ಬಂಗಾರಪೇಟೆ: ತಾಲೂಕಿನ ಕಣಿಂಬೆಲೆಗೆ ಗ್ರಾಮ ವಿಕಾಸ ಯೋಜನೆಯಡಿ ಹೆಚ್ಚಿನ ಸೌಲಭ್ಯ ಒದಗಿಸಲು ಕ್ರಮಕೈಗೊಳ್ಳುವುದಾಗಿ ಶಾಸಕ ಎಸ್.ಎನ್.ನಾರಾಯಣ ಸ್ವಾಮಿ ಭರವಸೆ ನೀಡಿದರು.
ತಮ್ಮನ್ನು ಭೇಟಿ ಮಾಡಿದ ಗ್ರಾಮದ ಮುಖಂಡರಿಂದ ಸನ್ಮಾನ ಸ್ವೀಕರಿಸಿ, ಅವರು ನೀಡಿದ ಮನವಿಗೆ ಸ್ಪಂದಿಸಿದಶಾಸಕರು, ಪಟ್ಟಣಕ್ಕೆ ಹೊಂದಿಕೊಂಡಿರುವ ಕಣಿಂಬೆಲೆ ಗ್ರಾಮವು ಕಳೆದ ಐದು ವರ್ಷಗಳ ಹಿಂದೆ ತೀರಾ ಹಿಂದುಳಿದಿತ್ತು. ಇದನ್ನು ಗಮನಿಸಿ ಗ್ರಾಮ ವಿಕಾಸ ಯೋಜನೆ ಮೂಲಕ ಸಮಗ್ರವಾಗಿ ಅಭಿವೃದ್ಧಿಪಡಿಸಲಾಗಿದೆ ಎಂದರು.
ಗ್ರಾಮದಲ್ಲಿ ಪ್ರತಿಯೊಂದು ರಸ್ತೆಗೂ ಕಾಂಕ್ರೀಟ್, ಚರಂಡಿ ನಿರ್ಮಾಣ ಮಾಡಲಾಗಿದೆ. ಹೊಸದಾಗಿ ಕೊಳವೆಬಾವಿ ಕೊರೆಯಿಸಿ, ಪ್ರತಿ ಮನೆಗೂ ನಲ್ಲಿ ಹಾಕಿಸಿ, ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಶಾಲೆ, ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.
ಗ್ರಾಮದಲ್ಲಿ ಬೀದಿ ದೀಪ ಹಾಗೂ ಗ್ರಾಮದ ಮಧ್ಯೆ 7 ಲಕ್ಷ ರೂ. ವೆಚ್ಚದಲ್ಲಿ ಹೈಮಾಸ್ಟ್ ಲೈಟ್ ಹಾಕಿಸಲಾಗಿದೆ.ಬಂಗಾರಪೇಟೆ-ಸೂಲಿಕುಂಟೆ ಮಾರ್ಗದ ಮಧ್ಯೆ ಬರುವ ರಸ್ತೆಗೆ ಡಾಂಬರೀಕರಣ ಮಾಡಲಾಗಿದೆ. ಶುದ್ಧ ನೀರಿನ ಘಟಕ ನಿರ್ಮಾಣ ಮಾಡಲಾಗಿದೆ. ವಸತಿ ಯೋಜನೆಯಡಿ ನಿರಾಶ್ರಿತರಿಗೆ ಮನೆ ಮಂಜೂರು ಮಾಡಿಸಲಾಗಿದೆ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿಚ್ಚಹಳ್ಳಿ ಗೋವಿಂದರಾಜ್, ಐನೋರಹೊಸಹಳ್ಳಿ ಗ್ರಾಪಂ ಉಪಾಧ್ಯಕ್ಷೆ ಕವಿತಾ ಹನುಮಪ್ಪ, ರಾಜಪ್ಪ, ಮುಂತಾದವವರು ಇದ್ದರು.