Advertisement

ಇಂದಿನಿಂದ ಗ್ರೇಟರ್‌ ನೋಯ್ಡಾ ಹಣಾಹಣಿ

08:35 PM Oct 04, 2019 | Team Udayavani |

ಗ್ರೇಟರ್‌ ನೋಯ್ಡಾ (ಯುಪಿ): ಪ್ರೊ ಕಬಡ್ಡಿ 7ನೇ ಆವೃತಿಯ ಕೊನೆಯ ಲೀಗ್‌ ಚರಣಕ್ಕೆ ಗ್ರೇಟರ್‌ ನೋಯ್ಡಾ ಸಜ್ಜಾಗಿದೆ. ಶನಿವಾರದಿಂದ ಇಲ್ಲಿ ಕಬಡ್ಡಿ ಹಣಾಹಣಿ ತೀವ್ರಗೊಳ್ಳಲಿದೆ. ಇದು ಪ್ಲೇ-ಆಫ್ ಹೊಸ್ತಿಲಲ್ಲಿ ನಿಂತಿರುವ ಯುಪಿ ಯೋಧಾಗೆ ತವರು ಮುಖಾಮುಖೀ ಆಗಿರುವುದು ವಿಶೇಷ. ಇಲ್ಲಿ ಯುಪಿ 4 ಪಂದ್ಯಗಳನ್ನು ಆಡಲಿದ್ದು, ಒಂದರಲ್ಲಿ ಗೆದ್ದರೂ ಅಧಿಕೃತವಾಗಿ ಪ್ಲೇ-ಆಫ್ ಪ್ರವೇಶಿಸಲಿದೆ. ಮೊದಲ ಪಂದ್ಯದಲ್ಲಿ ಯುಪಿ ಎದುರಾಳಿ ಅಂಕಪಟ್ಟಿಯ ಅಗ್ರಸ್ಥಾನಿ ದಬಾಂಗ್‌ ಡೆಲ್ಲಿ.

Advertisement

ಈಗಾಗಲೇ ಡೆಲ್ಲಿ, ಬೆಂಗಾಲ್‌, ಹರ್ಯಾಣ, ಬೆಂಗಳೂರು, ಮುಂಬಾ ತಂಡಗಳು ಪ್ಲೇ-ಆಫ್ ಸುತ್ತಿಗೆ ಏರಿವೆ. ಉಳಿದ ಒಂದು ಸ್ಥಾನಕ್ಕೆ ಜೈಪುರ ಮತ್ತು ಯೋಧಾ ತಂಡಗಳ ನಡುವೆ ಪೈಪೋಟಿ ಇದ್ದಂತೆ ಕಂಡುಬರುತ್ತದೆ. ಆದರೆ ಯೋಧಾ ತವರಿನಲ್ಲಿಯೇ ಆಡುವುದರಿಂದ ಗರಿಷ್ಠ ಅವಕಾಶ ಹೊಂದಿದೆ. ಜೈಪುರ ಮುಂದಿರುವುದು 2 ಪಂದ್ಯ ಮಾತ್ರ. ಇತ್ತಂಡಗಳ ನಡುವೆ 6 ಅಂಕಗಳ ಅಂತರವಿದೆ. ಜೈಪುರ ಒಂದು ಪಂದ್ಯದಲ್ಲಿ ಸೋತರೂ ಕೂಟದಿಂದ ಹೊರಬೀಳಲಿದೆ.

ಡೆಲ್ಲಿ ದಬಾಂಗ್‌ ಬಲಿಷ್ಠ
ಡೆಲ್ಲಿ ತಂಡ ಎಲ್ಲ ವಿಭಾಗದಲ್ಲೂ ಬಲಿಷ್ಠವಾಗಿದೆ. ಆಡಿದ 20 ಪಂದ್ಯಗಳಲ್ಲಿ ಕೇವಲ ಮೂರನ್ನಷ್ಟೆ ಸೋತಿದೆ. ಕ್ವಿಕ್‌ ರೈಡಿಂಗ್‌ ಸ್ಟಾರ್‌ ಎಂದೇ ಖ್ಯಾತಿ ಪಡೆದ ನವೀನ್‌ ಕುಮಾರ್‌ ಡೆಲ್ಲಿ ತಂಡದ ಶಕ್ತಿ ಆಗಿದ್ದಾರೆ. ನವೀನ್‌ಗೆ ಬೆಂಬಲವಾಗಿ ಚಂದ್ರನ್‌ ರಂಜೀತ್‌ ಕೂಡ ರೈಡಿಂಗ್‌ನಲ್ಲಿ ಸಾಥ್‌ ನೀಡುತ್ತಿದ್ದಾರೆ. ಹೀಗಾಗಿ ಡೆಲ್ಲಿ ರೈಡಿಂಗ್‌ ವಿಭಾಗ ಹೆಚ್ಚು ಬಲಿಷ್ಠ. ರಕ್ಷಣಾ ವಿಭಾಗದಲ್ಲಿ ಅನುಭವಿ ಆಟಗಾರರಾದ ಜೋಗಿಂದರ್‌ ಸಿಂಗ್‌, ವಿಶಾಲ್‌ ಮಾನೆ, ರವೀಂದ್ರ ಪೆಹಲ್‌ ಎದುರಾಳಿಗನ್ನು ಕಟ್ಟಿಹಾಕುವಲ್ಲಿ ಸಮರ್ಥರಾಗಿದ್ದಾರೆ.

ಯುಪಿ ಯೋಧಾಗೆ ತವರಿನ ಲಾಭ
ಯುಪಿ ಯೋಧಾದಲ್ಲಿ ಸ್ಟಾರ್‌ ಆಟಗಾರ ದಂಡೇ ಇದೆ. ಆದರೆ ಯಾರೂ ನಿರ್ದಿಷ್ಟವಾಗಿ ಗುರುತಿಸಿಕೊಳ್ಳಲಿಲ್ಲ. ಸೀಸನ್‌ನ ಆರಂಭದಲ್ಲಿ ಹೇಳಿಕೊಳ್ಳುವಂತ ಆಟವನ್ನೂ ಪ್ರದರ್ಶಿಸಿರಲಿಲ್ಲ. ಆದರೀಗ ಸುಸ್ಥಿತಿಯಲ್ಲಿದೆ. ಶನಿವಾರ ಡೆಲ್ಲಿ ಸವಾಲು ಯುಪಿಗೆ ಕಠಿನವಾಗಿರುವುದರಲ್ಲಿ ಅನುಮಾನವಿಲ್ಲ. ಆದರೆ ತವರಿನ ಲಾಭವೆತ್ತುವ ಅವಕಾಶ ಯುಪಿ ಪಾಲಿಗಿದೆ.

Advertisement

Udayavani is now on Telegram. Click here to join our channel and stay updated with the latest news.

Next