ಸುಬ್ರಹ್ಮಣ್ಯ: ಆಟಿ ತಿಂಗಳು ಎನ್ನುವುದು ಕಷ್ಟದ ದಿನಗಳು. ಪೂರ್ವಿಕರು ಭತ್ತ ಬೇಸಾಯ ಸಹಿತ ಕೃಷಿ ಚಟುವಟಿಕೆಗಳನ್ನು ಮುಗಿಸಿ ಕೃಷಿಕರು ವಿಶ್ರಾಂತಿ ಪಡೆಯುವ ತಿಂಗಳು ಕೂಡ ಆಟಿ ತಿಂಗಳು. ಅತ್ಯಂತ ವಿಭಿನ್ನ ಸಂಸ್ಕೃತಿ ಸಂಪ್ರದಾಯಗಳನ್ನು ಹೊಂದಿರುವ ತುಳುನಾಡಿನಲ್ಲಿ ಆಟಿ ತಿಂಗಳ ಆಚರಣೆಗೆ ಬಹಳಷ್ಟು ಮಹತ್ವವಿದೆ ಎಂದು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಜಾಕೆ ಮಾಧವ ಗೌಡ ಹೇಳಿದರು.
ಕರ್ನಾಟಕ ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಡಿಕೇರಿ ವತಿಯಿಂದ ಜೇಸಿಐ ಪಂಜ ಪಂಚಶ್ರೀ, ಗೌಡರ ಯುವ ಸೇವಾ ಸಂಘ ಸುಳ್ಯ, ಗ್ರಾಮ ಗೌಡ ಸಮಿತಿ ಇದರ ಸಹಕಾರದಲ್ಲಿ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ರವಿವಾರ ನಡೆದ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯಲಿ ಆಟಿ ಗೌಜಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಆಟಿ ತಿಂಗಳು ಕಾಯಿಲೆಗೆ ತುತ್ತಾ ಗುವ ಕಾಲ. ಈ ಅವಧಿಯಲ್ಲಿ ಔಷಧೀಯ ಸಸ್ಯಗಳಲ್ಲಿ ರೋಗ ನಿರೋಧಕ ಶಕ್ತಿ ಇರುವುದರಿಂದ ಇಂತಹ ಆಹಾರಗಳ ಸೇವನೆಯನ್ನು ಹಿರಿಯರು ಸೇವಿಸುತ್ತಿದ್ದರು ಎಂದರು.
ಅರೆಭಾಷೆ ಅಕಾಡೆಮಿ ಅಧ್ಯಕ್ಷ ಪಿ.ಸಿ. ಜಯರಾಮ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿ.ಪಂ. ಸದಸ್ಯ ಮನ್ಮಥ ಎಸ್.ಎನ್., ತಾ.ಪಂ. ಸದಸ್ಯ ಅಬ್ದುಲ್ ಗಫೂರ್, ಪಂಜ ಗ್ರಾ.ಪಂ. ಅಧ್ಯಕ್ಷ ಕಾರ್ಯಪ್ಪ ಚಿದ್ಗಲ್, ನಿವೃತ್ತ ಶಿಕ್ಷಕಿ ಗಿರಿಜ ಕೆದಿಲ, ಪಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ಡಾ| ದೇವಿಪ್ರಸಾದ್ ಕಾನತ್ತೂರು, ಕಾರ್ಯ ಕ್ರಮ ಸಂಯೋಜಕ ಅಕಾಡೆಮಿ ಸದಸ್ಯ ದಿನೇಶ್ ಹಾಲೆ ಮಜಲು, ಸಂಯೋಜಕರಾದ ದೊಡ್ಡಣ್ಣ ಬರಮೇಲು, ವಾಸುದೇವ ಮೇಲ್ಪಾಡಿ, ಪರಮೇಶ್ವರ ಬಿಳಿಮಲೆ ಹಾಗೂ ಕಾರ್ಯ ಕ್ರಮದ ಸಂಯೋಜಕ ರೆಲ್ಲರೂ ಉಪಸ್ಥಿತರಿದ್ದರು. ಅರೆಭಾಷೆ ಅಕಾಡೆಮಿ ರಿಜಿಸ್ಟಾರ್ ಚಂದ್ರಹಾಸ ರೈ ಸ್ವಾಗತಿಸಿ, ಪ್ರಸ್ತಾವನ ಗೈದರು. ಶಶಿಧರ ಪಳಂಗಾಯ ನಿರೂಪಿಸಿದರು.
ನೆಲದ ಸಂಸ್ಕೃತಿ
ಮೈಸೂರು ದೊಡ್ಡರವಲಿಂಗ ಸ.ಪ.ಪೂ. ಕಾಲೇಜು ಉಪನ್ಯಾಸಕ ಡಾ| ಪಟ್ಟಡ ಶಿವಕುಮಾರ್ ಮಾತನಾಡಿ, ತುಳುನಾಡಿನಲ್ಲಿ ಪ್ರಕೃತಿಯ ಬದಲಾವಣೆಗೆ ಅನುಗುಣವಾಗಿ ಆಷಾಢ ಮಾಸವನ್ನು ಆಚರಿಸುತ್ತಾರೆ. ಆಟಿ ಆಚರಣೆ ಎಂದರೆ ನಮ್ಮ ನೆಲದ ಸಂಸ್ಕೃತಿ ಪರಿಚಯದ ಜತೆಗೆ ಮುಂದಿನ ತಲೆಮಾರಿಗೆ ಉಳಿಸುವುದಕ್ಕಾಗಿದೆ ಎಂದರು.