Advertisement

ಗ್ರೀಸ್‌, ಕ್ರೊಯೇಷಿಯಾ ಸಮರ ಗೆದ್ದ ಬಳಿಕ ಹೊಸ ಸವಾಲು

03:08 PM May 06, 2020 | sudhir |

ಮಣಿಪಾಲ: ಕೋವಿಡ್‌-19 ವೈರಸ್‌ನ ವೇಗವನ್ನು ಅರಂಭದಲ್ಲೇ ಚಿವುಟಿ ಹಾಕಿದ ಕೆಲವು ದೇಶಗಳ ಪೈಕಿ ಗ್ರೀಸ್‌ ಮತ್ತು ಕ್ರೊಯೇಷಿಯಾ ಸಹ ಒಂದು. ದೇಶದಲ್ಲಿ ಲಾಕ್‌ಡೌನ್‌ ಅನ್ನು ಜಾರಿಗೊಳಿಸುವ ಮೂಲಕ ಸೋಂಕು ಹರಡುವಿಕೆಯನ್ನೇ ತಡೆಗಟ್ಟಲಾಯಿತು. ಜನರೂ ಸೂಕ್ತ ರೀತಿಯಲ್ಲಿ ಸ್ಪಂದಿಸಿದರು. ಈ ದೇಶಗಳಿಗೆ ನಿಜವಾದ ಸವಾಲು ಈಗ ಆರಂಭವಾಗಿದೆ. ಪ್ರತಿ ವರ್ಷ ಗ್ರೀಸ್‌ ಮತ್ತು ಕ್ರೊಯೇಷಿಯಾದ ಕರಾವಳಿಯುದ್ದಕ್ಕೂ ಪ್ರವಾಸಿಗರು ತುಂಬಿರುತ್ತಾರೆ. ಬಿಸಲ ಧಗೆಗೆ ಬೇಸತ್ತು ಕಡಲತೀರಗಳು ಮತ್ತು ದ್ವೀಪಗಳಲ್ಲಿ ಜನರು ಕಿಕ್ಕಿರಿದು ತುಂಬಿರುತ್ತಾರೆ.

Advertisement

ಪ್ರತಿವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ಕಾರಣ ಈ ಬಾರಿಯ ಬೇಸಗೆಗೆ ಕೋವಿಡ್ ಆತಂಕ ಶುರುವಾಗಿದೆ. ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿರುವ ಈ ಎರಡೂ ದೇಶಗಳ ಆರ್ಥಿಕತೆಗೆ ಈ ಅವಧಿಯ ಪ್ರವಾಸೋದ್ಯಮ ಬಹಳ ಮುಖ್ಯ. ಆದರೆ ನಿರ್ವಹಿಸುವ ಬಗೆ ಕುರಿತು ಚಿಂತೆ ಆರಂಭವಾಗಿದೆ.

ಈಗ ಕ್ರೊಯೇಷಿಯಾ ಮತ್ತು ಗ್ರೀಸ್‌ ಲಾಕ್‌ಡೌನ್‌ಗಳನ್ನು ಹಿಂದಕ್ಕೆ ಪಡೆಯುತ್ತಿವೆ. ಈಗ ಬೇಸಗೆಗೆ ತಯಾರಾಗಬೇಕು. ಈಗ ವಿದೇಶಿ ಪ್ರವಾಸಿಗರಿಗೆ ಪ್ರವೇಶಕ್ಕೆ ಅನುಮತಿ ಕೊಟ್ಟರೆ ಯಾವ ಸಮಸ್ಯೆ ಉದ್ಭವಿಸಬಹುದು ಎಂಬುದೇ ತಲೆ ನೋವಾಗಿದೆ. ಸಂಪೂರ್ಣ ಲಾಕ್‌ಡೌನ್‌ ಬಳಿಕ ಗ್ರೀಕ್‌ ಆರ್ಥಿಕತೆಯು ಎಂಟು ವರ್ಷಗಳ ಹಿಂದಕ್ಕೆ ಚಲಿಸಿದೆ ಎಂದು ಅಲ್ಲಿನ ಸರಕಾರ ಹೇಳಿದೆ. ಗ್ರೀಕ್‌ನ ಬೊಕ್ಕಸಕ್ಕೆ ಪ್ರವಾಸೋದ್ಯಮವು ಶೇ. 25 ರಷ್ಟು ಆದಾಯ ತರುತ್ತಿದ್ದು, ಐದು ಉದ್ಯೋಗಗಳಲ್ಲಿ ಇದೂ ಒಂದು.

