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ವಿಷಯುಕ್ತ ರಾಸಾಯನಿಕ ಬಳಕೆ ಬದಲು ಪರಿಸರ ಸ್ನೇಹಿ, ನಿಸರ್ಗ ಕಾಳಜಿಯುಳ್ಳ ಸುಸ್ಥಿರ ಕೃಷಿಗೆ ಪ್ರೋತ್ಸಾಹಿಸುವ ಜತೆಗೆ ಜಾಗೃತಿ ಮೂಡಿಸಲಾಗುತ್ತದೆ.

ಗೋಬರ್ದನ್‌
ಜೈವಿಕ ಅನಿಲ ಪ್ರಮಾಣ ಹೆಚ್ಚಿಸಲು ಸಜ್ಜಾಗಿರುವ ಕೇಂದ್ರ ಸರ್ಕಾರ ಗೋಬರ್ದನ್‌ ಯೋಜನೆ ಮೂಲಕ ವೇಸ್ಟ್‌ ಟು ವೆಲ್ತ್‌’ ಹೆಸರಿನಡಿ 500 ಹೊಸ ಘಟಕಗಳ ನಿರ್ಮಿಸಲಿದೆ. 10 ಸಾವಿರ ಕೋಟಿ ವೆಚ್ಚದಲ್ಲಿ 200 ಕಂಪ್ರಸ್ಡ್ ಬಯೋ ಗ್ಯಾಸ್‌ ಸೇರಿದಂತೆ 75 ನಗರ ಪ್ರದೇಶದಲ್ಲಿ, 300 ಕ್ಲಸ್ಟರ್‌ ಆಧಾರಿತ ಪ್ರದೇಶಗಳಲ್ಲಿ ನಿರ್ಮಿಸಲಾಗುವುದು.

ಭಾರತೀಯ ನೈಸರ್ಗಿಕ ಕೃಷಿ
ಮತ್ತೊಮ್ಮೆ ರೈತರ ಬೆನ್ನಿಗೆ ನಿಂತಿರುವ ಕೇಂದ್ರ ಸರ್ಕಾರ ನೈಸರ್ಗಿಕ ಕೃಷಿಗೆ ಬಲ ತುಂಬಲು ಮುಂದಾಗಿದೆ. ಮುಂದಿನ ಮೂರು ವರ್ಷಗಳಲ್ಲಿ 1 ಕೋಟಿ ರೈತರು ಇದನ್ನು ಅಳವಡಿಸಿಕೊಳ್ಳುವ ಗುರಿ ಹೊಂದಲಾಗಿದ್ದು, ಇದಕ್ಕಾಗಿ ರಾಷ್ಟ್ರಮಟ್ಟದಲ್ಲಿ 10 ಸಾವಿರ ಬಯೋ ಇನ್‌ಪುಟ್‌ ರಿಸೋರ್ಸ್‌ ಸೆಂಟರ್‌ ಆರಂಭಿಸಲಾಗುವುದು. ಸಾವಯವ ಕೃಷಿಗೆ ಅಗತ್ಯವಾದ ರಸಗೊಬ್ಬರ, ಕ್ರಿಮಿನಾಶಕ ಪೂರೈಕೆಗೆ ಭಾರತೀಯ ಪ್ರಾಕೃತಿಕ್‌ ಖೇತಿ ಬಯೋ ಇನ್‌ಪುಟ್‌ ರಿಸೋರ್ಸ್‌ ಸೆಂಟರ್‌’ಗಳು ಕಾರ್ಯನಿರ್ವಹಿಸಲಿವೆ. ಇದರಿಂದ ಭೂ ತಾಯೊಗೆ ವಿಷವುಣಿಸುವ ಪ್ರಮಾಣ ಕಡಿಮೆಯಾಗಲಿದ್ದು, ಸಾವಯವ ಕೃಷಿಗೂ ಆದ್ಯತೆ ಸಿಗಲಿದೆ.

ಮಿಸ್ತಿ
ಕೃಷಿ, ನೈಸರ್ಗಿಕ ಅನಿಲದ ಜತೆಗೆ ಅರಣ್ಯೀಕರಕ್ಕೂ ಕಾಳಜಿ ವಹಿಸಿರುವ ಮೋದಿ ಸರ್ಕಾರ ಮಿಸ್ತಿ’ ಮೂಲಕ ಹಸಿರೀಕರಣಕ್ಕೆ ಸಜ್ಜಾಗಿದೆ. ಕರಾವಳಿ ತೀರ ಪ್ರದೇಶದಲ್ಲಿ ಲಭ್ಯ ಇರುವ ಹಾಗೂ ಹಸಿರೀಕರಣಕ್ಕೆ ಅವಕಾಶ ಇರುವ ಪ್ರದೇಶದಲ್ಲಿ ಮ್ಯಾನ್‌ಗ್ರೋವ್‌ (ಉಷ್ಣವಲಯದ ಪೊದೆ) ನೆಡಲು ಆದ್ಯತೆ ನೀಡಲಾಗಿದೆ. ಇದಕ್ಕಾಗಿ ನರೇಗಾ ಹಾಗೂ ಕಾಂಪಾ ಸೇರಿದಂತೆ ಇತರೆ ಯೋಜನೆಗಳ ಮೂಲಕ ಆರ್ಥಿಕ ಹಾಗೂ ಮಾನವ ಸಂಪನ್ಮೂಲ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.

