ಬೆಂಗಳೂರು: ಶ್ರೇಷ್ಠರೆಲ್ಲಾ ಜನಪ್ರಿಯರಲ್ಲ, ಜನಪ್ರಿಯರೆಲ್ಲಾ ಶ್ರೇಷ್ಠರಾಗಿರುವುದಿಲ್ಲ. ಜನಪ್ರಿಯತೆ ಅಗ್ಗದ ಪ್ರಚಾರದಿಂದಲೂ ಬರಬಹುದು. ಆದರೆ, ಶ್ರೇಷ್ಠತೆ ಬರುವುದಿಲ್ಲ ಎಂದು ಎಂದು ಹಿರಿಯ ಸುಗಮ ಸಂಗೀತ ಗಾಯಕ ವೈ.ಕೆ.ಮುದ್ದುಕೃಷ್ಣ ಅಭಿಪ್ರಾಯಪಟ್ಟರು.
ಸಾಹಿತ್ಯ ದಾಸೋಹ ವೇದಿಕೆ, ನಗರದ ಬಿ.ಪಿ.ವಾಡಿಯಾ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಲೇಖಕಿ ರತ್ನಾ ಮೂರ್ತಿ ಅವರ “ಭೂಮಿ ಗ್ರಹಣ’, “ಗೌರಮ್ಮನ ವಚನಗಳು’ ಮತ್ತು “ಕೀಲಿ ಕೈಯನು ತಾರೆ ಕೀಲಿ ಕೈಯ’ ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ನಮ್ಮ ನಡುವೆ ಹಲವು ಲೇಖಕಿಯರು ಎಲೆಮರೆ ಕಾಯಿಯಂತೆ ಇದ್ದು, ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡಿದ್ದಾರೆ. ಅಂತಹ ಲೇಖಕಿಯರನ್ನು ಗುರುತಿಸಿ ಗೌರವಿಸುವ ಕೆಲಸ ನಡೆಯಬೇಕಾಗಿದೆ. ಪ್ರತಿಭೆಯನ್ನು ಬರವಣಿಗೆ ಮೂಲಕ ಹೊರಹಾಕುವುದು ವ್ಯಕ್ತಿಯ ಶ್ರೇಷ್ಠತೆಯನ್ನು ಬಿಂಬಿಸುತ್ತದೆ ಎಂದರು.
ಕಾವ್ಯ ರಚನೆ ಯಾವಾಗಲು ಸರಳವಿರಬೇಕು. ಹೀಗಿದ್ದಾಗ ಮಾತ್ರ ಅವುಗಳು ಹೆಚ್ಚು ಹೆಚ್ಚು ಓದುಗರನ್ನು ತಲುಪುತ್ತವೆ. ಉತ್ತಮವಾದ ಕಾವ್ಯ ರಚನೆ ಶಕ್ತಿ ಹೊಂದಿರುವ ರತ್ನಾ ಮೂರ್ತಿ ಅವರು ಶ್ರೇಷ್ಠ ಕೃತಿಗಳನ್ನು ರಚಿಸಿದ್ದಾರೆ. ಸುಮಾರು 28 ಕೃತಿಗಳನ್ನು ರಚಿಸಿದರೂ ಅವರ ಕಾವ್ಯ ಸೇವೆಯನ್ನು ಗುರುತಿಸದೇ ಇರುವುದು ಬೇಸರದ ಸಂಗತಿ. ಮುಂದಿನ ದಿನಗಳಲ್ಲಿ ರತ್ನಾ ಅವರು ಸಾಹಿತ್ಯ ಕ್ಷೇತ್ರದಲ್ಲಿ ಮತ್ತಷ್ಟು ಹೆಸರು ಮಾಡಲಿ ಎಂದು ಆಶಿಸಿದರು.
ವೇದ ವಿದ್ವಾಂಸ ಡಾ.ರ.ವಿ.ಜಹಾಗಿರ್‌ದಾರ್ ಮಾತನಾಡಿ, ಸಮಾಜದಲ್ಲಿ ಪುಸ್ತಕಗಳಿಗೆ ವಿಶೇಷವಾದ ಸ್ಥಾನವಿದೆ. ಅದರಲ್ಲೂ ರತ್ನಾ ಮೂರ್ತಿಯವರ “ಗೌರಮ್ಮನ ವಚನ’ ರೀತಿಯ ಪುಸ್ತಕಗಳಿಗೆ ಹೆಚ್ಚು ಮನ್ನಣೆ ಇದೆ. ಅವರ ಪುಸ್ತಕಗಳು ಓದುತ್ತಿದ್ದರೆ ಆಪ್ತತೆ ಹೆಚ್ಚಾಗುತ್ತದೆ ಎಂದರು.
ಕೆಲವು ಶಾಲೆ, ಕಾಲೇಜುಗಳ ಗ್ರಂಥಾಲಯದಲ್ಲಿ ಇನ್ನೂ ಕೂಡ ಗಾಂಧೀಜಿ ಅವರ ಕುರಿತಾದ ಪುಸ್ತಕಗಳು ಇಲ್ಲ. ಇಂತಹ ಹಲವು ಮಹನೀಯರ ಪುಸ್ತಕಗಳನ್ನು ಶಾಲೆ, ಕಾಲೇಜುಗಳ ಗ್ರಂಥಾಲಯಗಳಿಗೆ ತಲುಪಿಸುವ ಕೆಲಸ ನಡೆಯಬೇಕಾಗಿದೆ ಎಂದು ಹೇಳಿದರು. ನಿವೃತ್ತ ಡಿಜಿಪಿ ಕೆ.ವಿ.ರವೀಂದ್ರನಾಥ ಠ್ಯಾಗೋರ್, ಲೇಖಕಿ ರತ್ನಾ ಮೂರ್ತಿ, ಗಮಕಿ ಡಾ.ಎಂ.ಆರ್.ಸತ್ಯನಾರಾಯಣ, ಸೀತಾರಾಮ ಹೆಗೆಡೆ ಉಪಸ್ಥಿತರಿದ್ದರು.