ವಾಷಿಂಗ್ಟನ್: ಅಮೆರಿಕದ ಖಾಯಂ ಪೌರತ್ವಕ್ಕೆ ಕಾಯುತ್ತಿದ್ದ ಲಕ್ಷಾಂತರ ಮಂದಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಿಹಿ ಸುದ್ದಿ ನೀಡಿದ್ದಾರೆ. ಅಮೆರಿಕಕ್ಕೆ ಅವರನ್ನು ನಾವು ಸ್ವಾಗತಿಸುತ್ತೇವೆ ಎಂದು ಟ್ರಂಪ್ ಹೇಳಿದ್ದಾರೆ.
ಮೂಲಗಳ ಪ್ರಕಾರ 6 ಲಕ್ಷ ಭಾರತೀಯರು ಗ್ರೀನ್‌ಕಾರ್ಡ್‌ಗಾಗಿ ಕಾಯುತ್ತಿದ್ದಾರೆ. ಕಾನೂನು ಪಾಲಿಸಿಯೇ ಅಮೆರಿಕಕ್ಕೆ ತೆರಳಿದವರನ್ನು ಹಾಗೂ ಅಕ್ರಮವಾಗಿ ವಲಸೆ ಬಂದವರನ್ನು ಒಂದೇ ರೀತಿಯಾಗಿ ಪರಿಗಣಿಸಲಾಗುತ್ತಿತ್ತು. ಹೀಗಾಗಿ, ಕಾನೂನಾತ್ಮಕವಾಗಿ ಅರ್ಜಿ ಸಲ್ಲಿಸಿ ಕಾಯುತ್ತಿರುವ ಲಕ್ಷಾಂತರ ಭಾರತೀಯರಿಗೆ ಇದು ಅನುಕೂಲವಾಗಲಿದೆ.
ಕೆಲವು ಪ್ರತಿಭಾವಂತರು ಹಲವು ವರ್ಷಗಳಿಂದ ಕಾಯುತ್ತಿದ್ದಾರೆ. ಇನ್ನೂ ಕೆಲವರು ದೀರ್ಘಕಾಲದಿಂದ ಕಾಯುತ್ತಿದ್ದಾರೆ. ಅವರು ಎಲ್ಲವನ್ನೂ ಪರಿಪೂರ್ಣವಾಗಿ ಕಾನೂನಾತ್ಮಕವಾಗಿ ಮಾಡಿದ್ದಾರೆ. ಹೀಗಾಗಿ ಅವರಿಗೆ ಗ್ರೀನ್ ಕಾರ್ಡ್ ಸಿಗಲಿದೆ. ಆದರೆ ಇವರೆಲ್ಲರನ್ನೂ ಒಟ್ಟಿಗೆ ಕರೆಸಿಕೊಳ್ಳಲಾಗದು. ಹಂತ ಹಂತವಾಗಿ ಗ್ರೀನ್ ಕಾರ್ಡ್ ನೀಡಲಾಗುತ್ತದೆ. ನಮ್ಮಲ್ಲಿರುವ ಕಂಪೆನಿಗಳಿಗೆ ಕೆಲಸಗಾರರು ಬೇಕಿದೆ. ಹೀಗಾಗಿ ಅವರು ಮೆರಿಟ್ ಆಧಾರದಲ್ಲಿ ಗ್ರೀನ್ ಕಾರ್ಡ್ ಪಡೆಯಲಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ. ಎಲ್ ಸಾಲ್ವಡೋರ್, ಹೊಂಡುರಾಸ್ ಮತ್ತು ಗ್ವಾಟೆಮಾಲಾದಿಂದ ಸುಮಾರು 5 ರಿಂದ 7 ಸಾವಿರ ಅಕ್ರಮ ವಲಸಿಗರು ಅಮೆರಿಕಕ್ಕೆ ಪ್ರವೇಶಿಸಲು ಯತ್ನಿಸುತ್ತಿರುವ ಮಧ್ಯೆಯೇ ಟ್ರಂಪ್ ಈ ಹೇಳಿಕೆ ಮಹತ್ವ ಪಡೆದಿದೆ.
ಎಚ್1ಬಿ ವೀಸಾ ಕಷ್ಟ: ಹೊಸದಾಗಿ ವಿದೇಶದಿಂದ ಕೆಲಸಗಾರರನ್ನು ಕರೆಸಿಕೊಳ್ಳುವ ಕಂಪೆನಿಗಳಿಗೆ ಅಮೆರಿಕ ಹೊಸ ವೀಸಾ ನಿಯಮವನ್ನು ಘೋಷಿಸಿದೆ. ಕಂಪೆನಿಗಳು ಈಗಾಗಲೇ ಎಷ್ಟು ವಿದೇಶಿ ಕೆಲಸಗಾರರನ್ನು ನೇಮಿಸಿಕೊಂಡಿವೆ ಎಂದು ವಿವರ ಸಲ್ಲಿಸಿದ ನಂತರದಲ್ಲೇ ಹೊಸ ಎಚ್1 ಬಿ ವೀಸಾಗೆ ಅನುಮತಿ ನೀಡಲಾಗುತ್ತದೆ.