ಅಮೃತ್‌ ಧರೋಹರ್‌
ನಿಸರ್ಗದ ವೈವಿಧ್ಯತೆ ಹೆಚ್ಚಿಸುವಲ್ಲಿ ವಿಶೇಷ ಕೊಡುಗೆ ನೀಡಿರುವ ತೇವ ಭೂಮಿ ಸಂರಕ್ಷಣೆಗೆ ಕಾಳಜಿ ವಹಿಸಿದ್ದು, ಇದಕ್ಕಾಗಿ ಅಮೃತ್‌ ಧರೋಹರ್‌ ಯೋಜನೆ ಘೋಷಿಸಲಾಗಿದೆ. ಪ್ರಧಾನಿ ಮೋದಿ ಇತ್ತೀಚೆಗೆ ತಮ್ಮ ಮನ್‌ ಕೀ ಬಾತ್‌’ನಲ್ಲಿ ಈ ಕುರಿತು ಪ್ರಸ್ತಾಪಿಸಿದ್ದು, ಭಾರತದಲ್ಲಿ ತೇವಭೂಮಿ ಪ್ರದೇಶದ ಸಂಖ್ಯೆ 2014ರಲ್ಲಿ 26ರಷ್ಟಿದ್ದದ್ದು ಈಗ 75ಕ್ಕೆರಿದೆ. ಅವುಗಳ ರಕ್ಷಣೆಗೆ ಆದ್ಯತೆ ನೀಡಬೇಕಿದೆ ಎಂದಿದ್ದರು. ಅದಕ್ಕೆ ಪೂರಕವಾಗಿ ವಿತ್ತ ನೋಟದಲ್ಲಿ ಅಮೃತ್‌ ಧರೋಹರ್‌ ಘೋಷಿಸಿದ್ದು, ಮುಂದಿನ ಮೂರು ವರ್ಷಗಳಲ್ಲಿ ತೇವ ಭೂಮಿ ಸಂರಕ್ಷಣೆ, ಜಾಗೃತಿ, ಪರಿಸರ ಸ್ನೇಹಿ ಪ್ರವಾಸೋದ್ಯಮ, ನೈಸರ್ಗಿಕ ವೈವಿಧ್ಯತೆಗೆ ವಿಶೇಷ ಆದ್ಯತೆ ನೀಡಲು ಆರ್ಥಿಕ ಸಹಕಾರ ನೀಡಲಿದೆ.

ಕರಾವಳಿ ಹಾದಿ ಸುಗಮ
ಕಡಲ ಹಾದಿ ಸರಾಗಗೊಳಿಸಲು ದಿಕ್ಸೂಚಿಯಾಗಿರುವ ಕೇಂದ್ರ ಸರ್ಕಾರ ಇಂಧನ ಕ್ಷಮತೆ, ಕಡಿಮೆ ವೆಚ್ಚದ ಸರಕು ಸಾಗಾಟಕ್ಕೆ ಅನುಕೂಲವಾಗಲು ಪಿಪಿಪಿ ಮಾದರಿಯಲ್ಲಿ ಅನುಷ್ಠಾನ ಮಾಡಲಿದೆ. ಇದರಿಂದ ವ್ಯಾಪಾರ ವಹಿವಾಟು ನಡೆಸುವ ಉದ್ದಿಮೆದಾರರು ಹಾಗೂ ಪ್ರಯಾಣಿಕರಿಗೂ ಸಹಕಾರಿಯಾಗಲಿದೆ. ಆರ್ತೀಕತೆಗೂ ಪರೋಕ್ಷವಾಗಿ ಬಲ ನೀಡಲಿದೆ.

ಹಳೇ ವಾಹನಗಳ ಗುಜರಿ
ಪರಿಸರ ಮಾಲಿನ್ಯಕ್ಕೆ ಹೆಚ್ಚಿನ ಕಾಣಿಕೆ’ ನೀಡುತ್ತಿರುವ ಹಳೇ ವಾಹನಗಳನ್ನು ಗುಜರಿಗೆ ಹಾಕುವ ಕಾಲ ಸನ್ನಿಹಿತವಾಗಿದೆ. ಕಳೆದ ವರ್ಷದ ಬಜೆಟ್‌ನಲ್ಲೇ ಗುಜರಿ ನೀತಿ ಘೋಷಿಸಲಾಗಿದ್ದರೂ ಇದಕ್ಕಾಗಿ ಸಿದ್ಧತೆ ಪೂರ್ಣಗೊಂಡಿರಲಿಲ್ಲ. ಪ್ರಸಕ್ತ ವಿತ್ತ ನೋಟದಲ್ಲಿ ಇದಕ್ಕೆ ಸ್ಪಷ್ಟತೆ ಸಿಕ್ಕಿದ್ದು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಹಳೇ ವಾಹನಗಳ ಗುಜರಿಗೆ ಹಾಕಲು ಅಗತ್ಯ ಅನುದಾನ ನೀಡಲು ನಿರ್ಧರಿಸಲಾಗಿದೆ. ಅಲ್ಲದೇ ಆಯಾ ರಾಜ್ಯ ಸರ್ಕಾರಗಳು ತಮ್ಮ ಅಧೀನದ ಹಳೇ ಸರ್ಕಾರಿ ವಾಹನಗಳನ್ನು ಗುಜರಿ ಹಾಕಲು ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next