ಮಾಗಡಿ: ಪಟ್ಟಣದ ಒಳಚರಂಡಿ ನೀರು ಮತ್ತು ತ್ಯಾಜ್ಯ ಪ್ರಸಿದ್ಧ ಭರ್ಗಾವತಿ ಕೆರೆಗೆ ಹರಿಯುತ್ತಿದ್ದು, ಪುರಸಭೆ 25ರೊಳಗೆ ಕೆರೆಗೆ ಹರಿಯುತ್ತಿರುವ ಕಲುಷಿತ ತಡೆದು ಕೆರೆ ಸಂರಕ್ಷಿಸಬೇಕು. ಇಲ್ಲದಿದ್ದರೆ ರಸ್ತೆ ತಡೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಹೊಸಪಾಳ್ಯದ ಲೋಕೇಶ್ ಲಿಖೀತವಾಗಿ ಪುರಸಭೆ ಮುಖ್ಯಾಧಿಕಾರಿ ಎ.ಭಾರತಿ ಅವರಲ್ಲಿ ಮನವಿ ಪತ್ರ ನೀಡಿ ಎಚ್ಚರಿಸಿದ್ದಾರೆ.
ಪಟ್ಟಣದ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಪತ್ರ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಭಾಗದ ಜನಜಾನುವಾರುಗಳಿಗೆ ನೀರು ಕುಡಿಯಲೆಂದು ನಾಡಪ್ರಭು ಕೆಂಪೇಗೌಡರು ತನ್ನ ಪತ್ನಿ ಹೆಸರಿನಲ್ಲಿ ಭರ್ಗಾವತಿ ಕೆರೆಯನ್ನು ಕಟ್ಟಿಸಿದ್ದರು. ಇಂಥ ಪುರಾತನ ಕೆರೆಗೆ ಪಟ್ಟಣದ ಒಳಚರಂಡಿಯ ಕಲುಷಿತ ನೀರು ಮತ್ತು ತ್ಯಾಜ್ಯ ಹರಿಯುತ್ತಿದ್ದು, ಕೆರೆನೀರು ಮತ್ತು ಸುತ್ತಮುತ್ತಲ ಪರಿಸರ ದುರ್ವಾಸನೆಯಿಂದ ಕೂಡಿದೆ.
ಇದನ್ನೂ ಓದಿ;- ನಿಯಮ ಉಲ್ಲಂಘಿಸಿದರೆ ಮೀನು ಪಾಶುವಾರು ಹಕ್ಕು ರದ್ದು: ಪಿಡಿಒ
ಆ ಭಾಗದಲ್ಲಿ ವಾಸಿಸುವ ಬಡ ಜನರು ರೋಗಭಾದೆಗೆ ತುತ್ತಾಗುತ್ತಿದ್ದಾರೆ. ಈ ಸಂಬಂಧ ಈಗಾಗಲೇ ಹಲವು ಭಾರಿ ಶ್ರೀಗಳ ನೇತೃತ್ವದಲ್ಲಿ ಪ್ರತಿಭಟನಾ ಧರಣಿ ನಡೆಸಿ ಪುರಸಭೆ ಮುಖ್ಯಾಧಿಕಾರಿಗಳಿಗೆ ಮತ್ತು ತಹಶೀಲ್ದಾರ್ ಅವರಿಗೂ ಮನವಿ ಪತ್ರವನ್ನು ಸಲ್ಲಿಸಿದ್ದೇವೆ.
ಆದರೂ ಸಹ ಕಲುಷಿತ ನೀರು ತಡೆಯದೆ ನಿರ್ಲಕ್ಷ್ಯ ಮನೋಭಾವ ತೋರುತ್ತಿದೆ. ಕೂಡಲೆ ಪುರಸಭೆ ಮುಖ್ಯಾಧಿಕಾರಿಗಳು ರೈತರ ಸಭೆ ಕರೆದು ಚರ್ಚಿಸಿ ಕ್ರಮ ಕೈಗೊಳ್ಳಬೇಕು ಎಂದು ಹೊಸಪಾಳ್ಯದ ಲೋಕೇಶ್ ಆಗ್ರಹಿಸಿದರು. ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಪಟೇಲ್ ಹನುಮಂತಯ್ಯ, ತಾಲೂಕು ಯುವ ಘಟಕದ ಅಧ್ಯಕ್ಷ ರವಿಕುಮಾರ್, ಷಡಕ್ಷರಿ, ಶಿವಲಿಂಗಯ್ಯ, ಜಯಣ್ಣ, ವೆಂಕಟಪ್ಪ, ಹೊನ್ನೇಗೌಡ, ಬುಡನ್ ಸಾಬ್,ರಾಮಕೃಷ್ಣಯ್ಯ ಇತರರು ಇದ್ದರು.