ಆರಂಭಿಕ ಕ್ರಮ
ಕೋವಿಡ್‌ -19 ಸುದ್ದಿ ಚೀನದಿಂದ ಹೊರಬಿದ್ದ ಕೂಡಲೇ ಕ್ರೊಯೇಷಿಯಾ ಎಚ್ಚರಗೊಂಡಿತ್ತು. ಜನವರಿ ಅಂತ್ಯದಲ್ಲಿ ವುಹಾನ್‌ನಿಂದ ಪ್ರವಾಸಿಗರು ಆಗಮಿಸುವ ಮೊದಲೇ ಅಲ್ಲಿನ ಆರೋಗ್ಯ ಇಲಾಖೆ ಮಾರ್ಗಸೂಚಿಗಳನ್ನು ಪ್ರಕಟಿಸಿತ್ತು. ಡಾಲ್ಮೇಷಿಯನ್‌ ಕರಾವಳಿಯಲ್ಲಿ ಪೆರ್ಲೆಸಾಕ್‌ ಸೇತುವೆಯ ನಿರ್ಮಾಣ ಕಾರ್ಯದಲ್ಲಿ ಚೀನದ ಕಾರ್ಮಿಕರು ತೊಡಗಿಕೊಂಡಿದ್ದರು. ಇದಕ್ಕಾಗಿ ಆರಂಭದಲ್ಲೇ ಕ್ರೊಯೇಷಿಯಾ ಎಚ್ಚರವಹಿಸಿತ್ತು.

ಗ್ರೀಸ್‌ ಸರಕಾರವೂ ಸೋಂಕು ಪತ್ತೆಯಾಗುವ ಮೊದಲು ವೈರಾಲಜಿಸ್ಟ್‌ಗಳು ಮತ್ತು ಸಾಂಕ್ರಾಮಿಕ ರೋಗ ತಜ್ಞರುಳ್ಳ ತಾತ್ಕಾಲಿಕ ವೈಜ್ಞಾನಿಕ ಸಮಿತಿ ರಚಿಸಿತ್ತು. ಅದಕ್ಕೆ ರೋಗದ ನಿರ್ವಹಣೆ ಮತ್ತು ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿತ್ತು.

Advertisement

ಇಟಲಿ ಮತ್ತು ಇಂಗ್ಲೆಂಡಿನಲ್ಲಿ ವೈರಸ್‌ ಪತ್ತೆಯಾದ ಒಂದು ತಿಂಗಳ ಬಳಿಕ ಕ್ರೊಯೇಷಿಯಾದಲ್ಲಿ ಮೊದಲ ಕೋವಿಡ್‌ ಪ್ರಕರಣವು ಫೆಬ್ರವರಿ 25ರಂದು ಬೆಳಕಿಗೆ ಬಂತು. ಈ ಸೋಂಕಿತ ಇಟಲಿಯ ಮಿಲನ್‌ನಲ್ಲಿ 6 ದಿನಗಳ ಕಾಲ ಇದ್ದು ಬಂದಿದ್ದ. ಗ್ರೀಸ್‌ನಲ್ಲಿನ ಮೊದಲ ದೃಢ ಪ್ರಕರಣ ಫೆಬ್ರವರಿ 26ರಂದು ಪತ್ತೆಯಾಗಿತ್ತು. ಎರಡೂ ಕೂಡಲೇ ಎರಡೂ ದೇಶಗಳು ವಾರಗಳ ಅವಧಿಯಲ್ಲಿ ಕಠಿನ ನಿರ್ಬಂಧಗಳನ್ನು ಒಳಗೊಂಡ ಲಾಕ್‌ಡೌನ ಜಾರಿಗೊಳಿಸಲಾಯಿತು. ಅಗತ್ಯ ಕೆಲಸಕ್ಕಾಗಿ, ಆಹಾರ ಸಾಮಗ್ರಿಗಳ ಖರೀದಿ, ವಾಕಿಂಗ್‌ಗೆ ಮಾತ್ರ ಅನುಮತಿ ನೀಡಲಾಗಿತ್ತು.

ಕ್ರೊಯೇಷಿಯಾದಲ್ಲಿ ಲಾಕ್‌ಡೌನ್‌ ಜತೆಗೆ ಎರಡು ವಾರಗಳ ಬಳಿಕ 18 ದೇಶಗಳಿಂದ ಆಗಮಿಸಿದ್ದವರನ್ನು ಕ್ವಾರಂಟೇನ್‌ಗೆ ಒಳಪಡಿಸಿತ್ತು. ಹೆಚ್ಚಿನ ವಾಣಿಜ್ಯ ಚಟುವಟಿಕೆಗಳು ಮಾರ್ಚ್‌ ಮೂರನೇ ವಾರದಲ್ಲಿ ಬಂದ್‌ ಆಗಿದ್ದವು. ಮಾರ್ಚ್‌ 23ರ ಬಳಿಕ ಇ-ಪಾಸ್‌ ಪಡೆದು ಪ್ರಯಾಣಿಸಲು ಅನುಮತಿಸಲಾಗಿತ್ತು. ಗ್ರೀಕ್‌ನಲ್ಲಿ ಲಾಕ್‌ಡೌನ್‌ ಉಲ್ಲಂಘಿಸಿದ 60,000ಕ್ಕೂ ಹೆಚ್ಚು ಪ್ರಕರಣಗಳಿಗೆ ದಂಡ ವಿಧಿಸಲಾಗಿತ್ತು. ಕ್ರೊಯೇಷಿಯಾದಲ್ಲಿನ ಸಾವಿನ ಪ್ರಮಾಣ ಮಿಲಿಯನ್‌ಗೆ 18 ಮಂದಿ ಇದ್ದರೆ, ಗ್ರೀಸ್‌ನಲ್ಲಿ 13ರಷ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next